ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಸೋತರೆ ಕ್ಷೇತ್ರದ ಜನಕ್ಕೆ ಹಾನಿ -ಸಚಿವ ಆನಂದ್‌ ಸಿಂಗ್‌

ಕಸಾಬ್ ಜನಾಂಗದ ಜಿಲ್ಲಾ ಸಮಾವೇಶದಲ್ಲಿ ಸಚಿವ ಆನಂದ್‌ ಸಿಂಗ್‌
Last Updated 15 ಫೆಬ್ರುವರಿ 2023, 13:34 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ನಾನು ಸೋತರೆ ವಿಜಯನಗರ ಕ್ಷೇತ್ರದ ಜನಕ್ಕೆ ಹಾನಿಯಾಗಲಿದೆ. ನನಗೇನೂ ವ್ಯತ್ಯಾಸ ಆಗುವುದಿಲ್ಲ. ನಾನು ಅಧಿಕಾರದಲ್ಲಿ ಇರುವ ತನಕ ಜಿಲ್ಲೆಯ ಜನರ ರಕ್ಷಕನಾಗಿ ಕೆಲಸ ಮಾಡುವೆ. ಯಾರು ಏನೆಂಬುದನ್ನು ನೋಡಿ ಬರುವ ಚುನಾವಣೆಯಲ್ಲಿ ಮತ ಚಲಾಯಿಸಬೇಕು’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಹೇಳಿದರು.

ಇಲ್ಲಿನ ಎಸ್‌.ಆರ್‌. ನಗರದಲ್ಲಿ ಬುಧವಾರ ಆಯೋಜಿಸಿದ್ದ ವಿಜಯನಗರ ಕಸಾಬ್ ಜನಾಂಗದ ಜಿಲ್ಲಾ ಸಮಾವೇಶ ಹಾಗೂ ಹೊಸಪೇಟೆ ಸಂಘದ 11ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಬರುವ ದಿನಗಳಲ್ಲಿ ಅನೇಕ ಜನ ಮತ ಕೇಳಲು ಬರುವವರಿದ್ದಾರೆ. ಯಾರನ್ನೇ ಗೆಲ್ಲಿಸಿ ಸ್ಥಳೀಯರನ್ನು ಗೆಲ್ಲಿಸಿ. ಹೊರಗಿನಿಂದ ಬಂದು ಮನೆ ಮಾಡಿ, ನಾನು ಸ್ಥಳೀಯವನು ಎಂದು ಹೇಳುತ್ತಾರೆ. ವಿಜಯನಗರ ಕ್ಷೇತ್ರ ಎಂದರೆ ತಮಾಷೆಯಲ್ಲ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ದೇವರು ನನಗೆ ಸಾಕಷ್ಟು ಕೊಟ್ಟಿದ್ದಾರೆ. ನನಗೆ ಬೇರೆಯವರದ್ದು ಬೇಕಿಲ್ಲ. ಈ ಸಲದ ಚುನಾವಣೆಯಲ್ಲಿ ಆನಂದ್‌ ಸಿಂಗ್‌ ಅವರ ಕೈ ಹಿಡಿಯುತ್ತೇವೆ ಎನ್ನುವುದರ ಬಗ್ಗೆ ಚರ್ಚೆಯಾಗಲಿ. ಆನಂದ್‌ ಸಿಂಗ್‌ ಗೆದ್ದರೆ ಹೇಗೆ? ಬೇರೆಯವರು ಗೆದ್ದರೆ ಏನು ಮಾಡುತ್ತಾರೆ ಎಂದು ನೋಡಿ. ಆನಂದ್‌ ಸಿಂಗ್‌ ಒಂದು ಕಡೆ, ಉಳಿದ ನಾಯಕರನ್ನು ಒಂದು ಕಡೆ ತೂಗಿ ನೋಡಿ ಎಂದರು.

ನನ್ನನ್ನು ಗೆಲ್ಲಿಸಿದರೆ ನಿಮ್ಮ ಭವಿಷ್ಯ ಉಜ್ವಲವಾಗಲಿದೆ. ಇಲ್ಲವಾದರೆ ವಿಜಯನಗರಕ್ಕೆ ವ್ಯತ್ಯಾಸ ಆಗುತ್ತದೆ. ಕ್ಷೇತ್ರದಲ್ಲಿ ₹500 ಕೋಟಿ ರೂಪಾಯಿ ಮೊತ್ತದ ಅನೇಕ ಕಾಮಗಾರಿಗಳು ನಡೆಯುತ್ತಿವೆ. ಮತ್ತೆ ₹200 ಕೋಟಿ ಮೊತ್ತದ ಯೋಜನೆಗಳಿಗೆ ಶೀಘ್ರ ಚಾಲನೆ ನೀಡಲಾಗುವುದು. ಅಭಿವೃದ್ಧಿ ಕೆಲಸಗಳನ್ನು ನೋಡಿ ಬಳ್ಳಾರಿ ಜಿಲ್ಲೆಯವರು ಅಚ್ಚರಿಯಿಂದ ನೋಡುತ್ತಿದ್ದಾರೆ. ಅನೇಕ ಕೆಲಸಗಳು ನಡೆಯುತ್ತಿವೆ. ಹೊಸಬರು ಗೆದ್ದರೆ ಇದನ್ನು ಮುಂದುವರೆಸುತ್ತಾರೋ ಇಲ್ಲವೋ ಗೊತ್ತಿಲ್ಲ. ನಿಮ್ಮ ಜವಾಬ್ದಾರಿ ನಿಮಗೆ ತಿಳಿಸುತ್ತಿದ್ದೇನೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್‌.ಎಸ್‌. ಆನಂದ್‌, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಸಂಘದ ಅಧ್ಯಕ್ಷ ಜನಾಬ್‌ ಕೆ. ಬಾಷ, ಕಾರ್ಯದರ್ಶಿ ಜನಾಬ್‌ ಕೆ. ಮಹಬೂಬ್‌, ಮುಖಂಡರಾದ ಕೆ. ಸಲೀಂ ಸಾಬ್‌, ಕೆ. ಖಾಲೀದ್‌ ಸಾಬ್‌, ಕಾಸಿಂ ಅಲಿ ಪಲ್ಲೆಕಟ್ಟೆ, ಅಮೀರ್‌ ಮಂಡಿ, ಕೆ. ಇದ್ರಿಸ್‌ ಬಾಷ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT