ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ | ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಹುದ್ದೆ ಮಾರಾಟ: ಸುರ್ಜೆವಾಲಾ ಆರೋಪ

Last Updated 4 ಮಾರ್ಚ್ 2023, 16:19 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಬಿಜೆಪಿ ಸರ್ಕಾರ ಹುದ್ದೆಗಳನ್ನು ಮಾರಾಟ ಮಾಡುತ್ತಿದೆ’ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ ಆರೋಪಿಸಿದರು.

ನಗರದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಲೇಜು, ವಿಶ್ವವಿದ್ಯಾಲಯಗಳಿಗೆ ಹೋಗಿ ಪದವಿ ಪಡೆಯಬೇಕಿಲ್ಲ. ಬಿಜೆಪಿಯವರಿಗೆ ₹60ರಿಂದ ₹70 ಲಕ್ಷ ಕೊಟ್ಟರೆ ನೌಕರಿ ಕೊಡುತ್ತಾರೆ. ಇದು ರಾಜ್ಯದ ಈಗಿನ ಪರಿಸ್ಥಿತಿ. ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕ, ಉಪನೋಂದಣಾಧಿಕಾರಿ ಸೇರಿದಂತೆ ಎಲ್ಲ ಹುದ್ದೆಗಳನ್ನು ಹರಾಜಿನಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಬಂದು ಹೋದ ನಂತರ ಸಿಲಿಂಡರ್‌ ಬೆಲೆ ಹೆಚ್ಚಿಸಲಾಗಿದೆ. ಬಿಜೆಪಿಯವರಿಗೆ ಮನೆ ನಡೆಸುವುದು ಹೇಗಂತ ಗೊತ್ತಿದೆಯಾ? ತೊಗರಿ ಬೇಳೆ ಬೆಲೆ ಗೊತ್ತಿದೆಯಾ? 25 ಎಕರೆಯ ಮನೆಯಲ್ಲಿ ಇರುವವರಿಗೆ ಇದು ಗೊತ್ತಾಗುತ್ತಾ? ಕಲುಷಿತ ನೀರು ಸೇವಿಸಿ ಒಬ್ಬರು ಸಾವನ್ನಪ್ಪಿದ್ದಾರೆ. ಬಡವರಿಗೆ ಶುದ್ಧ ಕುಡಿಯುವ ನೀರು ಎಷ್ಟು ಮುಖ್ಯ ಎನ್ನುವುದು ಇವರಿಗೆ ಗೊತ್ತಿದೆಯಾ? ಸಚಿವ ಆನಂದ್‌ ಸಿಂಗ್‌ ಅಂತಹ ಗೂಂಡಾಗಳಿಗೆ ಹಿಟ್ಟು, ಬೇಳೆ ಕಾಳು ಖರೀದಿಸುವ ಅಗತ್ಯ ಬೀಳುವುದಿಲ್ಲ ಎನ್ನುವುದು ನನಗೆ ಗೊತ್ತು. ಆದರೆ, ಬಡವರ ವಿಷಯ ಹಾಗಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನರ ಮೇಲೆ ದೌರ್ಜನ್ಯ ಎಸಗಿದವರನ್ನು ತನಿಖೆಗೆ ಒಳಪಡಿಸಲಾಗುವುದು. ದೊಡ್ಡ ಮನೆಯಲ್ಲಿ ಇರುವವರನ್ನು ಜೈಲಿಗೆ ಕಳುಹಿಸುತ್ತೇವೆ. ಯಾರು ಹೆದರಿಸುತ್ತಾರೆ ನೋಡೋಣ. ಯಾರಾದರೂ ಕಾಂಗ್ರೆಸ್‌ ಶಾಸಕರು ಹಣಕ್ಕೆ ಬೇಡಿಕೆಯಿಟ್ಟರೆ ಅವರನ್ನು ಪಕ್ಷದಿಂದ ಹೊರಹಾಕಲಾಗುವುದು. ಜನರ ಹಣ ಜನರ ಕಲ್ಯಾಣಕ್ಕಾಗಿ ಖರ್ಚು ಮಾಡಲಾಗುವುದು. ಇದೇ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಉದ್ದೇಶ ಎಂದು ತಿಳಿಸಿದರು.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಶ್ರೀಧರಬಾಬು, ಬಳ್ಳಾರಿ ಉಸ್ತುವಾರಿ ಮಂಜುನಾಥ, ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮಹಮ್ಮದ್‌ ಇಮಾಮ್‌ ನಿಯಾಜಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿನಾಯಕ ಶೆಟ್ಟರ್‌, ಸಂಸದ ಸಯ್ಯದ್‌ ನಾಸೀರ್‌ ಹುಸೇನ್‌, ಶಾಸಕರಾದ ಪಿ.ಟಿ.ಪರಮೇಶ್ವರ ನಾಯ್ಕ, ಈ. ತುಕಾರಾಂ, ಭೀಮ ನಾಯ್ಕ, ಮುಖಂಡರಾದ ರಾಜಶೇಖರ್‌ ಹಿಟ್ನಾಳ್‌, ಸಿರಾಜ್‌ ಶೇಕ್‌, ಎಚ್‌.ಆರ್‌. ಗವಿಯಪ್ಪ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT