ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಬಡೇಲಡಕು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಡ್ಡಗೊಲ್ಲರಹಟ್ಟಿಯಲ್ಲಿ ಶನಿವಾರ ವಾಂತಿ ಭೇದಿ ಪ್ರಕರಣ ಕಾಣಿಸಿಕೊಂಡಿದ್ದು, 13 ಜನ ಆನಾರೋಗ್ಯಕ್ಕೆ ತುತ್ತಾಗಿದ್ದಾರೆ. ಕಲುಷಿತ ನೀರೇ ವಾಂತಿ ಭೇದಿಗೆ ಕಾರಣ ಎಂದು ಹೇಳಲಾಗುತ್ತಿದೆ.
ಹಟ್ಟಿಯಲ್ಲಿ ಶುಕ್ರವಾರ ಮೂರು ಪ್ರಕರಣ ಬೆಳಕಿಗೆ ಬಂದಿದ್ದವು. ಆದರೆ ಶನಿವಾರ ಮತ್ತೆ 8 ಜನರಲ್ಲಿ ವಾಂತಿ ಭೇದಿ ಉಂಟಾಗಿದೆ. ಆನಾರೋಗ್ಯ ಪೀಡಿತರನ್ನು ಕೂಡ್ಲಿಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಲಾಗುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರಲ್ಲಿ ಈಗಾಗಲೇ ಗುಣಮುಖರಾದ ಒಬ್ಬರನ್ನು ಮನೆಗೆ ಕಳಿಸಲಾಗಿದೆ. ಭಾನುವಾರ ಮತ್ತೆ ಇಬ್ಬರು ವಾಂತಿ ಭೇದಿ ಯಿಂದ ಬಳಲಿದ್ದಾರೆ. ಇವರಿಗೆ ಗ್ರಾಮದಲ್ಲಿ ತಾತ್ಕಾಲಿವಾಗಿ ತೆರೆದಿರುವ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಷಣ್ಮುಖ ನಾಯ್ಕ್ ಹಟ್ಟಿಯಲ್ಲಿ ಬೀಡು ಬಿಟ್ಟಿದ್ದು, ಉಸ್ತುವಾರಿ ವಹಿಸಿದ್ದಾರೆ.
ಕಲುಷಿತ ನೀರು ಕಾರಣ?: ಹಟ್ಟಿಯಲ್ಲಿ ವಾಂತಿ ಭೇದಿ ಉಂಟಾಗಲು ಕಲುಷಿತ ನೀರೇ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಹಟ್ಟಿಯಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ ಪೈಪುಗಳನ್ನು ಹಾಕಲು ತಗ್ಗುಗಳನ್ನು ತೋಡಲಾಗಿದೆ. ಈ ಸಂದರ್ಭದಲ್ಲಿ ಗ್ರಾಮಕ್ಕೆ ಪೂರೈಕೆ ಮಾಡುವ ಪೈಪುಗಳು ಒಡೆದಿದ್ದು, ಅವುಗಳನ್ನು ದುರಸ್ತಿ ಮಾಡದೇ ಬಿಡಲಾಗಿದೆ. ಇದರಿಂದ ಪೈಪಿನಲ್ಲಿ ಹೊರಗಡೆ ನೀರು ಸೇರಿಕೊಂಡು ಕುಡಿಯುವ ನೀರು ಕಲುಷಿತಗೊಂಡಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ತಾತ್ಕಾಲಿಕ ಕೇಂದ್ರ: ದೊಡ್ಡಗೊಲ್ಲರಹಟ್ಟಿಯಲ್ಲಿ ವಾಂತಿ ಬೇದಿ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ತಿಮ್ಮಾಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ತಾತ್ಕಾಲಿಕ ಆರೋಗ್ಯ ಚಿಕಿತ್ಸಾ ಕೇಂದ್ರ ತೆರೆಯಲಾಗಿದ್ದು, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪ್ರದೀಪ್ ನೇತೃತ್ವದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕರ್ಣಂ ಹಾಗೂ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಗದೀಶ್ ಸೇರಿದಂತೆ 4 ಜನ ಸಮುದಾಯ ಆರೋಗ್ಯಾಧಿಕಾರಿಗಳು, 3 ಜನ ಆರೋಗ್ಯ ನಿರೀಕ್ಷಣಾಧಿಕಾರಿಗಳು ಗ್ರಾಮದಲ್ಲಿನ ಚಿಕಿತ್ಸಾ ಕೇಂದ್ರದಲ್ಲಿ ಜನರ ಆರೋಗ್ಯ ತಪಾಸಣೆಯನ್ನು ನಡೆಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಮನೆ ಮನೆ ಸಮೀಕ್ಷೆ ಮಾಡುತ್ತಿದ್ದು, ಅಗತ್ಯ ಔಷಧಿಗಳನ್ನು ನೀಡುವುದರ ಜೊತೆಗೆ ನೀರನ್ನು ಕುದಿಸಿ ಕುಡಿಯುವಂತೆ ಹೇಳಲಾಗುತ್ತಿದೆ ಎಂದು ತಾಲ್ಲೂಕು ಆರೋಗ್ಯಧಿಕಾರಿ ಡಾ. ಪ್ರದೀಪ್ ಕುಮಾರ್ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಶನಿವಾರ ಬೆಳಿಗ್ಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಹಟ್ಟಿಯಲ್ಲಿ ತಕ್ಷಣ ಸ್ವಚ್ಛತಾ ಕಾರ್ಯ ಕೈಗೊಂಡು, ಕುಡಿಯುವ ನೀರನ್ನು ಬೇರೆ ಕಡೆಯಿಂದ ತರಿಸಿ ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.