ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಕಾಂಗ್ರೆಸ್‌ನಲ್ಲಿ ಹಲವರ ಪೈಪೋಟಿ, ಹಾಲಿ ಶಾಸಕರಿಗೂ ಇಲ್ಲ ಟಿಕೆಟ್‌ ಖಚಿತ

ವಿಧಾನಸಭೆ ಚುನಾವಣೆ 2023
Last Updated 3 ಫೆಬ್ರುವರಿ 2023, 9:27 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಚುನಾವಣೆಯ ಕಾವು ಹೆಚ್ಚಾಗಿದೆ. ಅಭ್ಯರ್ಥಿಗಳು ಟಿಕೆಟ್‌ಗಾಗಿ ತೀವ್ರ ಕಸರತ್ತು ಪ್ರಾರಂಭಿಸಿದ್ದಾರೆ.

ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಬಿಜೆಪಿ ಪುನಃ ಈ ಕ್ಷೇತ್ರವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆಂಬ ಲೆಕ್ಕಾಚಾರದಲ್ಲಿ ತೊಡಗಿದೆ. ಕಾಂಗ್ರೆಸ್‌ ಕ್ಷೇತ್ರವನ್ನು ತನ್ನ ವಶಕ್ಕೆ ಪಡೆಯಲು ಹವಣಿಸುತ್ತಿದೆ. ಜೆಡಿಎಸ್‌, ಕೆಆರ್‌ಎಸ್‌, ಎಎಪಿ ಸೇರಿದಂತೆ ಪಕ್ಷೇತರರು ಕೂಡ ಇದರ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ, ಪಂಪ ವಿರೂಪಾಕ್ಷನ ಆಶೀರ್ವಾದ ಯಾರ ಮೇಲಿರುತ್ತದೆ ಕಾದು ನೋಡಬೇಕಿದೆ.

ಬಿಜೆಪಿಯಲ್ಲಿ ಏನಾಗುತ್ತಿದೆ?: ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಆನಂದ್‌ ಸಿಂಗ್‌ ಪ್ರವಾಸೋದ್ಯಮ ಸಚಿವರೂ ಹೌದು. 2008ರಿಂದ ಕ್ಷೇತ್ರದಲ್ಲಿ ಸತತವಾಗಿ ನಾಲ್ಕು ಸಲ ಜಯ ಗಳಿಸಿದ್ದಾರೆ. 2008, 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದರು. 2018ರಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡು ಆ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು. ಒಂದು ವರ್ಷ ಕಳೆಯುವುದರೊಳಗೆ ಪುನಃ ಬಿಜೆಪಿ ಸೇರಿ, 2019ರ ಉಪಚುನಾವಣೆಯಲ್ಲಿ ಕಮಲ ಚಿಹ್ನೆಯಿಂದ ಸ್ಪರ್ಧಿಸಿ ಗೆದ್ದಿದ್ದರು. ಮತ್ತೆ ಬಿಜೆಪಿಯಿಂದ ಸ್ಪರ್ಧಿಸುವ ಬಯಕೆ ಹೊಂದಿದ್ದಾರೆ. ಆದರೆ, ಇದುವರೆಗೆ ಪಕ್ಷದ ಟಿಕೆಟ್‌ ಯಾರಿಗೆ ಎನ್ನುವುದು ಖಚಿತಗೊಂಡಿಲ್ಲ.

ಕೆಲ ತಿಂಗಳ ಹಿಂದಿನ ವರೆಗೆ ಬಿಜೆಪಿಯಲ್ಲಿ ಆನಂದ್‌ ಸಿಂಗ್‌ ಬಿಟ್ಟರೆ ಬೇರೊಬ್ಬರ ಹೆಸರು ಚಾಲ್ತಿಯಲ್ಲಿ ಇರಲಿಲ್ಲ. ಆದರೆ, ಕಳೆದೊಂದು ತಿಂಗಳಿಂದ ಬಿಜೆಪಿ ನಾಯಕಿ ರಾಣಿ ಸಂಯುಕ್ತಾ ಅವರ ಹೆಸರು ಮುಂಚೂಣಿಗೆ ಬಂದಿದೆ. ಮೂಲಗಳ ಪ್ರಕಾರ, ‘ಮುಂದಿನ ಚುನಾವಣೆಯಲ್ಲಿ ನಿಮಗೆ ಟಿಕೆಟ್‌ ನೀಡಲಾಗುವುದು. ನೀವು ಬೇಕಾದ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಕೇಂದ್ರ ಬಿಜೆಪಿಯ ಹಿರಿಯ ಮುಖಂಡರೊಬ್ಬರು ರಾಣಿ ಸಂಯುಕ್ತಾ ಅವರಿಗೆ ತಿಳಿಸಿದ್ದಾರೆ. ಹೀಗಾಗಿಯೇ ಅವರು ಅತ್ಯುತ್ಸಾಹದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಗೊತ್ತಾಗಿದೆ.

ಇನ್ನು, ಆನಂದ್‌ ಸಿಂಗ್‌ ಅವರು ತನ್ನ ಬದಲಿಗೆ ಮಗನಿಗೆ ಟಿಕೆಟ್‌ ಕೇಳಿದ್ದಾರೆ. ಆದರೆ, ಪಕ್ಷ ಅದನ್ನು ನಿರಾಕರಿಸಿದೆ ಎಂದು ಪಕ್ಷದ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಾತುಗಳು. ಸ್ವತಃ ಅವರಿಗೂ ಟಿಕೆಟ್‌ ಭರವಸೆ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ನಡೆದ ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿ ಶೇ 90ರಷ್ಟು ಹಾಲಿ ಶಾಸಕರಿಗೆ ಕೊಕ್‌ ನೀಡಿತ್ತು. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಚುನಾವಣೆ ಮಾಡಿದರೆ ಹಾಲಿ ಶಾಸಕರಿಗೆ ಟಿಕೆಟ್‌ ಸಿಗುವುದು ಕಷ್ಟವೆಂದು ಹೇಳಲಾಗುತ್ತಿದೆ. ಇಬ್ಬರು ಮುಖಂಡರನ್ನು ಸಂಪರ್ಕಿಸಿದಾಗ ಮಾಹಿತಿಗೆ ಲಭ್ಯರಾಗಲಿಲ್ಲ.

ಕಾಂಗ್ರೆಸ್‌ನಲ್ಲೂ ಪೈಪೋಟಿ: ಶೀಘ್ರದಲ್ಲೇ 130 ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗುವುದು ಎಂದು ಪಕ್ಷ ಘೋಷಿಸಿದ ಬೆನ್ನಲ್ಲೇ ಹಲವು ಮುಖಂಡರು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ನವದೆಹಲಿ, ಬೆಂಗಳೂರಿಗೆ ಓಡಾಡಿ, ನಾಯಕರ ಮನವೊಲಿಸಿ ಟಿಕೆಟ್‌ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ.

ಕಾಂಗ್ರೆಸ್‌ ಟಿಕೆಟ್‌ ಕೋರಿ 12 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಪ್ರಮುಖವಾಗಿ ಕೆಲವರ ಹೆಸರುಗಳು ಮುಂಚೂಣಿಯಲ್ಲಿವೆ. ಮಾಜಿಶಾಸಕ ಎಚ್‌.ಆರ್‌. ಗವಿಯಪ್ಪ, ಮುಖಂಡರಾದ ರಾಜಶೇಖರ್‌ ಹಿಟ್ನಾಳ್‌, ಸಿರಾಜ್‌ ಶೇಖ್‌, ಮಹಮ್ಮದ್‌ ಇಮಾಮ್‌ ನಿಯಾಜಿ, ಸೈಯ್ಯದ್‌ ಮಹಮ್ಮದ್‌ ಪ್ರಮುಖರು. ಇದರಲ್ಲೂ ಗವಿಯಪ್ಪ ಅಥವಾ ಹಿಟ್ನಾಳ್‌ ಅವರಿಗೆ ಟಿಕೆಟ್‌ ಸಿಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಎರಡೂವರೆ ಲಕ್ಷ ಮತದಾರರು; ಜಾತಿ ಲೆಕ್ಕಾಚಾರ: 2019ರ ಉಪಚುನಾವಣೆಯಲ್ಲಿ 2,36,154 ಜನ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡಿದ್ದರು. ಈ ಚುನಾವಣೆ ಘೋಷಣೆಗೂ ಮುನ್ನ ಈ ಸಂಖ್ಯೆ ಎರಡೂವರೆ ಲಕ್ಷ ದಾಟುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ಷೇತ್ರದಲ್ಲಿ ಮುಸ್ಲಿಂರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕುರುಬರು, ಲಿಂಗಾಯತರು, ಬ್ರಾಹ್ಮಣರು ಹಾಗೂ ಇತರೆ ಹಿಂದುಳಿದ ವರ್ಗದ ಮತದಾರರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT