ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರರು, ವಿದ್ಯಾರ್ಥಿಗಳ ನೆರವಿಗೆ ಬಂದ ಸರ್ಕಾರ

ಮುಖ್ಯಮಂತ್ರಿ ವಿವೇಚನಾ ಕೋಟಾ ಅನುದಾನದ ಬೇಕಾಬಿಟ್ಟಿ ಬಳಕೆಗೆ ಲಗಾಮು
Last Updated 30 ನವೆಂಬರ್ 2022, 12:48 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ಮುಖ್ಯಮಂತ್ರಿಯವರ ವಿವೇಚನಾ ಕೋಟಾದಡಿ ನಿಗದಿಯಾಗಿದ್ದ ಅನುದಾನವನ್ನು ಬೇಕಾಬಿಟ್ಟಿ ಬಳಕೆಗೆ ಮುಂದಾಗಿದ್ದ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರ ಲಗಾಮು ಹಾಕಿದೆ.

ಇಷ್ಟೇ ಅಲ್ಲ, ವಿಶ್ವವಿದ್ಯಾಲಯದ ನೌಕರರು ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ಅನುದಾನವನ್ನು ಬಳಸುವಂತೆ ಪ್ರದೇಶಾಭಿವೃದ್ಧಿ ಮಂಡಳಿ ನಿರ್ದೇಶಕರು ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಉಪಕಾರ್ಯದರ್ಶಿ ಡಿ. ಚಂದ್ರಶೇಖರಯ್ಯ ವಿಶ್ವವಿದ್ಯಾಲಯದ ಆಡಳಿತಕ್ಕೆ ಸೂಚಿಸಿದ್ದಾರೆ. ಈ ಸಂಬಂಧ ನವೆಂಬರ್‌ 21ರಂದು ಆದೇಶ ಹೊರಡಿಸಿದ್ದು, ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಸರ್ಕಾರದ ಈ ಆದೇಶದಿಂದ ವಿಶ್ವವಿದ್ಯಾಲಯದ ಆಡಳಿತಕ್ಕೆ ಹಿನ್ನಡೆ ಉಂಟಾಗಿದೆ. ಸರ್ಕಾರವು ಒಟ್ಟು ₹15.58 ಕೋಟಿಗೆ ಅನುಮೋದನೆ ನೀಡಿದೆ. ₹11.89 ಕೋಟಿ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ/ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ಬಾಕಿ ಇರುವ ಮಾಸಿಕ ಆರ್ಥಿಕ ನೆರವಿಗೆ, ₹2.51 ಕೋಟಿ ತಾತ್ಕಾಲಿಕ ಬೋಧಕ ಸಿಬ್ಬಂದಿಯ 14 ತಿಂಗಳು, ಬೋಧಕೇತರ ಸಿಬ್ಬಂದಿಯ 9 ತಿಂಗಳ ಬಾಕಿ ಇರುವ ವೇತನ ಪಾವತಿಗೆ, ₹1.17 ಕೋಟಿ ಲ್ಯಾಪ್‌ಟಾಪ್‌ ಖರೀದಿಗೆ ಸೂಚಿಸಿದೆ.

ಈ ಹಿಂದೆ ಸರ್ಕಾರವು ₹20 ಕೋಟಿಗೆ ಒಪ್ಪಿಗೆ ಸೂಚಿಸಿ, ₹19.85 ಕೋಟಿಗೆ ಅನುಮೋದನೆ ಕೊಟ್ಟಿತ್ತು. ಈಗ ವಿಶ್ವವಿದ್ಯಾಲಯದ ಪ್ರಸ್ತಾವ ತಿರಸ್ಕರಿಸಿ ಹಿಂದಿನ ಕಾಮಗಾರಿಗಳಿಗೆ ನೀಡಿದ್ದ ಅನುದಾನವನ್ನು ಹಿಂಪಡೆದು ನೌಕರರು, ವಿದ್ಯಾರ್ಥಿಗಳಿಗಾಗಿಯೇ ಬಳಸುವಂತೆ ₹15.58 ಕೋಟಿಗೆ ಅನುಮೋದನೆ ಕೊಟ್ಟಿದೆ. ಕಾಮಗಾರಿಗಳ ಮೂಲಕ ಭ್ರಷ್ಟಾಚಾರ ನಡೆಸಲು ಉದ್ದೇಶಿಸಲಾಗಿತ್ತು ಎಂಬ ಆರೋಪಗಳು ವಿ.ವಿ. ಒಳಗಿಂದಲೇ ಕೇಳಿ ಬಂದಿತ್ತು. ಈಗ ಅದಕ್ಕೆ ತಡೆ ಬಿದ್ದಿದೆ.

‘ಪ್ರಜಾವಾಣಿ’ ವರದಿ ಪರಿಣಾಮ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವರ್ಷದ ಆರಂಭದಲ್ಲಿ ವಿಶ್ವವಿದ್ಯಾಲಯಕ್ಕೆ ಬಂದಾಗ ವಿ.ವಿ. ಆಡಳಿತವು ಅವರಿಗೆ ಅನುದಾನಕ್ಕೆ ಬೇಡಿಕೆ ಇಟ್ಟಿತ್ತು. ತಕ್ಷಣವೇ ಸ್ಪಂದಿಸಿದ ಸಿ.ಎಂ. ವೇದಿಕೆಯಲ್ಲೇ ₹25 ಕೋಟಿ ವಿವೇಚನಾ ಕೋಟಾದಡಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ವಿಶ್ವವಿದ್ಯಾಲಯವು ತಾತ್ಕಾಲಿಕ ನೌಕರರು, ಎಸ್ಸಿ/ಎಸ್ಟಿ ವಿದ್ಯಾರ್ಥಿಗಳ ಮಾಸಿಕ ಪ್ರೋತ್ಸಾಹ ಧನದ ಜೊತೆಗೆ ಕಾಮಗಾರಿಗಳ ಅನುಷ್ಠಾನಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಅನುದಾನ ಮಂಜೂರಾದ ನಂತರ ಹಣವನ್ನು ಕಾಂಪೌಂಡ್‌, ಪ್ರಸಾರಾಂಗದ ಹೊಸ ಕಟ್ಟಡ ನಿರ್ಮಾಣ ಸೇರಿದಂತೆ ಇತರೆ ನಿರ್ಮಾಣ ಕಾಮಗಾರಿಗಳಿಗೆ ಬಳಸಲು ಮುಂದಾಗಿತ್ತು. ಸ್ವತಃ ವಿ.ವಿ. ಹಿರಿಯ ಪ್ರಾಧ್ಯಾಪಕರು ವಿರೋಧ ವ್ಯಕ್ತಪಡಿಸಿ ಪತ್ರ ಕೂಡ ಬರೆದಿದ್ದರು. ಆದರೆ, ಅವರನ್ನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಈ ಕುರಿತು ‘ಪ್ರಜಾವಾಣಿ’ ನ. 9ರಂದು ‘ವರ್ಷದಿಂದ ತಾತ್ಕಾಲಿಕ ನೌಕರರಿಗಿಲ್ಲ ವೇತನ, ಹೊಸ ಕಾಮಗಾರಿಗಳಿಗಿಲ್ಲ ಬರ’ ಶೀರ್ಷಿಕೆ ಅಡಿ ವರದಿ ಪ್ರಕಟಿಸಿತ್ತು. ವರದಿ ಪ್ರಕಟಗೊಂಡ ಕೆಲವೇ ದಿನಗಳಲ್ಲಿ ಸರ್ಕಾರ ಈ ಹಿಂದೆ ಮಂಜೂರು ಮಾಡಿದ್ದ ಅನುದಾನ ಹಿಂಪಡೆದು, ನೌಕರರು, ವಿದ್ಯಾರ್ಥಿಗಳಿಗೆ ಬಳಸುವಂತೆ ಆದೇಶಿಸಿದೆ. ಸರ್ಕಾರದ ಕ್ರಮವನ್ನು ವಿದ್ಯಾರ್ಥಿಗಳು ಸ್ವಾಗತಿಸಿದ್ದಾರೆ.

ಪಿಂಚಣಿಗೆ ₹10 ಕೋಟಿ:

‘ಹತ್ತು ಜನ ನಿವೃತ್ತ ನೌಕರರ ಪಿಂಚಣಿಗೆ ಸರ್ಕಾರದಿಂದ ₹10 ಕೋಟಿ ಹಣ ಮಂಜೂರಾಗಿದೆ. ಇನ್ನಷ್ಟೇ ವಿಶ್ವವಿದ್ಯಾಲಯದ ಖಾತೆಗೆ ಹಣ ಜಮೆ ಆಗಬೇಕು. 2023ರ ಮಾರ್ಚ್‌ ಅಂತ್ಯದ ವರೆಗೆ ನಿವೃತ್ತಿ ಆಗುವವರೆಗೆ ಪಿಂಚಣಿ ಅನ್ವಯವಾಗುತ್ತದೆ’ ಎಂದು ಕುಲಸಚಿವ ಪ್ರೊ.ಎ. ಸುಬ್ಬಣ್ಣ ರೈ ತಿಳಿಸಿದ್ದಾರೆ. ವರ್ಷದ ಹಿಂದೆ ಪಿಂಚಣಿ ಸಮಸ್ಯೆ ಕುರಿತು ‘ಪ್ರಜಾವಾಣಿ’ ಬೆಳಕು ಚೆಲ್ಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT