ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟೂರು: ಕಾಳಾಪುರದಲ್ಲಿ ದೌರ್ಜನ್ಯ, ದೂರು ದಾಖಲಿಸಲು ವಿಳಂಬ ಖಂಡಿಸಿ ರಸ್ತೆತಡೆ

Last Updated 30 ಜನವರಿ 2023, 13:22 IST
ಅಕ್ಷರ ಗಾತ್ರ

ಕೊಟ್ಟೂರು (ವಿಜಯನಗರ): ತರಳಬಾಳು ಹುಣ್ಣಿಮೆ ಮಹೋತ್ಸವದ ಬೈಕ್‌ ರ್‍ಯಾಲಿ ಸಂದರ್ಭದಲ್ಲಿ ತಾಲ್ಲೂಕಿನ ಕಾಳಾಪುರದಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಲು ವಿಳಂಬ ತೋರಿದ್ದನ್ನು ಖಂಡಿಸಿ ಸೋಮವಾರ ಮೂರು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ಚಳವಳಿ ನಡೆಸಲಾಯಿತು.

ಬೈಕ್‌ ರ್‍ಯಾಲಿ ಸಂದರ್ಭದಲ್ಲಿ ತಮ್ಮ ಮೇಲೆ ದೌರ್ಜನ್ಯವೆಸಗಿದ್ದು, ಯಾರೂ ಸ್ಪಂದಿಸಿಲ್ಲ ಎಂದು ಆರೋಪಿಸಿ ಗ್ರಾಮದ ಕೆಲವರು ರಸ್ತೆತಡೆಗೆ ಮುಂದಾದರು. ಮುಖಂಡರಾದ ಎಂ.ಎಂ.ಜೆ.ಹರ್ಷವರ್ಧನ್, ಪಿ.ಎಚ್.ದೊಡ್ಡರಾಮಣ್ಣ ಪ್ರತಿಭಟನಾಕಾರರ ಮನವೊಲಿಸಿದರೂ ಫಲ ಕೊಡಲಿಲ್ಲ.

ನಂತರ ಪ್ರತಿಭಟನಾ ಸ್ಧಳಕ್ಕೆ ಹಿಂದುಳಿದ ಮಠಾಧೀಶರ ಒಕ್ಕೂಟದ ಸ್ವಾಮೀಜಿಗಳು ಬಂದು ಗ್ರಾಮಸ್ಧರ ನೋವನ್ನು ಆಲಿಸಿದರು. ಬಾಗಲಕೋಟೆಯ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಧರ್ಮದ ಸಂಘರ್ಷದಲ್ಲಿ ಪ್ರತಿ ಬಾರಿಯೂ ಬಲಿಯಾಗುತ್ತಿರುವುದು ಶ್ರಮಿಕ ವರ್ಗದವರು. ಇಂತಹ ವರ್ಗದ ಜನರನ್ನು ಯಾವುದೇ ಮಠಾಧೀಶರು ಸಂಘರ್ಷ ಕಾರ್ಯಕ್ಕೆ ಬಳಸಿಕೊಳ್ಳಬಾರದು. ಘಟನೆಯಲ್ಲಿ ಗಾಯಾಳುಗಳಿಗೆ ತರಳಬಾಳು ಹುಣ್ಣಿಮೆ ಮಹೋತ್ಸವ ಸಮಿತಿಯಿಂದ ಚಿಕಿತ್ಸೆ ವೆಚ್ಚ ಭರಿಸುವುದು ಅವಶ್ಯಕತೆ ಇಲ್ಲ. ಎಲ್ಲಾ ವೆಚ್ಚವನ್ನು ನಾವೇ ಭರಿಸಿಕೊಳ್ಳುತ್ತೇವೆ. ಸಂಘರ್ಷ ಕೊನೆಗೊಳ್ಳಬೇಕು. ಸಮಾಜದವರು ರಾಜ್ಯದಾದ್ಯಂತ ಪ್ರತಿಭಟಿಸಲು ಮುಂದಾಗಿದ್ದರು. ಹಾಗೆ ಮಾಡುವುದು ಬೇಡ. ತರಳಬಾಳು ಹುಣ್ಣಿಮೆ ಮಹೋತ್ಸವ ಯಶಸ್ವಿಯಾಗಲು ಎಲ್ಲರೂ ಸಹಕರಿಸೋಣ ಎಂದು ಸಮಾಧಾನ ಪಡಿಸಿದರು.

ಹಿಂದುಳಿದ ಮಠಾಧೀಶರ ಒಕ್ಕೂಟದ ಅಧ್ಯಕ್ಷ ಕನಕ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ತರಳಬಾಳು ಸ್ವಾಮೀಜಿಗಳು ನ್ಯಾಯ ಪೀಠದಲ್ಲಿ ಕುಳಿತುಕೊಂಡು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದ ಅಮಾಯಕರಿಗೂ ಸಹ ನ್ಯಾಯ ಒದಗಿಸಿಕೊಡಬೇಕಾಗಿದೆ ಎಂದರು.

ಹೊಸದುರ್ಗದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಸಂಸ್ಕಾರ ಹೇಳುವ ಜನ ಇವತ್ತು ಅಮಾಯಕರ ಮೇಲೆ ಹಲ್ಲೆ ಮಾಡಿರುವುದು ಅತ್ಯಂತ ಖಂಡನೀಯ. ದೌರ್ಜನ್ಯಕ್ಕೊಳಗಾದವರ ಹಿತರಕ್ಷಣೆಗೆ ನಾವು ಸದಾ ಸಿದ್ದರಿರುತ್ತೇವೆ ಎಂದರು.

ಮಾದಾರ ಚನ್ನಯ್ಯ ಗುರು ಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕುಂಚಿಟಿಗರ ಗುರುಪೀಠದ ಶಾಂತವೀರ ಸ್ವಾಮೀಜಿ ಮಾತನಾಡಿದರು. ಶಾಸಕ ಎನ್.ವೈ.ಗೋಪಾಲಕೃಷ್ಣ, ಎಸ್‌ಪಿ ಶ್ರೀಹರಿಬಾಬು ಬಿ.ಎಲ್, ಸಿಇಒ ಹರ್ಷಲ್‌ ಭೋಯರ್ ಇದ್ದರು.

ಜ. 28ರಂದು ತರಳುಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ನಡೆದ ಬೈಕ್‌ ರ್‍ಯಾಲಿ ಸಂದರ್ಭದಲ್ಲಿ ಸಿರಿಗೆರೆ ಮಠ ಹಾಗೂ ಉಜ್ಜಯನಿ ಪೀಠದ ಭಕ್ತರ ನಡುವೆ ಸಂಘರ್ಷ ಉಂಟಾಗಿತ್ತು. ಕಾನ್‌ಸ್ಟೆಬಲ್‌ ಸೇರಿದಂತೆ 20 ಜನ ಗಾಯಗೊಂಡಿದ್ದರು. ಘಟನೆ ಸಂಬಂಧ ಜ. 29ರಂದು 12 ಜನರನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT