ಮರಿಯಮ್ಮನಹಳ್ಳಿ: ‘ನನ್ನ ಊರು ಇದೇ, ನನಗೆ ಇಲ್ಲಿನ ಎಲ್ಲ ಸಮಸ್ಯೆಗಳು ಗೊತ್ತಿದೆ. ನೀವೇನೂ ಸಬೂಬು ಹೇಳಬೇಕಿಲ್ಲ. ನೀರಿನ ಮೂಲ ಸಾಕಷ್ಟಿದ್ದರೂ 10–12 ದಿನಕ್ಕೆ ಒಮ್ಮೆ ನೀರು ಬಿಡುತ್ತೀರೆಂದರೆ ಹೇಗೆ, ಜನ ಏನ್ನೆನ್ನುತ್ತಾರೆ ನಮಗೆ...’
ಸ್ಥಳೀಯ ಪಟ್ಟಣ ಪಂಚಾಯ್ತಿ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಕೆ.ನೇಮರಾಜ ನಾಯ್ಕ ಅವರು ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಮೇಲಿನಂತೆ ತರಾಟೆಗೆ ತೆಗೆದುಕೊಂಡರು.
‘ಏನ್ರೀ ಸರ್ಕಾರ ನಿಮಗ ಸಂಬಳ ಕೊಡುತ್ತೊ, ಇಲ್ವ. ಚಂದಕ್ಕೆ ಕೆಲಸ ಮಾಡಲು ಬರುತ್ತೀರಾ ಹೇಗೆ? ಕುಡಿಯುವ ಸಿಹಿ ನೀರು ಸೇರಿದಂತೆ 51 ಕೊಳವೆ ಬಾವಿಗಳ ಮೂಲಕ ದಿನಕ್ಕೆ ಸುಮಾರು 11 ಲಕ್ಷ ಲೀಟರ್ ನೀರು ಲಭ್ಯವಿದ್ದರೂ 18 ವಾರ್ಡ್‍ಗಳಿಗೆ ಸರಿಯಾಗಿ ಪೂರೈಸಲಾಗುತ್ತಿಲ್ಲ ಎಂದರೆ ಹೇಗೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಬೇಜವಾಬ್ದಾರಿಯಿಂದ ಕೆಲಸ ಮಾಡಿದರೆ ಸಹಿಸೊಲ್ಲ, ಅವರಿಗೆ ನೋಟಿಸ್ ನೀಡಿ ಸಂಬಳ ಕಡಿತ ಮಾಡಿ’ ಎಂದರು.
ಮುಖ್ಯಾಧಿಕಾರಿ ಗಾದಿಲಿಂಗನಗೌಡ ಮಾತನಾಡಿ, ‘84 ಕೊಳವೆ ಬಾವಿಗಳಲ್ಲಿ 51 ಮಾತ್ರ ನೀರು ಕೆಲಸ ಮಾಡುತ್ತಿವೆ. ಅದರಲ್ಲೂ ಕೆಲವುಗಳಲ್ಲಿ ನೀರಿನ ಪ್ರಮಾಣ ಕುಸಿದಿದೆ. ನೀರು ಬಿಡುವ ಸಿಬ್ಬಂದಿ ಇಬ್ಬರು ಮಾತ್ರ ಇದ್ದಾರೆ’ ಎಂದು ಮಾಹಿತಿ ನೀಡಿದರು.
ಇನ್ನೂ ನಾಲ್ವರು ಸಿಬ್ಬಂದಿಯನ್ನು ತೆಗೆದುಕೊಂಡು, ನಾಲ್ಕೈದು ದಿನಗಳಿಗೊಮ್ಮೆ ನೀರು ಪೂರೈಸುವಂತೆ ಸೂಚಿಸಲಾಯಿತು.
ಇನ್ನು ಫಾರಂ 3 ಸಮಸ್ಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ, ‘ಸಾರ್ವಜನಿಕರನ್ನು ಅಲೆದಾಡಿಸಿದರೆ, ಕಾಸು ಕೇಳಿದರೆ ಸಹಿಸೊಲ್ಲ. ಸರಿಯಾದ ದಾಖಲೆ ಒದಗಿಸಿದರೆ ಮೂರು ದಿನದೊಳಗೆ ನೀಡಿ’ ಎಂದು ಸೂಚಿಸಿದ ಅವರು, ‘ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ. 2015–16ನೇ ಸಾಲಿನಿಂದ ಇಲ್ಲಿಯವರೆಗಿನ ಆಶ್ರಯ ಮನೆಗಳ ಮಾಹಿತಿ ಒದಗಿಸಬೇಕು’ ಎಂದು ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.