ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣನ ಮೂರ್ತಿ ಹಂಪಿಗೆ ತನ್ನಿ: ಕೇಂದ್ರ ಸಚಿವರಿಗೆ ಆನಂದ್‌ ಸಿಂಗ್ ಮನವಿ

Last Updated 25 ಫೆಬ್ರುವರಿ 2022, 13:27 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಶ್ರೀಕೃಷ್ಣದೇವರಾಯ ಒಡಿಶಾದಲ್ಲಿ ನಡೆದ ಯುದ್ಧದಲ್ಲಿ ಜಯಭೇರಿ ಬಾರಿಸಿದ ನಂತರ ಹಂಪಿಯಲ್ಲಿ ಕೃಷ್ಣ ದೇವಸ್ಥಾನ ನಿರ್ಮಿಸಿ, ಅದರಲ್ಲಿ ಸುಂದರ ಬಾಲಕೃಷ್ಣನ ಮೂರ್ತಿ ಪ್ರತಿಷ್ಠಾಪಿಸುತ್ತಾನೆ. ಆ ಮೂರ್ತಿ ಈಗ ಚೆನ್ನೈ ವಸ್ತು ಸಂಗ್ರಹಾಲಯದಲ್ಲಿದೆ. ಆ ಮೂರ್ತಿಯನ್ನು ಹಂಪಿಗೆ ತಂದು ಆ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಬೇಕು’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಕೇಂದ್ರ ಸಚಿವ ಕಿಶನ್‌ ರೆಡ್ಡಿ ಅವರಿಗೆ ಮನವಿ ಮಾಡಿದರು.

ದೇವಾಲಯಗಳು ಭಾರತದ ಅಸ್ಮಿತೆಯ ಪ್ರತೀಕ: ಕೇಂದ್ರ ಸಂಸ್ಕೃತಿ ಸಚಿವ ಕಿಶನ್‌ ರೆಡ್ಡಿ ಅಭಿಮತ
‘ದೇವಾಲಯಗಳು ಭಾರತದ ಅಸ್ಮಿತೆಯ ಪ್ರತೀಕ. ನಮ್ಮ ಜೀವನದ ಅವಿಭಾಜ್ಯ ಅಂಗ. ಜೀವನ ವಿಧಾನವೂ ಹೌದು’ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್‌ ರೆಡ್ಡಿ ತಿಳಿಸಿದರು.

ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ಭಾರತೀಯ ಪುರಾತತ್ವ ಇಲಾಖೆಯ ಸಹಭಾಗಿತ್ವದಲ್ಲಿ ತಾಲ್ಲೂಕಿನ ಕಮಲಾಪುರ ಸಮೀಪದ ಪಟ್ಟಾಭಿರಾಮ ದೇವಸ್ಥಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ದೇವಾಲಯಗಳ ವಾಸ್ತುಶಿಲ್ಪ’ ಕುರಿತ ಎರಡು ದಿ‌ನಗಳ ‘ದೇವಾಯತನ’ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ದೇವಸ್ಥಾನಗಳಿಂದ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿದೆ. ಶೈಕ್ಷಣಿಕ, ಆರ್ಥಿಕ ಅವಕಾಶಗಳ ಸೃಷ್ಟಿಗೂ ಕಾರಣವಾಗಿವೆ. ಗುಡಿ ಕೈಗಾರಿಕೆಗಳಲ್ಲಿ ತಯಾರಿಸಲಾಗುವ ವಸ್ತುಗಳ ಮಾರಾಟಕ್ಕೂ ಅವುಗಳು ಕೇಂದ್ರವಾಗಿವೆ. ಮಂದಿರಗಳು ಏಕತೆ, ಅಖಂಡತೆಯ ಪ್ರತೀಕ. ಸಾಮರಸ್ಯ, ಸಮಾನತೆಯ ಕೇಂದ್ರಗಳು ಕೂಡ ಹೌದು. ಅನೇಕ ಕ್ರಾಂತಿಕಾರಿಗಳು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ದೇವಾಲಯಗಳಲ್ಲಿ ಸಂಕಲ್ಪ ಕೈಗೊಂಡಿದ್ದರು. ದೇವಸ್ಥಾನಗಳು ಎಲ್ಲರಿಗೂ ಒಂದೇ. ಬಡವರು, ಶ್ರೀಮಂತರು ಎಂಬ ಭೇದವಿಲ್ಲ. ಸಾಮಾಜಿಕ ಸಮಾನತೆ ತರುವಂತಹ ಮುಖ್ಯ ಕೇಂದ್ರಗಳಾಗಿವೆ ಎಂದರು.

ದೇಶದಲ್ಲಿ ಅಸಂಖ್ಯ ಸ್ಮಾರಕಗಳು, ದೇವಾಲಯಗಳಿವೆ. ಅವುಗಳ ಜೀರ್ಣೊದ್ಧಾರ, ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಅವುಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಿಸಲಾಗುತ್ತಿದೆ. ನಮಗೆ ನಿರೀಕ್ಷೆ ಇರಲಿಲ್ಲ. ಅನೇಕ ವರ್ಷಗಳ ಸಂಘರ್ಷ ನಡೆಯುತ್ತಿತ್ತು. ಪ್ರಧಾನಿ ಮೋದಿಯವರು ಅದನ್ನು ಸಾಧ್ಯವಾಗಿಸಿದ್ದಾರೆ. ಎರಡು ವರ್ಷಗಳಲ್ಲಿ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಅದೇ ರೀತಿ ಕಾಶಿ ವಿಶ್ವನಾಥ ಮಂದಿರ ಕೂಡ ಅಭಿವೃದ್ಧಿ ಪಡಿಸಲಾಗಿದೆ. ಕೇದಾರನಾಥಕ್ಕೆ ಭಕ್ತರು ಹೋಗಿ ಬರಲು ಸಕಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸರ್ಕಾರದ ಸಾಧನೆ ವಿವರಿಸಿದರು.

ಸಾರಿಗೆ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಹಂಪಿ ಶಿಲ್ಪಕಲೆಯ ಜೀವಂತ ವಿಶ್ವವಿದ್ಯಾಲಯ. ಹಂಪಿ ಜಗತ್ತಿನ ಅದ್ಭುತ, ಜೀವಂತ ವಸ್ತು ಸಂಗ್ರಹಾಲಯ. ರಾಜ್ಯದ ಪ್ರವಾಸೋದ್ಯಮದ ಮುಕುಟದ ಕಿರೀಟ. ಪ್ರತಿ ಕಲ್ಲಿನಲ್ಲೂ ಕಲಾವೈವಿಧ್ಯ, ವೈಭವ ನೋಡಬಹುದು. ವಿಶ್ವದಲ್ಲಿ ಅದಕ್ಕೆ ವಿಶೇಷ ಸ್ಥಾನವಿದೆ. ಅದನ್ನು ಸಂರಕ್ಷಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್‌ ರೆಡ್ಡಿ, ರಾಜ್ಯ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಪಂಕಜಕುಮಾರ ಪಾಂಡೆ, ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ. ರಮೇಶ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಮಹಾನಿರ್ದೇಶಕಿ ವಿ.ವಿದ್ಯಾವತಿ ಇದ್ದರು. ದೇಶದ 75 ದೇವಾಲಯಗಳ ವಾಸ್ತುಶಿಲ್ಪ ವೈಭವ ಕುರಿತ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT