ಶನಿವಾರ, ಆಗಸ್ಟ್ 13, 2022
26 °C

ವಿಶ್ವನಾಥ ಬಿಜೆಪಿಯಲ್ಲಿ ಇರೋದಕ್ಕೆ ಎಂಎಲ್‌ಸಿ ಆಗಿದ್ದಾರೆ: ಕೆ.ಎಸ್‌. ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ‘ಎಚ್‌. ವಿಶ್ವನಾಥ ಅವರು ಬಿಜೆಪಿಯಲ್ಲಿ ಇರೋದಕ್ಕೆ ಎಂಎಲ್‌ಸಿ ಆಗಿದ್ದಾರೆ. ಅದನ್ನವರು ಭಿಕ್ಷೆಯೆಂದು ಪ್ರಶ್ನಿಸಬೇಕಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಸ್ವಂತ ಹಣದಿಂದ ನಗರದಲ್ಲಿ ಅವರ ಮನೆ ದೇವರಾದ ಚೌಡೇಶ್ವರಿ ದೇವಿ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಯ ಶಿಲಾನ್ಯಾಸ ಶನಿವಾರ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ವಿಶ್ವನಾಥ ಸೇರಿದಂತೆ 17 ಜನ ಶಾಸಕರಿಂದಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಏನೇ ಅಸಮಾಧಾನ ಇದ್ದರೂ ಬಗೆಹರಿಸಿಕೊಳ್ಳಬೇಕು. ಆದರೆ, ಪಕ್ಷ ತೊರೆಯುವುದು ಬೇಡ’ ಎಂದು ಸಲಹೆ ನೀಡಿದರು.

‘ಶಾಸಕರಾದ ವಿಶ್ವನಾಥ, ರೇಣುಕಾಚಾರ್ಯ, ಬಸನಗೌಡ ಪಾಟೀಲ ಯತ್ನಾಳ್‌, ಅರವಿಂದ ಬೆಲ್ಲದ್ ಯಾರು ಕೂಡ ಬಿಜೆಪಿ ಬಿಡುವುದಿಲ್ಲ. ಎಲ್ಲ ರೀತಿಯ ಗೊಂದಲ, ಸಮಸ್ಯೆಗಳ ಕುರಿತು ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ರಾಜ್ಯಕ್ಕೆ ಬಂದು ‌ಚರ್ಚಿಸಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಏನು ತಿಳಿಸಬೇಕೋ ಅದನ್ನು ತಿಳಿಸಿದ್ದಾರೆ. ಬಿ.ಎಸ್‌. ಯಡಿಯೂರಪ್ಪನವರು ಮುಂದಿನ ಎರಡು ವರ್ಷ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮತ್ತೆ ಪಕ್ಷದ ನಿಯಮ ಉಲ್ಲಂಘಿಸಿ ಮಾತನಾಡುವುದು ಸರಿಯಲ್ಲ. ಹಾಗೆ ಮಾತನಾಡಿದರೆ ಹೈಕಮಾಂಡ್‌ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಇಷ್ಟು ದಿನ ಅಸಮಾಧಾನ ಹೊರಹಾಕಿರುವುದು ಸಾಕು. ಈಗ ಯಾರು, ಯಾರ ವಿರುದ್ಧವೂ ದೂರು ಕೊಡುವುದು ಬೇಡ. ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಿಸಬೇಕೋ ಅಥವಾ ಪುನರ್‌ ರಚಿಸಬೇಕೋ ಎನ್ನುವುದರ ಕುರಿತು ಕೋರ್‌ ಕಮಿಟಿಯಲ್ಲಿ ಚರ್ಚೆಯೇ ಆಗಿಲ್ಲ’ ಎಂದು ತಿಳಿಸಿದರು.

‘ಬ್ರಹ್ಮ ಬಂದರೂ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಅವರಲ್ಲಿ ಒಮ್ಮತವಿಲ್ಲ. ಸಿದ್ದರಾಮಯ್ಯನವರು ಮುಂದಿನ ಮುಖ್ಯಮಂತ್ರಿ ಎಂದು ಶಾಸಕ ಜಮೀರ್‌ ಅಹಮ್ಮದ್‌ ಹೇಳುತ್ತಾರೆ. ಅದನ್ನು ಡಿ.ಕೆ. ಶಿವಕುಮಾರ ಒಪ್ಪುವುದಿಲ್ಲ. ಕಾಂಗ್ರೆಸ್‌ನಲ್ಲಿ ಬಿ. ಫಾರಂ ಕೊಡುವವರು ಡಿ.ಕೆ.ಶಿವಕುಮಾರ ಅವರೋ, ಸಿದ್ದರಾಮಯ್ಯನವರೋ ಅಥವಾ ಜಮೀರ್‌ ಅಹಮ್ಮದ್‌ ಅವರೋ ಗೊತ್ತಾಗುತ್ತಿಲ್ಲ. ದೂರವಾಣಿ ಕರೆ ಕದ್ದಾಲಿಕೆ ಕುರಿತು ಶಿವಕುಮಾರ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಈಗಾಗಲೇ ತನಿಖೆಗೆ ಆದೇಶಿಸಲಾಗಿದೆ’ ಎಂದು ಹೇಳಿದರು.

ಇದನ್ನೂ ಓದಿ... ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕಿಕ್ ಬ್ಯಾಕ್: ಎಸಿಬಿ ತನಿಖೆಗೆ ಸಿದ್ದರಾಮಯ್ಯ ಆಗ್ರಹ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು