ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಿಬಾಬಾ ಮತ್ತು 40 ಕಳ್ಳರಿಂದ ನನಗೆ ಬ್ಲ್ಯಾಕ್‌ಮೇಲ್‌: ಸಚಿವ ಆನಂದ್‌ ಸಿಂಗ್‌

Last Updated 6 ಸೆಪ್ಟೆಂಬರ್ 2022, 13:40 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಅಲಿಬಾಬಾ (ಮಾಜಿ ನಗರಸಭೆ ಸದಸ್ಯ ಡಿ. ವೇಣುಗೋಪಾಲ್‌) ಮತ್ತು ಅವರ ಜತೆಗಿರುವ 40 ಕಳ್ಳರು ವಿಜಯನಗರದಲ್ಲಿ ಸಿಕ್ಕ ಸಿಕ್ಕ ಕಡೆಗಳಲ್ಲಿ ಭೂ ಕಬಳಿಕೆ ಮಾಡುತ್ತಿದ್ದಾರೆ. ಅದಕ್ಕಾಗಿ ಅಮಾಯಕರನ್ನು ಬಳಸಿಕೊಳ್ಳುತ್ತಿದ್ದಾರೆ, ‘ಬ್ಲ್ಯಾಕ್‌ಮೇಲ್‌’ ಮಾಡುತ್ತಿದ್ದಾರೆ’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಹೇಳಿದರು.

‘ಡಿ. ವೇಣುಗೋಪಾಲ್‌ ಭೂಗಳ್ಳರ ‘ಗ್ಯಾಂಗ್‌ ಲೀಡರ್‌’. ಈ ಭೂಗಳ್ಳರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಇಷ್ಟರಲ್ಲೇ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಆಗ್ರಹಿಸುತ್ತೇನೆ’ ಎಂದು ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾನೂನು ಸಲಹೆಗಾರ ಮಧುಸೂದನ್‌ ಸಿಂಗ್‌, ವಾಸ್ತುಶಿಲ್ಪಿ ಶ್ರೀಪಾದ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಚಿವರು, ಅವರ ವಿರುದ್ಧದ ಭೂ ಒತ್ತುವರಿ, ಕೊಲೆ ಬೆದರಿಕೆ, ಜಾತಿ ನಿಂದನೆ ಆರೋಪವನ್ನು ಅಲ್ಲಗಳೆದರು. ಅದಕ್ಕೆ ಪೂರಕವಾದ ಹಾಗೂ ವೇಣುಗೋಪಾಲ್‌ ಅವರ ಅಕ್ರಮದ ದಾಖಲೆಗಳನ್ನು ಮಾಧ್ಯಮದವರಿಗೆ ಬಿಡುಗಡೆಗೊಳಿಸಿದರು.

‘ಅಲಿಬಾಬಾ ಹಾಗೂ ಆತನ ಪತ್ನಿ ಸೇರಿಕೊಂಡು, ಸರ್ಕಾರಿ ಸ್ವತ್ತನ್ನು ರಾಣಿಪೇಟೆಯ ಸಂತೋಷ ಕುದುರೆ ಮೇಟಿ ಎಂಬುವರಿಗೆ ಮಾರಾಟ ಮಾಡಿ ₹16.28 ಲಕ್ಷ ವಂಚಿಸಿದ್ದಕ್ಕೆ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ. ಈ ವ್ಯಕ್ತಿಯೇ ಈಗ ಹಂಪಿ ರಸ್ತೆಯಲ್ಲಿ ಮಡಿವಾಳ ಸಮಾಜಕ್ಕೆ ಸೇರಿದ 1.05 ಎಕರೆ ಜಮೀನು ಕಬಳಿಸಲು ಹುನ್ನಾರ ನಡೆಸಿದ್ದಾನೆ. ಡಿ. ಪೋಲಪ್ಪನೊಂದಿಗೆ ಸೇರಿಕೊಂಡು ನಕಲಿ ವಿಲ್‌ ಸೃಷ್ಟಿಸಿ, ‘ಮಠದ ಜೀರ್ಣೊದ್ಧಾರ ಸಂಘ’ ಎಂದು ಮಾಡಿ, ಅದರ ಅಧ್ಯಕ್ಷ ತಾನೇ ಎಂದು ಹೇಳಿ, ಹದ್ದು ಬಸ್ತಿಗೆ ಮನವಿ ಸಲ್ಲಿಸಿದ್ದರು. ಆದರೆ, ತಹಶೀಲ್ದಾರ್‌ ದಾಖಲೆ ಪತ್ರಗಳನ್ನು ಪರಿಶೀಲಿಸಿ ಅವರ ಮನವಿ ತಿರಸ್ಕರಿಸಿದ್ದಾರೆ’ ಎಂದು ಹೇಳಿದರು.

ಸಂಸದರು ಹರಕೆಯ ಕುರಿ
‘ಸರ್ವೇ ನಂಬರ್‌ 63,65,67,68,71,72,73,74,75,83 ಒತ್ತುವರಿಯಾಗಿದೆ ಎಂದು ಆರ್‌.ಟಿ.ಐ. ಕಾರ್ಯಕರ್ತರ ಶ್ರೀಧರ್‌ ಎಂಬುವರು 2019–20ರಲ್ಲಿ ದೂರು ಕೊಟ್ಟಿದ್ದರು. ಯಥಾವತ್‌ ಇದೇ ದೂರಿನ ಪ್ರತಿಗಳೊಂದಿಗೆ ವೇಣುಗೋಪಾಲ್‌ ಹಾಗೂ ಆವರ ಸಂಗಡಿಗರು ಸುರಕ್ಷಾ ಎಂಟರ್‌ಪ್ರೈಸೆಸ್‌ ವಿರುದ್ಧ ದೂರು ಕೊಟ್ಟಿದ್ದಾರೆ.ಪ್ರಭಾವಿಗಳ ಕೈವಾಡವಿದೆ ಎಂದೂ ಆರೋಪಿಸಿದ್ದಾರೆ. ಆದರೆ, ಯಾವುದೇ ರೀತಿಯ ಒತ್ತುವರಿಯಾಗಿಲ್ಲ ಎಂದು ಲೋಕಾಯುಕ್ತ ಕ್ಲೀನ್‌ ಚಿಟ್‌ ಕೊಟ್ಟಿದೆ. ಮಾಜಿಸಂಸದ ವಿ.ಎಸ್‌. ಉಗ್ರಪ್ಪನವರು ಇದೇ ದಾಖಲೆಗಳನ್ನು ಇಟ್ಟುಕೊಂಡು ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಅವರು ಹರಕೆಯ ಕುರಿಯಾಗಿದ್ದಾರೆ’ ಎಂದು ಸಚಿವರು ಕುಟುಕಿದರು.

ಲೇಔಟ್‌ ನಿರ್ಮಿಸಿದ ಸುರಕ್ಷಾ ಎಂಟರ್‌ಪ್ರೈಸೆಸ್‌ಗೂ ನನಗೂ ಯಾವುದೇ ಸಂಬಂಧವಿಲ್ಲ. 15–20 ವರ್ಷಗಳ ಹಿಂದೆ ಜಮೀನು ಖರೀದಿಸಿ ಅವರಿಗೆ ಮಾರಾಟ ಮಾಡಿರುವೆ. ಅವರ ಲೇಔಟ್‌ನಲ್ಲಿ ನಾನು ಪಾಲುದಾರನೂ ಅಲ್ಲ. ಬ್ಲ್ಯಾಕ್‌ಮೇಲ್‌ ಮಾಡಿ ವ್ಯವಹಾರ ಕುದುರಿಸಲು ಭೂಗಳ್ಳರು ತಂತ್ರ ಮಾಡಿದ್ದರು. ಅದು ಫಲಿಸದಿದ್ದಾಗ ದೂರು ಕೊಟ್ಟಿದ್ದಾರೆ ಎಂದರು.

ಆನಂದ್‌ ಸಿಂಗ್‌ ಒತ್ತುವರಿ ಜಮೀನಿನಲ್ಲಿ ಮಹಲ್‌ ಕಟ್ಟಿದ್ದಾರೆ ಎಂದು ಉಗ್ರಪ್ಪನವರು ಆರೋಪಿಸಿದ್ದಾರೆ. ಅವರು ಬೇಕಾದರೆ ಮೈಸೂರು ಲಲಿತ್‌ ಮಹಲ್‌ ಕಟ್ಟಲಿ. ಹತಾಶೆಯಿಂದ ಮಾತಾಡಬಾರದು. ಯಾವ ಸರ್ವೇ ನಂಬರ್‌ನಲ್ಲಿ ಮನೆ ಕಟ್ಟಿದ್ದೇನೆ. ಅದರ ಅನುಮತಿ ಪತ್ರ ನನ್ನ ಬಳಿ ಇದೆ. ದಾಖಲೆಗಳನ್ನೆಲ್ಲ ಅಂಚೆ ಮೂಲಕ ಉಗ್ರಪ್ಪನವರಿಗೆ ಕಳಿಸಿಕೊಡುವೆ. ನಾನು ದಾಖಲೆ ಸಮೇತ ಮಾತನಾಡುತ್ತಿದ್ದೇನೆ. ಒಂದುವೇಳೆ ಅವರ ಬಳಿಯೂ ದಾಖಲೆಗಳಿದ್ದರೆ ಮಾತಾಡಬೇಕು. ಯಾರೋ ಕೊಟ್ಟಿರುವ ದೂರು ಆಧರಿಸಿ, ಮಾಧ್ಯಮಗಳಲ್ಲಿ ಬಂದ ವರದಿ ಆಧರಿಸಿ ಸುದ್ದಿಗೋಷ್ಠಿ ನಡೆಸಿ ನನ್ನ ವಿರುದ್ಧ ಆರೋಪ ಮಾಡುತ್ತಿರುವ ಹಿರಿಯರಾದ ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.

‘5 ಎಕರೆ ಕೊಟ್ಟವನು ನಾನು,5 ಸೇಂಟ್ಸ್‌ ಭೂಮಿಕಬಳಿಸಲೇಕೇ?’
‘ನಗರದ ಕನಕದಾಸ ವೃತ್ತದಿಂದ ಭಟ್ರಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಮೂಲಕ ಬೈಪಾಸ್‌ ರಸ್ತೆ ನಿರ್ಮಿಸುವಾಗ ನನಗೆ ಸೇರಿದ 5 ಎಕರೆ ಜಮೀನು ಬಿಟ್ಟು ಕೊಟ್ಟವನು ನಾನು. ಅಂಥದ್ದರಲ್ಲಿ ನಾನು 5 ಸೇಂಟ್ಸ್‌ ಜಾಗ ಕಬಳಿಸಲೇಕೇ?’ ಎಂದು ಸಚಿವ ಆನಂದ್‌ ಸಿಂಗ್‌ ಪ್ರಶ್ನಿಸಿದರು.

‘ಬೈಪಾಸ್‌ ರಸ್ತೆ ನಿರ್ಮಿಸುವಾಗ ಜಮೀನು ಕಳೆದುಕೊಂಡವರೆಲ್ಲ ಸರ್ಕಾರದಿಂದ ಪರಿಹಾರ ಪಡೆದರು. ಆದರೆ, ನಾನು ಅದಕ್ಕೆ ಪರಿಹಾರ ಕೂಡ ಪಡೆದಿಲ್ಲ. ಇಂಥದ್ದರಲ್ಲಿ 5 ಸೇಂಟ್ಸ್‌ ಜಾಗ ಕಬಳಿಸಿ ಅದರ ಮೇಲೆ ಮನೆಯೇಕೇ ಕಟ್ಟಲಿ. ನಾನು ಕನಸುಗಾರ, ಬೈಪಾಸ್‌ ನನ್ನ ಕನಸಾಗಿತ್ತು’ ಎಂದರು.

‘ಪೋಲಪ್ಪ ಅಮಾಯಕ, ಅಲಿಬಾಬಾ ಬಳಕೆ’
‘ಡಿ. ಪೋಲಪ್ಪ ಅಮಾಯಕ ವ್ಯಕ್ತಿ. ತನ್ನನ್ನು ಅಲಿಬಾಬಾ (ಡಿ.ವೇಣುಗೋಪಾಲ್‌) ಬಳಸಿಕೊಳ್ಳುತ್ತಿದ್ದಾನೆ ಎನ್ನುವುದು ಅವರಿಗೆ ಗೊತ್ತಾಗುತ್ತಿಲ್ಲ. ಅಲಿಬಾಬಾ ನಗರದಲ್ಲಿ ಇನ್ನೂ 7ರಿಂದ 8 ಜನರ ಭೂ ಕಬಳಿಕೆ ಮಾಡಿದ್ದಾನೆ ಎಂದು ಗೊತ್ತಾಗಿದೆ. ಅವರೆಲ್ಲ ನನ ಬಳಿ ಬಂದು ತಿಳಿಸಿದ್ದಾರೆ. ಅವರ ದಾಖಲೆ ಪತ್ರಗಳನ್ನು ಪರಿಶೀಲಿಸಿ, ಆತನ ಮುಖವಾಡ ಇಷ್ಟರಲ್ಲೇ ಬಯಲಿಗೆ ತರುತ್ತೇನೆ’ ಎಂದು ಸಚಿವ ಆನಂದ್‌ ಸಿಂಗ್‌ ಹೇಳಿದರು.

‘ಅಲಿಬಾಬಾ ಮತ್ತು 40 ಕಳ್ಳರು ನಗರದಲ್ಲಿ ರಿಮೋಟ್‌ ಪ್ರದೇಶದ ಜಾಗಗಳನ್ನು ಕಬಳಿಸುತ್ತಾರೆ. ಇವರೆಲ್ಲ ವೃತ್ತಿಪರ ಭೂಗಳ್ಳರು. ಅಮಾಯಕರನ್ನು ಬಳಸಿಕೊಳ್ಳುತ್ತಾರೆ’ ಎಂದು ಆರೋಪಿಸಿದರು.

‘ಆನಂದ್‌ ಸಿಂಗ್‌ ವಿರುದ್ಧ ಜಮೀನು ಒತ್ತುವರಿ ಕುರಿತು ದೂರು ಕೊಟ್ಟಿದ್ದಕ್ಕಾಗಿ ನನ್ನ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ ಎಂದು ಡಿ. ಪೋಲಪ್ಪ ಹೇಳಿದ್ದಾರೆ. ಆದರೆ, ಪೋಲಪ್ಪ ನನ್ನ ಮೇಲೆ ಎಲ್ಲಿ ದೂರು ಕೊಟ್ಟಿದ್ದಾರೆ. ಅವರು ದೂರು ಕೊಟ್ಟೇ ಇಲ್ಲ. ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಇನ್ನು, ನಾನು ಅವರಿಗೆ ಯಾವುದೇ ರೀತಿಯಿಂದ ನಿಂದಿಸಿಲ್ಲ. ಅವರೇ ದೂರಿನ ಸಮೇತ ವಿಡಿಯೊ, ಆಡಿಯೊ ಕೊಟ್ಟಿದ್ದಾರೆ. ಅದನ್ನು ಪರಿಶೀಲಿಸಲಿ’ ಎಂದರು.

‘₹35 ಕೋಟಿಯಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ’

‘ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರ ಬಳಿ 35 ಎಕರೆ ಸರ್ಕಾರಿ ಜಾಗದಲ್ಲಿ ₹35 ಕೋಟಿಯಲ್ಲಿ ಅತ್ಯಾಧುನಿಕ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗುವುದು’ ಎಂದು ಸಚಿವ ಆನಂದ್‌ ಸಿಂಗ್‌ ಹೇಳಿದರು.

‘ಬ್ಯಾಸ್ಕೆಟ್‌ಬಾಲ್‌, ವಾಲಿಬಾಲ್‌, ಟೆನ್ನಿಸ್‌ ಸೇರಿದಂತೆ ಎಲ್ಲ ರೀತಿಯ ಆಟಗಳನ್ನು ಆಡುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ನಗರದ ಜಿಲ್ಲಾ ಕ್ರೀಡಾಂಗಣವನ್ನು ಆನಂದ್‌ ಸಿಂಗ್‌ ಹಾಳು ಮಾಡುತ್ತಿದ್ದಾರೆ ಎಂದು ಕೆಲವರು ಅಸೂಯೆಯಿಂದ ಹೇಳುತ್ತಿದ್ದಾರೆ. ಮಳೆಯಿಂದ ಕೆಲಸ ನಿಂತಿದೆ. ಮಳೆ ನಿಂತ ನಂತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT