ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಭಾಷೆ ಕಲಿಕೆ ಕಡ್ಡಾಯ ನಿಯಮ; ಅಸ್ಮಿತೆಗೆ ಪೆಟ್ಟು

Last Updated 30 ಜುಲೈ 2022, 19:29 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಆಯಾ ರಾಜ್ಯಗಳ ಆಡಳಿತ ಭಾಷೆಯನ್ನು ಕಡ್ಡಾಯವಾಗಿ ಕಲಿಯಲೇಬೇಕು ಎಂಬ ನಿಯಮ ಗಡಿ ರಾಜ್ಯದಲ್ಲಿ ವಾಸಿಸುತ್ತಿರುವ ಕನ್ನಡಿಗರ ಭವಿಷ್ಯವನ್ನೇ ಅತಂತ್ರಗೊಳಿಸಿದೆ.

ರಾಜ್ಯದ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ಆ ರಾಜ್ಯದ ವಿವಿಧ ದರ್ಜೆಯ ಬಹುತೇಕ ನೌಕರಿಗಳಿಗೆ ಅರ್ಹತೆ ಇರುವ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆ ಬರೆದು, ನೌಕರಿ ಗಿಟ್ಟಿಸಿಕೊಂಡರೂ 5 ರಿಂದ 10 ವರ್ಷಗಳ ಒಳಗೆ ಆ ರಾಜ್ಯದ ಭಾಷೆ ಕಲಿಕೆ ಕಡ್ಡಾಯ. ಅದಕ್ಕೆಂದೇ ಭಾಷಾ ಪರೀಕ್ಷೆ ನಡೆಸಲಾಗುತ್ತದೆ. ಅನುತ್ತೀರ್ಣರಾದರೆ ನೌಕರಿ ಕಳೆದುಕೊಳ್ಳಬೇಕಾಗುತ್ತದೆ.

ನೌಕರಿಗೂ ಮುನ್ನ ಭಿನ್ನವಾದ ಪಡಿಪಾಟಲು. ಆಂಧ್ರ ಪ್ರದೇಶದಲ್ಲಿ ಲಂಬಾಣಿ ಸಮುದಾಯದರು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿದರೆ, ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ (ಎಸ್‌ಸಿ) ವ್ಯಾಪ್ತಿಗೆ ಬರುತ್ತಾರೆ. ಆಂಧ್ರ ಪ್ರದೇಶದ ಎಸ್‌ಟಿ ಪ್ರಮಾಣ ಪತ್ರವನ್ನು ಕರ್ನಾಟಕ ಮಾನ್ಯ ಮಾಡುವುದಿಲ್ಲ. ಎರಡೂ ಕಡೆ ಒಂದೇ ಪ್ರಮಾಣ ಪತ್ರ ಸಿಗುವುದಿಲ್ಲ. ಉನ್ನತ ಶಿಕ್ಷಣದ ಜೊತೆಗೆ ನೌಕರಿ ಪಡೆಯುವಾಗ ಇದು ದೊಡ್ಡ ತೊಡಕಾಗುತ್ತದೆ.

ಪದವಿ ಮುಗಿಸಿದರೂ ಸರ್ಕಾರಿ ನೌಕರಿಗಾಗಿ ಭಾಷಾ ಪರೀಕ್ಷೆ ಉತ್ತೀರ್ಣ ಆಗಬೇಕಾಗಿರುವುದು ಮಹಾರಾಷ್ಟ್ರ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಕಡ್ಡಾಯ. ನೌಕರಿಗಾಗಿ ಕನ್ನಡಿಗರು ಆಯಾ ರಾಜ್ಯದ ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣ ಪಡೆದರೂ ಅವರನ್ನು ದ್ವಿತೀಯ ದರ್ಜೆ ಪ್ರಜೆಗಳನ್ನಾಗಿ ನೋಡಲಾಗುತ್ತದೆ. ಬಡ್ತಿ ಸೇರಿ ಇತರೆ ಸಂದರ್ಭಗಳಲ್ಲಿ ಕನ್ನಡಿಗರಿಗೆ ಸತತವಾಗಿ ಅನ್ಯಾಯವಾಗುತ್ತದೆ’ ಎಂಬುದು ಗಡಿ ಕನ್ನಡಿಗರ ಅಳಲು.

ಆಡಳಿತ ಭಾಷೆ ಕಲಿಕೆ ಎರಡು ಅಲಗಿನ ಕತ್ತಿಯಂತೆ. ಕಲಿಯುವುದು ಅನಿವಾರ್ಯ. ಆದರೆ, ಕಲಿತ ನಂತರ ಅದೇ ರೂಢಿಯಾಗಿ ಕನ್ನಡ ಕರಗುತ್ತಿದೆ. ಗಡಿ ಕನ್ನಡಿಗರ ಪರಿಸ್ಥಿತಿಯೂ ಹೀಗೆ ಇದೆ

- ನರೇಶ್ ಮುಳ್ಳೇರಿಯ, ಆಯುರ್ವೇದ ವೈದ್ಯ

ಒಂದೊಂದು ರಾಜ್ಯದಲ್ಲಿ ಒಂದೊಂದು ಸಮುದಾಯದವರು ಬೇರೆ ಬೇರೆ ಜಾತಿ ಪಟ್ಟಿಗಳಲ್ಲಿ ಇದ್ದಾರೆ. ಹಾಸ್ಟೆಲ್‌, ಉನ್ನತ ಶಿಕ್ಷಣ, ನೌಕರಿಗೆ ಸೇರುವಾಗ ತೊಂದರೆ ಆಗುತ್ತಿದೆ.
– ಗಿರಿಜಾಪತಿ ಮಠಂ, ಶಿಕ್ಷಕ, ಜಿಲ್ಲಾ ಪರಿಷತ್‌ ಪ್ರೌಢಶಾಲೆ, ಡಿ. ಹಿರೇಹಾಳ್‌, ಅನಂತಪುರ ಜಿಲ್ಲೆ

ಹಿಂದೆ ಗ್ರಾಮೀಣ ಭಾಗದ ಕನ್ನಡಿಗರು ಕನ್ನಡದಲ್ಲೇ ಶಿಕ್ಷಣ ಪಡೆಯುತ್ತಿದ್ದರು. ಆದರೆ, ನೌಕರಿಗಾಗಿ ಅನಿವಾರ್ಯವಾಗಿ ಮರಾಠಿ ಶಾಲೆ ಸೇರುತ್ತಿದ್ದಾರೆ. ಇದು ಪರಿಸ್ಥಿಯ ಅನಿವಾರ್ಯತೆ.
– ಮಲ್ಲೇಶಪ್ಪ ತೇಲಿ, ಮುಖಂಡ, ಸಾಂಗ್ಲಿಯ ಗಡಿ ಕನ್ನಡಿಗ ಸಂಘಟನೆ

ಮಹಾರಾಷ್ಟ್ರದಲ್ಲಿ ಎಲ್ಲ ಸರ್ಕಾರಿ ಗುರುತಿನ ಚೀಟಿ, ಆದೇಶ ಮರಾಠಿಯಲ್ಲೇ ಇರುತ್ತವೆ. ಸಹಜವಾಗಿ ಇದು ಅಲ್ಲಿಯ ಕನ್ನಡಿಗರ ಅಂತಃಸತ್ವವನ್ನೇ ಕುಗ್ಗಿಸುತ್ತಿದೆ

- ಅಶೋಕ ಚಂದರಗಿ, ಅಧ್ಯಕ್ಷ, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT