ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಟರ್ಮಿನಲ್‌ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಸಚಿವ ಬಿ. ಶ್ರೀರಾಮುಲು

Last Updated 27 ಮಾರ್ಚ್ 2022, 10:07 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ಕ್ಕೆ ಹೊಂದಿಕೊಂಡಿರುವ ಅಮರಾವತಿಯಲ್ಲಿ ಭಾನುವಾರ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು ನೂತನ ಟ್ರಕ್‌ ಟರ್ಮಿನಲ್‌ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.

‘ಟ್ರಕ್‌ ಟರ್ಮಿನಲ್‌ ನಿರ್ಮಿಸಬೇಕು ಎನ್ನುವುದು ಬಹುವರ್ಷಗಳ ಬೇಡಿಕೆಯಾಗಿತ್ತು. ನನ್ನ ಅವಧಿಯಲ್ಲಿ ಅದಕ್ಕೆ ಚಾಲನೆ ಸಿಗುತ್ತಿರುವುದು ಯೋಗಾಯೋಗ. ₹35 ಕೋಟಿಯಲ್ಲಿ ಮಾಡ್ರನ್‌, ಮಾಡೆಲ್‌ ಟ್ರಕ್‌ ಟರ್ಮಿನಲ್‌ ನಿರ್ಮಿಸಲಾಗುವುದು. ಅನುದಾನದ ಕೊರತೆಯಾದರೆ ಅನಂತರ ಹಣ ಬಿಡುಗಡೆಗೊಳಿಸಲಾಗುವುದು. ಡಿ. ದೇವರಾಜ ಅರಸ್‌ ಟ್ರಕ್‌ ಟರ್ಮಿನಲ್ಸ್‌ಗೆ ಇಲಾಖೆಯಿಂದ ₹25 ಕೋಟಿ ಅನುದಾನ ಕೂಡ ನೀಡಲಾಗುವುದು’ ಎಂದು ಘೋಷಿಸಿದರು.

‘ರಾಜ್ಯದ ದೇವನಹಳ್ಳಿ, ಹುಬ್ಬಳ್ಳಿ ಸೇರಿದಂತೆ ಇತರೆ ಕಡೆಗಳಲ್ಲಿಯೂ ಟ್ರಕ್‌ ಟರ್ಮಿನಲ್‌ ನಿರ್ಮಿಸಲಾಗುವುದು. ಸಾರಿಗೆ ಇಲಾಖೆಯಲ್ಲಿ ಹೊಸ ಯೋಜನೆಗಳನ್ನು ಜಾರಿಗೊಳಿಸಿ ಸುಧಾರಣೆ ತರಲಾಗುವುದು. ಬರುವ ದಿನಗಳಲ್ಲಿ ಟ್ರಕ್‌ ಟರ್ಮಿನಲ್‌ ಹಬ್‌, ಲಾಜಿಸ್ಟಿಕ್‌ ಸೆಂಟರ್‌ಗಳನ್ನು ನಿರ್ಮಿಸಲಾಗುವುದು. ಶಾಲಾ ಮಕ್ಕಳಿಗೆ ತೊಂದರೆಯಾಗದ ರೀತಿಯಲ್ಲಿ ಬಸ್‌ಗಳನ್ನು ಓಡಿಸಲಾಗುವುದು’ ಎಂದು ತಿಳಿಸಿದರು.

‘ಟ್ರಕ್‌ ಟರ್ಮಿನಲ್‌ನಲ್ಲಿ ಎಲ್ಲ ರೀತಿಯ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು. ವಾಹನಗಳ ನಿಲುಗಡೆ, ವ್ಯಾಯಾಮ ಶಾಲೆ, ಕ್ಯಾಂಟೀನ್‌, ಲಾಡ್ಜ್‌, ಪೆಟ್ರೋಲ್‌ ಬಂಕ್‌ ಸೇರಿದಂತೆ ಇತರೆ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಅದೇ ರೀತಿ ಸಾವಿರ ಲಾರಿ ಚಾಲಕರ ಕುಟುಂಬದವರು ವ್ಯಾಪಾರ ಮಾಡಲು ವಾಣಿಜ್ಯ ಸಮುಚ್ಚಯ ನಿರ್ಮಿಸಲಾಗುವುದು’ ಎಂದು ತಿಳಿಸಿದರು.

‘ಈ ಭಾಗದಲ್ಲಿ ಈ ಹಿಂದೆ ದೊಡ್ಡ ಪ್ರಮಾಣದಲ್ಲಿ ಗಣಿಗಾರಿಕೆ ನಡೆಯುತ್ತಿತ್ತು. ಅನೇಕ ಪ್ರಮುಖ ನಗರಗಳಿಗೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುತ್ತದೆ. ನಿತ್ಯ 30ರಿಂದ 40 ಸಾವಿರ ಲಾರಿಗಳು ಸಂಚರಿಸುತ್ತಿದ್ದವು. ಟ್ರಕ್‌ ಟರ್ಮಿನಲ್‌ ನಿರ್ಮಿಸಬೇಕೆನ್ನುವ ಬೇಡಿಕೆ ಇತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ಕಾಲ ಕೂಡಿಬಂದಿದೆ. ಈಗಾಗಲೇ ಹೊಸಪೇಟೆ–ಚಿತ್ರದುರ್ಗ ಹೆದ್ದಾರಿ ಮೇಲ್ದರ್ಜೆಗೆ ಏರಿದೆ. ಅದೇ ರೀತಿ ಹೊಸಪೇಟೆ–ಹುಬ್ಬಳ್ಳಿ ಹೆದ್ದಾರಿ ಕೆಲಸವೂ ಪೂರ್ಣಗೊಂಡಿದೆ. ಹೊಸಪೇಟೆ–ಬಳ್ಳಾರಿ ನಡುವೆ ಕಾಮಗಾರಿ ಬೇಗ ಪೂರ್ಣಗೊಳಿಸಲು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಕ್ರಮ ಕೈಗೊಂಡಿದ್ದಾರೆ’ ಎಂದರು.

ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ‘ಗುತ್ತಿಗೆದಾರರು ಗುಣಮಟ್ಟಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಮೈಮರೆತು ಕೆಲಸ ಮಾಡಬಾರದು. ನಮ್ಮ ಕಚೇರಿಯ ಸಿಬ್ಬಂದಿ ವಾರಕ್ಕೊಮ್ಮೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಾರೆ’ ಎಂದರು.

ಡಿ. ದೇವರಾಜ ಅರಸ್‌ ಟ್ರಕ್‌ ಟರ್ಮಿನಲ್ಸ್‌ ಲಿಮಿಟೆಡ್‌ನ ಅಧ್ಯಕ್ಷ ಡಿ.ಎಸ್. ವೀರಯ್ಯ, ಹೆದ್ದಾರಿಗಳಲ್ಲಿ ಅಪಘಾತ ಮತ್ತು ವಾಹನಗಳ ದಟ್ಟಣೆ ತಗ್ಗಿಸಲು ಎಲ್ಲ ಕಡೆ ಟ್ರಕ್‌ ಟರ್ಮಿನಲ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶಂಕ್ರಪ್ಪ, ನಿರ್ದೇಶಕರಾದ ಗೈಬುಸಾಬ್‌, ಚಿನ್ನಾರೆಡ್ಡಿ, ಪ್ರಸನ್ನಕುಮಾರ, ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ, ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್‌.ಎಸ್‌. ಆನಂದ್‌, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಸದಸ್ಯರಾದ ಸಿ. ಶಿವಶಂಕರ್‌, ಪಿ.ವಿ. ವೆಂಕಟೇಶ್‌, ಕಾಸೆಟ್ಟಿ ಉಮಾಪತಿ, ಯುವ ಮುಖಂಡ ಚಂದ್ರಕಾಂತ ಕಾಮತ್‌, ಲಾರಿ ಮಾಲೀಕರ ಸಂಘದ ರಾಮಣ್ಣ ಭೂಪಾಳ್‌ ಇದ್ದರು.

ಶಿಷ್ಟಾಚಾರಕ್ಕಿಲ್ಲ ಬೆಲೆ

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ಮುಮ್ತಾಜ್‌ ಬದಲು ಅವರ ಪತಿ ಕಲಂದರ್‌ ಅವರನ್ನು ವೇದಿಕೆಗೆ ಕರೆದು ಕೂರಿಸಲಾಗಿತ್ತು. ಇನ್ನು, ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಸಾರಿಗೆ ಸಚಿವ ಬಿ. ಶ್ರೀರಾಮುಲು ಬದಲು ಅಧ್ಯಕ್ಷತೆ ವಹಿಸಿದ್ದ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರಿಗೆ ಮೊದಲು ಮಾತನಾಡಲು ಅವಕಾಶ ಕಲ್ಪಿಸಲಾಗಿತ್ತು. ಕೊನೆಯಲ್ಲಿ ಶ್ರೀರಾಮುಲು ಮಾತನಾಡಿದರು. ಇತ್ತೀಚೆಗೆ ಕಂಪ್ಲಿಯಲ್ಲಿ ಶಿಷ್ಟಾಚಾರಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT