ಹರಪನಹಳ್ಳಿ: ನಿರ್ಲಕ್ಷ್ಯದಿಂದ ಲಾರಿ ಚಲಾಯಿಸಿ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಒಂಬತ್ತು ಮಂದಿ ಗಾಯಗೊಂಡು ಮೂರು ವಾಹನ, ಒಂದು ಮಳಿಗೆ ಹಾನಿಗೊಂಡ ಘಟನೆ ಭಾನುವಾರ ಜರುಗಿದೆ.
ಆನಂದಚಾರಿ, ಮುನ್ನಾ ಖಾನ್ ಸಲಾಂ ಸಾಬ್, ಜೈತುನ್ ಬೀ, ಶೋಭಮ್ಮ, ಜುನಾಬೀ, ಹನುಮರೆಡ್ಡಿ, ಅರುಣ್ ಕುಮಾರ ಸೇರಿ 9 ಜನ ಗಾಯಗೊಂಡಿದ್ದಾರೆ. ಗಾಯಾಳು ಆರೋಪಿ ಲಾರಿ ಚಾಲಕ ತಲೆಮರೆಸಿಕೊಂಡಿದ್ದಾನೆ.
ನೀಲಗುಂದ ಕ್ರಾಸ್‌ನಲ್ಲಿ ಪ್ರಯಾಣಿಕರನ್ನು ಇಳಿಸಲು ಹರಿಹರದಿಂದ ಬಂದ ಸಾರಿಗೆ ಬಸ್ ಹಿಂದೆ ಕಾರು ನಿಂತಿತ್ತು. ವೇಗವಾಗಿ ಬಂದ ಲಾರಿ ಸಾರಿಗೆ ಬಸ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಮತ್ತು ಕಾರು ನಜ್ಜುಗುಜ್ಜಾಗಿವೆ.
ಡಿಕ್ಕಿ ಹೊಡೆದ ನಂತರ ಲಾರಿ ಎಡಭಾಗಕ್ಕೆ ತಿರುಗಿ ಬೈಕ್ ಗೆ ಗುದ್ದಿದ ಪರಿಣಾಮ ಸವಾರ ಆನಂದಚಾರಿ ಗಾಯಗೊಂಡಿದ್ದಾರೆ. ನಂತರ ಲಾರಿ ಮಳಿಗೆಯತ್ತ ನುಗ್ಗಿ ಹಾನಿ ಮಾಡಿತು. ಈ ಅವಘಡದಲ್ಲಿ ಬಸ್ ಮತ್ತು ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹರಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.