ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ ಫಲಿತಾಂಶ ಅತಂತ್ರ: ಸಚಿವ ಆನಂದ್‌ ಸಿಂಗ್ ಕ್ಷೇತ್ರದಲ್ಲೇ ಬಿಜೆಪಿಗೆ ಮುಖಭಂಗ

Last Updated 30 ಡಿಸೆಂಬರ್ 2021, 12:37 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನೂತನ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ನಡೆದ ಸ್ಥಳೀಯ ಸಂಸ್ಥೆಗಳ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ ಉತ್ತಮ ಸಾಧನೆ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರ ತವರು ಕ್ಷೇತ್ರ ವಿಜಯನಗರದಲ್ಲೇ ಬಿಜೆಪಿಗೆ ಮುಖಭಂಗವಾಗಿದೆ.

ಹೊಸಪೇಟೆ ನಗರಸಭೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಕ್ಕಿಲ್ಲ. ಹಗರಿಬೊಮ್ಮನಹಳ್ಳಿ ಪುರಸಭೆ ಹಾಗೂ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ.

ಹೊಸಪೇಟೆ ನಗರಸಭೆಯಲ್ಲಿ ಅತಂತ್ರ ಪರಿಸ್ಥಿತಿ ಸೃಷ್ಟಿಯಾಗಿದೆ. ಕಾಂಗ್ರೆಸ್‌ 12 ಸ್ಥಾನಗಳಲ್ಲಿ ಜಯಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಪುನಃ ಅಧಿಕಾರಕ್ಕೆ ಬರುವಲ್ಲಿ ಪಕ್ಷ ವಿಫಲಗೊಂಡಿದೆ. 12 ಕ್ಷೇತ್ರಗಳಲ್ಲಿ ಪಕ್ಷೇತರರು ಜಯ ಸಾಧಿಸಿ ಪಾರಮ್ಯ ಮೆರೆದಿದ್ದಾರೆ. 10 ಕ್ಷೇತ್ರಗಳಿಗೆ ಬಿಜೆಪಿ ತೃಪ್ತಿ ಪಟ್ಟುಕೊಂಡಿದೆ. ಆದರೆ, ಈ ಹಿಂದಿಗಿಂತ ಉತ್ತಮ ಸಾಧನೆ ತೋರಿದೆ. ಈ ಹಿಂದೆ 2 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿತ್ತು. ಒಂದು ಸ್ಥಾನದಲ್ಲಿ ಗೆಲ್ಲುವುದರ ಮೂಲಕ ‘ಆಮ್‌ ಆದ್ಮಿ’ ಪಕ್ಷ ಶುಭಾರಂಭ ಮಾಡಿದೆ. ಇನ್ನು, ಜೆಡಿಎಸ್‌, ಕೆಆರ್‌ಎಸ್‌, ಎಸ್‌ಡಿಪಿಐ ಪಕ್ಷದ ಅಭ್ಯರ್ಥಿಗಳತ್ತ ಮತದಾರರು ಒಲವು ತೋರಿಲ್ಲ.

ಬಿಜೆಪಿ ಹಾಗೂ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿಯುವ ಮಾತುಗಳನ್ನು ಆಡುತ್ತಿವೆ. ಆದರೆ, ಪಕ್ಷೇತರರ ಒಲವು, ನಿಲುವು ಯಾರ ಕಡೆಗೆ ಇರುತ್ತದೆ ಎನ್ನುವುದರ ಮೇಲೆ ಎಲ್ಲವೂ ನಿರ್ಧರಿಸಿದೆ. ಉಪಚುನಾವಣೆ ಸೇರಿದಂತೆ ನಾಲ್ಕು ಸಲ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಆನಂದ್ ಸಿಂಗ್‌ ಮೊದಲ ಬಾರಿಗೆ ನಗರಸಭೆ ಚುನಾವಣೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.

‘ಈ ಸಲ ನಗರಸಭೆಯಲ್ಲಿ ಬಿಜೆಪಿಯವರು ಅಧ್ಯಕ್ಷರಾಗುವುದು ಖಚಿತ. ಪ್ರತಿ ವಾರ್ಡ್‌ಗೆ ₹1 ಕೋಟಿ ಅನುದಾನ ಮೀಸಲಿಟ್ಟು ಅಭಿವೃದ್ಧಿ ಪಡಿಸಲಾಗುವುದು’ ಎಂದು ಸಿಂಗ್‌ ಹೇಳಿದ್ದರು. ವಿಜಯನಗರ ಜಿಲ್ಲೆ ಉದ್ಘಾಟನಾ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಿ ವರ್ಚಸ್ಸು ಹೆಚ್ಚಿಸಿಕೊಂಡಿದ್ದರು. ಆದರೆ, ನಗರದ ಮತದಾರರು ಅದಕ್ಕೆಲ್ಲ ಸೊಪ್ಪು ಹಾಕಿಲ್ಲ. ಈ ಸಂಬಂಧ ಆನಂದ್‌ ಸಿಂಗ್‌ ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ಹಗರಿಬೊಮ್ಮನಹಳ್ಳಿ, ಮರಿಯಮ್ಮನಹಳ್ಳಿಯಲ್ಲಿ ಪಕ್ಷವನ್ನು ಗೆಲುವಿನ ದಡಕ್ಕೆ ಸೇರಿಸುವಲ್ಲಿ ಶಾಸಕ ಎಲ್‌.ಬಿ.ಪಿ. ಭೀಮ ನಾಯ್ಕ ಯಶಸ್ವಿಯಾಗಿದ್ದಾರೆ. ಎಚ್‌.ಬಿ.ಹಳ್ಳಿ ಪುರಸಭೆಯ ಒಟ್ಟು 21 ಸ್ಥಾನಗಳಲ್ಲಿ ಕಾಂಗ್ರೆಸ್‌ 12, ಬಿಜೆಪಿ 11 ಸ್ಥಾನಗಳಲ್ಲಿ ಜಯ ಗಳಿಸಿದೆ. ಇನ್ನು, ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ 13, ಬಿಜೆಪಿ 4 ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಜಯಶಾಲಿಯಾಗಿದ್ದಾರೆ.

ಅಣ್ಣ–ತಂಗಿ ಗೆಲುವು
26ನೇ ವಾರ್ಡ್‌ನಿಂದ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಕೆ. ಗೌಸ್‌ ಅವರು ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. 16ನೇ ವಾರ್ಡ್‌ನಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅವರ ಸಹೋದರಿ ಮುಮ್ತಾಜ್‌ ಕಲಂದರ್‌ ಕೂಡ ಜಯಶಾಲಿಯಾಗಿದ್ದಾರೆ. ಗೌಸ್‌ ಹಿಂದಿನ ಸಲ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ಈ ಸಲ ಟಿಕೆಟ್‌ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿದ್ದರು.

ಕಾಂಗ್ರೆಸ್‌ ಬೆಂಬಲಿತಅಭ್ಯರ್ಥಿಗೆ ಸೋಲು
‘ಬಿ’ ಫಾರಂ ಹಂಚಿಕೆಯಲ್ಲಾದ ಲೋಪ ಸರಿಪಡಿಸಿಕೊಳ್ಳಲು ಕಾಂಗ್ರೆಸ್‌ ಪಕ್ಷವು 16ನೇ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಗಿರಿಜಾ ಸೋಮಶೇಖರ್‌ ಅವರನ್ನು ಬೆಂಬಲಿಸಿತ್ತು. ಆದರೆ, ಅವರು ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.

ಕಾಂಗ್ರೆಸ್‌ ‘ಬಿ’ ಫಾರಂ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದ ಮುಮ್ತಾಜ್‌ ಕಲಂದರ್‌ ಜಯಶಾಲಿಯಾಗಿದ್ದಾರೆ. ಕಲಂದರ್‌, ಬಿಜೆಪಿಯ ಕಾರ್ಯಕರ್ತರಾಗಿದ್ದು, ಅವರ ಪತ್ನಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದ್ದಕ್ಕೆ ಅಪಸ್ವರ ಕೇಳಿ ಬಂದಿತ್ತು.

ನಾಲ್ವರು ಪುನರಾಯ್ಕೆ
ಹೊಸಪೇಟೆ ನಗರಸಭೆ ಚುನಾವಣೆಯಲ್ಲಿ ನಾಲ್ವರು ಪುನರಾಯ್ಕೆಯಾಗಿದ್ದಾರೆ. 5ನೇ ವಾರ್ಡಿನಿಂದ ರೂಪೇಶ್‌ ಕುಮಾರ್‌, 10ನೇ ವಾರ್ಡ್‌ನಿಂದ ರೋಹಿಣಿ ವೆಂಕಟೇಶ, 16ನೇ ವಾರ್ಡ್‌ನಿಂದ ಮುಮ್ತಾಜ್‌ ಕಲಂದರ್‌ ಹಾಗೂ 26ನೇ ವಾರ್ಡ್‌ನಿಂದ ಕೆ. ಗೌಸ್‌ ಸೇರಿದ್ದಾರೆ. ಮರು ಆಯ್ಕೆ ಬಯಸಿ ಚುನಾವಣೆಗೆ ಸ್ಪರ್ಧಿಸಿದ್ದ ಚಂದ್ರಕಾಂತ ಕಾಮತ್‌, ವೇಣುಗೋಪಾಲ್‌ ಸೋಲು ಕಂಡಿದ್ದಾರೆ. ಮಾಜಿ ಸದಸ್ಯ ಗುಡಿಗುಂಟಿ ಮಲ್ಲಿಕಾರ್ಜುನ ಅವರ ಪತ್ನಿ ಜಿ. ರಾಧಾ 35ನೇ ವಾರ್ಡ್‌ನಿಂದ ಆಯ್ಕೆಯಾದರೆ, ಅಂಜಿನಿ ಅವರ ಸಹೋದರಿ ವಿ. ಕನಕಮ್ಮ 7ನೇ ವಾರ್ಡ್‌ನಿಂದ ಗೆದ್ದಿದ್ದಾರೆ.

ಉಪಚುನಾವಣೆಯಲ್ಲಿ ಜಯ
ಹೊಸಪೇಟೆ ತಾಲ್ಲೂಕಿನ ಡಣಾಪುರ ಗ್ರಾಮ ಪಂಚಾಯಿತಿಯ 112 ವೆಂಕಟಾಪುರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಜಿ. ಮಹೇಶ ಎಂಬುವರು ಜಯಶಾಲಿಯಾಗಿದ್ದಾರೆ.

ಕಾಂಗ್ರೆಸ್‌, ಬಿಜೆಪಿಯಿಂದ ರಣತಂತ್ರ
ಹೇಗಾದರೂ ಮಾಡಿ ಹೊಸಪೇಟೆ ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಕಾಂಗ್ರೆಸ್‌, ಬಿಜೆಪಿ ಪಕ್ಷಗಳು ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ರಣತಂತ್ರ ಹೆಣೆಯುವುದರಲ್ಲಿ ಮಗ್ನವಾಗಿವೆ. ಒಟ್ಟು 35 ಸ್ಥಾನಗಳ ಪೈಕಿ 33ರಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ 12ರಲ್ಲಿ ಗೆಲುವು ಸಾಧಿಸಿದೆ. ಕೊನೆಯ ಕ್ಷಣದಲ್ಲಿ ಪಕ್ಷದ ಟಿಕೆಟ್ ಕೈತಪ್ಪಿದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದವರು ಪುನಃ ಪಕ್ಷದ ತೆಕ್ಕೆಗೆ ಬರುತ್ತಾರೆ ಎನ್ನುವುದು ಕಾಂಗ್ರೆಸ್‌ ಲೆಕ್ಕಾಚಾರ.

‘ಕಾಂಗ್ರೆಸ್‌ ಬೆಂಬಲಿತ ಆರೇಳು ಜನ ಪಕ್ಷೇತರರು ಗೆದ್ದಿದ್ದಾರೆ. ಅವರು ಪಕ್ಷ ಬೆಂಬಲಿಸುವುದಾಗಿ ತಿಳಿಸಿದ್ದಾರೆ.ಪುನಃ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ’ ಎಂದು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ವಿನಾಯಕ ಶೆಟ್ಟರ್‌ ಭರವಸೆ ವ್ಯಕ್ತಪಡಿಸಿದ್ದಾರೆ. ‘ಬಿಜೆಪಿಗೆ ಕಡಿಮೆ ಸ್ಥಾನ ಬಂದರೂ ನಾವೇ ಅಧಿಕಾರಕ್ಕೆ ಬರುತ್ತೇವೆ’ ಎಂದು ಪಕ್ಷದ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ತಿಳಿಸಿದ್ದಾರೆ.

*
ಪುರಸಭೆ, ಪಟ್ಟಣ ಪಂಚಾಯಿತಿಯಲ್ಲಿ ಜನ ಅಭಿವೃದ್ಧಿ ನೋಡಿ ಮತ ಹಾಕಿದ್ದಾರೆ. ಈ ಗೆಲುವು ಕಾಂಗ್ರೆಸ್‌ ಕಾರ್ಯಕರ್ತರ ಗೆಲುವು.
–ಎಲ್‌.ಬಿ.ಪಿ. ಭೀಮ ನಾಯ್ಕ, ಶಾಸಕ ಹಗರಿಬೊಮ್ಮನಹಳ್ಳಿ

*
ಕಳೆದ ಸಲಕ್ಕಿಂತ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆದ್ದಿದೆ. ಅಷ್ಟೇ ಅಲ್ಲ ಪಕ್ಷದ ಮತ ಪ್ರಮಾಣ, ಸೀಟುಗಳ ಸಂಖ್ಯೆ ಕೂಡ ಹೆಚ್ಚಾಗಿದೆ.
–ಚನ್ನಬಸವನಗೌಡ ಪಾಟೀಲ, ಜಿಲ್ಲಾಧ್ಯಕ್ಷ, ಬಿಜೆಪಿ

**
ಹೊಸಪೇಟೆ ನಗರಸಭೆ ಪಕ್ಷಗಳ ಬಲಾಬಲ
ಒಟ್ಟು ಸ್ಥಾನ: 35
ಕಾಂಗ್ರೆಸ್: 12
ಬಿಜೆಪಿ: 10
ಎಎಪಿ: 01
ಪಕ್ಷೇತರರು: 12

ಹಗರಿಬೊಮ್ಮನಹಳ್ಳಿ ಪುರಸಭೆ ಪಕ್ಷಗಳ ಬಲಾಬಲ
ಒಟ್ಟು ಸ್ಥಾನ: 23
ಕಾಂಗ್ರೆಸ್‌: 12
ಬಿಜೆಪಿ: 11

ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಪಕ್ಷಗಳ ಬಲಾಬಲ
ಒಟ್ಟು ಸ್ಥಾನ: 18
ಕಾಂಗ್ರೆಸ್:13
ಬಿಜೆಪಿ: 4
ಇತರೆ: 1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT