ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12ನೇ ದಿನಕ್ಕೆ ಕಾಲಿರಿಸಿದ ಮುಷ್ಕರರಸ್ತೆಗಿಳಿದ ಹೆಚ್ಚಿನ ಬಸ್‌ಗಳು

Last Updated 18 ಏಪ್ರಿಲ್ 2021, 12:46 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ತರಬೇಕೆಂದು ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರ ಭಾನುವಾರ 12ನೇ ದಿನಕ್ಕೆ ಕಾಲಿರಿಸಿತು.

ಮುಷ್ಕರ ಆರಂಭದ ದಿನದಿಂದ ಇದುವರೆಗೆ ನಿತ್ಯ ಬೆರಳೆಣಿಕೆ ಸಂಖ್ಯೆಯ ಬಸ್ಸುಗಳು ಸಂಚಾರ ಬೆಳೆಸುತ್ತಿದ್ದವು. ಭಾನುವಾರ ಈ ಸಂಖ್ಯೆಯಲ್ಲಿ ಏರಿಕೆ ಕಂಡು ಬಂತು. ಅದರಲ್ಲೂ ಬಳ್ಳಾರಿ, ಕೂಡ್ಲಿಗಿ ಕಡೆಗೆ ಹೆಚ್ಚಾಗಿ ಬಸ್‌ಗಳು ಸಂಚರಿಸಿದವು. ಕೊಪ್ಪಳ, ಗದಗ ಸೇರಿದಂತೆ ಇತರೆ ಜಿಲ್ಲೆಗಳಿಗೆ ತೆರಳಲು ಪ್ರಯಾಣಿಕರು ನಿಲ್ದಾಣಕ್ಕೆ ಬಂದಿದ್ದರು. ಆದರೆ, ಬಸ್ಸುಗಳು ಇರಲಿಲ್ಲ.

ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಿಗೆ ಬಸ್‌ ಬಿಟ್ಟರಾದರೂ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಕಂಡು ಬರಲಿಲ್ಲ. ಬಸ್ಸುಗಳ ಓಡಾಟ ಹೆಚ್ಚಾಗುತ್ತಿದ್ದಂತೆ ಖಾಸಗಿ ವಾಹನಗಳು ನಿಲ್ದಾಣದೊಳಗೆ ಬರದಂತೆ ಸಾರಿಗೆ ಸಂಸ್ಥೆ ಸಿಬ್ಬಂದಿ ತಡೆದರು. ಇದರಿಂದ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆಯಿತು.

‘ಬಸ್‌ಗಳು ಸಂಚರಿಸದಿದ್ದಾಗ ನಾವು ಸರ್ವೀಸ್‌ ಕೊಟ್ಟಿದ್ದೇವೆ. ಈಗಲೂ ಕೊಡುತ್ತಿದ್ದೇವೆ. ನಮ್ಮನ್ನು ಬಸ್‌ ನಿಲ್ದಾಣದಿಂದ ವಾಹನ ಓಡಿಸುವಂತೆ ಹೇಳಿದವರೇ ಸಾರಿಗೆ ಸಂಸ್ಥೆ ಅಧಿಕಾರಿಗಳು. ಈಗ ಬಸ್‌ಗಳ ಓಡಾಟ ಹೆಚ್ಚಾಗುತ್ತಿದ್ದಂತೆ ನಮಗೆ ಒಳಗೆ ಬಿಡುತ್ತಿಲ್ಲ. ನಮ್ಮ ಮೇಲೆಯೇ ದಬ್ಬಾಳಿಕೆ ನಡೆಸಲು ಹೊರಟಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಟಂ ಟಂ ವಾಹನ ಚಾಲಕರು ಪ್ರತಿಕ್ರಿಯಿಸಿದ್ದಾರೆ.

ಆದರೆ, ಸಂಸ್ಥೆಯ ಕ್ರಮವನ್ನು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ಸಮರ್ಥಿಸಿಕೊಂಡಿದ್ದಾರೆ. ‘ನಮ್ಮ ವಾಹನಗಳ ಕಾರ್ಯಾಚರಣೆ ಇದ್ದಾಗ ಖಾಸಗಿಯವರು ವಾಹನಗಳನ್ನು ತೆಗೆದುಕೊಂಡು ಬರುತ್ತಿದ್ದರು. ಅದನ್ನು ನಮ್ಮ ಸಿಬ್ಬಂದಿ ತಡೆದಿದ್ದಾರೆ. ಭಾನುವಾರ ವಿಭಾಗ ವ್ಯಾಪ್ತಿಯಲ್ಲಿ 211 ಬಸ್‌ಗಳು ಸಂಚರಿಸಿವೆ ’ ಎಂದು ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT