ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿವಾಳ ಸಮಾಜ ಪರಿಶಿಷ್ಟ ಜಾತಿಗೆ ಸೇರಿಸಿ

ಮುಖ್ಯಮಂತ್ರಿ ಮನೆ ಮುಂದೆ ಬಟ್ಟೆ ಒಗೆದು ಪ್ರತಿಭಟನೆಗೆ ನಿರ್ಧಾರ
Last Updated 25 ಫೆಬ್ರುವರಿ 2021, 9:04 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ‘ಮಡಿವಾಳ ಸಮಾಜದ ಕುಲಶಾಸ್ತ್ರೀಯ ಅಧ್ಯಯನ ಮುಗಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಆದಷ್ಟು ಶೀಘ್ರ ರಾಜ್ಯ ಸರ್ಕಾರ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು’ ಎಂದು ಅಖಿಲ ಭಾರತ ಮಡಿವಾಳ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಎಂ.ಎಂಜೇರಪ್ಪ ತಿಳಿಸಿದರು.

‘ಪರಿಶಿಷ್ಟ ಜಾತಿಗೆ ಸೇರಿಸಲು ಮಡಿವಾಳ ಸಮಾಜ ಎಲ್ಲ ರೀತಿಯ ಲಕ್ಷಣ ಹೊಂದಿದೆ. 2011ರಲ್ಲೇ ಪ್ರೊ. ಅನ್ನಪೂರ್ಣ ಅವರು ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಇನ್ನೂ ತಡಮಾಡದೆ ಸರ್ಕಾರ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ದೇಶದ 18 ರಾಜ್ಯ ಹಾಗೂ 4 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಡಿವಾಳ ಸಮುದಾಯ ಪರಿಶಿಷ್ಟ ಜಾತಿಗೆ ಸೇರಿದೆ. ಅಹಿಂದ ನಾಯಕ ಸಿದ್ದರಾಮಯ್ಯನವರು ಎಲ್ಲಾ ವರ್ಗದವರಿಗೂ ಭಾಗ್ಯಗಳನ್ನು ಕೊಟ್ಟರು. ನಮಗೆ ಮಾತ್ರ ದೌರ್ಭಾಗ್ಯ ಕೊಟ್ಟಿರುವುದು ದುರಂತವಾಗಿದೆ. ಈಗಾಗಲೇ ಚಿತ್ರದುರ್ಗದ ಮಡಿವಾಳ ಗುರುಪೀಠದಲ್ಲಿ ಬಸವಮಾಚಿದೇವ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ನಡೆಸಿ ಹೋರಾಟದ ರೂಪುರೇಷೆ ಸಿದ್ಧವಾಗಿದೆ’ ಎಂದು ತಿಳಿಸಿದರು.

‘ಶುಕ್ರವಾರ (ಫೆ.26) ಸಮುದಾಯದ ವತಿಯಿಂದ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಿದ ನಂತರ ಮಾ.01ರಂದು ಬೆಂಗಳೂರಿನಲ್ಲಿ ರಾಜ್ಯ ಘಟಕದ ಅಧ್ಯಕ್ಷ ಸಿ.ನಂಜಪ್ಪ ಅಧ್ಯಕ್ಷತೆಯಲ್ಲಿ ಸಮುದಾಯದ ಎಲ್ಲಾ ಸ್ವಾಮೀಜಿ ಹಾಗೂ ಮುಖಂಡರ ಸಭೆ ನಡೆಸಿ ಹೋರಾಟದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ’ ಎಂದು ಮಾಹಿತಿ ಹಂಚಿಕೊಂಡರು.

ಬಟ್ಟೆ ಒಗೆದು ಪ್ರತಿಭಟನೆ:

‘ಪರಿಶಿಷ್ಟ ಜಾತಿಗೆ ಮಡಿವಾಳ ಸಮುದಾಯವನ್ನು ಸೇರಿಸಿ ಶೈಕ್ಷಣಿಕ, ಸಾಮಾಜಿಕ ಮೀಸಲಾತಿ ಕೋರಿ ಹೋರಾಟವನ್ನು ಮಾಡಲು ನಿರ್ಧರಿಸಲಾಗಿದೆ. ವಿಧಾನಸೌಧದ ಮುಂದೆ ಅಥವಾ ಮುಖ್ಯಮಂತ್ರಿಗಳ ಮನೆಯ ಮುಂದೆ ಬಟ್ಟೆ ಒಗೆಯುವ ಮೂಲಕ ಸರ್ಕಾರದ ಗಮನವನ್ನು ಸೆಳೆಯಲಾಗುವುದು. ಈ ಕುರಿತಂತೆ ಬೆಂಗಳೂರಿನ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಮುದಾಯದ ಪಾಪಣ್ಣ, ಶಾಮಪ್ಪ, ಪ್ರಹ್ಲಾದ್, ಭರತ್ ಕುಮಾರ್ ಹಾಗೂ ತಾಲ್ಲೂಕು ಮಡಿವಾಳ ಸಂಘದ ಅಧ್ಯಕ್ಷ ರಾಜ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT