ಮಂಗಳವಾರ, ಜೂನ್ 22, 2021
22 °C
ಎಪಿಎಂಸಿ ಮಾರುಕಟ್ಟೆಯಲ್ಲಿ ಜನಜಾತ್ರೆ; ಪ್ರಯೋಜನವಾಗದ ಐದು ಮಾರುಕಟ್ಟೆ

ಹೊಸಪೇಟೆ: ಬೆಳಿಗ್ಗೆ ಜನಜಂಗುಳಿ, ಮಧ್ಯಾಹ್ನ ಸ್ತಬ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಕೋವಿಡ್‌–19 ವ್ಯಾಪಕವಾಗಿ ಹರಡುವುದನ್ನು ತಡೆಯಲು ಜಿಲ್ಲಾಡಳಿತವು ನಗರದಲ್ಲಿ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಗೊಳಿಸುವುದರ ಜತೆಗೆ ತಾತ್ಕಾಲಿಕವಾಗಿ ಐದು ಕಡೆ ಮಾರುಕಟ್ಟೆಗಳನ್ನು ಆರಂಭಿಸಿದೆ. ಆದರೆ, ಜನ ಸೇರುವುದು ತಪ್ಪಿಲ್ಲ.

ಅನೇಕ ನಗರಗಳಲ್ಲಿ ಕೋವಿಡ್‌ ಪೀಡಿತರಿಗೆ ಸಕಾಲಕ್ಕೆ ಹಾಸಿಗೆ, ಆಮ್ಲಜನಕ ಸಿಗದೆ ಸಾಯುತ್ತಿದ್ದಾರೆ. ನಗರ ಸೇರಿದಂತೆ ಜಿಲ್ಲೆಯಲ್ಲಿ ನಿತ್ಯ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಆದರೆ, ನಗರದಲ್ಲಿ ಜನ ಅದಕ್ಕೆ ಹೆಚ್ಚಿನ ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಅದಕ್ಕೆ ಸಾಕ್ಷಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಪ್ರಾಂಗಣ.

ಶನಿವಾರ ನಗರದ ಎಪಿಎಂಸಿಯಲ್ಲಿ ಈ ಹಿಂದಿನಂತೆಯೇ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಜನರಿಗೆ ಅನುಕೂಲವಾಗಲಿ ಎಂದು ನಗರದ ಬೇರೆ ಬೇರೆ ಭಾಗಗಳಲ್ಲಿ ತರಕಾರಿ, ಹಣ್ಣು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಜನ ಅವರ ಮನೆ ಬಳಿಯಿರುವ ಮಾರುಕಟ್ಟೆಗಳಲ್ಲಿ ಖರೀದಿಸದೆ ಎಪಿಎಂಸಿಯತ್ತ ದೌಡಾಯಿಸಿದರು. ಯಾವುದೇ ರೀತಿಯ ಅಂತರ ಕಾಯ್ದುಕೊಳ್ಳದೆ ತರಕಾರಿ, ಹಣ್ಣು ಖರೀದಿಸಿದರು.

ಎರಡ್ಮೂರು ದಿನಗಳಿಂದ ನಗರದಲ್ಲಿ ಬಿಗಿ ಕ್ರಮ ಕೈಗೊಂಡು ಎಲ್ಲರ ಮೆಚ್ಚುಗೆ ಗಳಿಸಿರುವ ಪೊಲೀಸರು, ಶನಿವಾರ ಅಷ್ಟೊಂದು ಸಂಖ್ಯೆಯ ಜನ ಎಪಿಎಂಸಿಯಲ್ಲಿ ಸೇರಿದರೂ ಆ ಕಡೆ ಸುಳಿಯಲಿಲ್ಲ. ಎಪಿಎಂಸಿ ಪ್ರಾಂಗಣದಲ್ಲೇ ಪೊಲೀಸ್‌ ಠಾಣೆಯೂ ಇದೆ. ಆದರೆ, ಜನ ಯಾವ ಹೆದರಿಕೆಯೂ ಇಲ್ಲದೆ ಮನಬಂದಂತೆ ಓಡಾಡಿ, ಗುಂಪು ಗುಂಪಾಗಿ ನಿಂತು ತರಕಾರಿ ಖರೀದಿಸಿದರು.

ನಗರದ ತಾಲ್ಲೂಕು ಕ್ರೀಡಾಂಗಣದಲ್ಲೂ ಇಂತಹುದೇ ದೃಶ್ಯ ಕಂಡು ಬಂತು. ಕೆಲವರು ಅಂತರ ಕಾಯ್ದುಕೊಂಡು ಏಕಾಂಗಿಯಾಗಿ ವಾಯು ವಿಹಾರ ಮಾಡಿದರು. ಮತ್ತೆ ಕೆಲವರು ಗೆಳೆಯರೊಂದಿಗೆ ಗುಂಪು ಗುಂಪಾಗಿ ಓಡಾಡಿದರು. ಬಹುತೇಕರು ಮಾಸ್ಕ್‌ ಧರಿಸಿರಲಿಲ್ಲ. ನಗರದ ಕಾಲೇಜು ರಸ್ತೆಗೆ ಹೊಂದಿಕೊಂಡಂತೆ ಕ್ರೀಡಾಂಗಣವಿದೆ. ಅಲ್ಲಿ ಏನೇ ನಡೆದರೂ ಗಮನಕ್ಕೆ ಬರುತ್ತದೆ. ಅಲ್ಲಿಂದಲೇ ಪೊಲೀಸರು ಓಡಾಡಿದರೂ ತಡೆಯುವ ಕೆಲಸ ಮಾಡಲಿಲ್ಲ. ಜನ ಬೇಕಾಬಿಟ್ಟಿ ಓಡಾಡುತ್ತಿರುವುದಕ್ಕೆ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ.

‘ಎರಡ್ಮೂರು ದಿನಗಳಿಂದ ಪೊಲೀಸರು ಬಿಗಿ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ, ಶನಿವಾರ ಎಪಿಎಂಸಿಯಲ್ಲಿ ಅಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿದರೂ ಅದನ್ನು ತಡೆಯಲಿಲ್ಲ. ಕೊರೊನಾ ಸೋಂಕು ವ್ಯಾಪಕವಾಗಿ ಹರಡಿ, ಸಾಕಷ್ಟು ಜನರಿಗೆ ತೊಂದರೆ ಆಗುತ್ತಿದೆ. ಹೀಗಿರುವಾಗಲೂ ಅದನ್ನು ತಡೆಯದಿದ್ದರೆ ದೊಡ್ಡ ದುರಂತ ಸಂಭವಿಸಬಹುದು. ನನ್ನಂತಹ ವಯಸ್ಸಾದವರಿಗೆ ಹೊರಗೆ ಓಡಾಡಲು ಬಹಳ ಹೆದರಿಕೆ ಉಂಟಾಗುತ್ತಿದೆ.’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ನಾಗರಿಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಈ ಸಂಬಂಧ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಮಾಹಿತಿಗೆ ಲಭ್ಯರಾಗಲಿಲ್ಲ.

ಮಧ್ಯಾಹ್ನ ಸ್ತಬ್ಧ:

ಜನ ಬೆಳಿಗ್ಗೆ ತರಕಾರಿ, ಹಣ್ಣು, ಹಾಲು, ದಿನಸಿ ಸೇರಿದಂತೆ ಇತರೆ ಅಗತ್ಯ ವಸ್ತುಗಳನ್ನು ಖರೀದಿಸಲು ಹೊರಗೆ ಬಂದರು. 11 ಗಂಟೆಯ ವರೆಗೆ ಜನರ ಓಡಾಟ ಇತ್ತು. ಆದರೆ, ಮಧ್ಯಾಹ್ನ 12 ಗಂಟೆಯ ನಂತರ ಪ್ರಮುಖ ವೃತ್ತ, ರಸ್ತೆಗಳಲ್ಲಿ ಪೊಲೀಸರು ನಿಂತು, ವಿನಾಕಾರಣ ಹೊರಗೆ ಓಡಾಡುತ್ತಿದ್ದವರನ್ನು ಮನೆಗಳಿಗೆ ಕಳುಹಿಸಿದರು.

ಅಲ್ಲಲ್ಲಿ ಕೆಲವರು ಮಳಿಗೆಗಳನ್ನು ತೆರೆದಿದ್ದರು. ಪೊಲೀಸರು ಅವುಗಳನ್ನು ಮುಚ್ಚಿಸಿ, ಪುನಃ ತೆರೆಯದಂತೆ ಎಚ್ಚರಿಕೆ ನೀಡಿದರು. ನಗರದಾದ್ಯಂತ ಗಸ್ತು ತಿರುಗಿದರು. ಇದರ ಪರಿಣಾಮ ಜನ ಹಾಗೂ ವಾಹನ ಓಡಾಟ ತಗ್ಗಿತು. ಮಧ್ಯಾಹ್ನದ ನಂತರ ಇಡೀ ನಗರ ಸ್ತಬ್ಧಗೊಂಡಿತು. ಪ್ರಮುಖ ರಸ್ತೆಗಳಲ್ಲಿ ಪೊಲೀಸ್‌ ವಾಹನಗಳು ಬಿಟ್ಟರೆ ಬೇರೇನೂ ಇರಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು