ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಇಎಸ್‌ ಕರಾಳ ದಿನ ಹಿಂದಿನಷ್ಟು ಪ್ರಭಾವಿ ಇಲ್ಲ: ಸಚಿವೆ ಶಶಿಕಲಾ

Last Updated 1 ನವೆಂಬರ್ 2022, 8:14 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಕನ್ನಡ ರಾಜ್ಯೋತ್ಸವದ ದಿನ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂ.ಇ.ಎಸ್‌. ನಡೆಸುತ್ತಿರುವ ಕರಾಳ ದಿನ ಹಿಂದಿನಷ್ಟು ಪ್ರಭಾವಿ ಇಲ್ಲ. ಕ್ರಮೇಣವಾಗಿ ಅದು ಕಡಿಮೆಯಾಗುತ್ತಿದೆ’ ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ತಿಳಿಸಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರ ನಿಪ್ಪಾಣಿಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿರಲಿಲ್ಲ. ಈಗ ಅದ್ದೂರಿಯಾಗಿ ನಡೆಯುತ್ತಿದೆ ಎಂದು ಹೇಳಿದರು.

ಕಾಶಿ ಯಾತ್ರೆಗೆ ನ. 11ರಂದು ಮೊದಲ ರೈಲು ಸಂಚಾರ ಬೆಳೆಸಲಿದೆ. ಈಗಾಗಲೇ 500 ಜನ ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸಿದ್ದಾರೆ. ಇದರ ಸಾಧಕ ಬಾಧಕ, ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಏನೆಲ್ಲ ಬದಲಾವಣೆ ಮಾಡಬಹುದು. ಎಲ್ಲೆಲ್ಲಿ ರೈಲು ನಿಲುಗಡೆಗೆ ಅವಕಾಶ ಕಲ್ಪಿಸಬಹುದು ಎಂಬುದರ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು ಎಂದರು.

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಏನೂ ಹೇಳಿದ್ದಾರೆ ಎನ್ನುವುದು ನಾನು ಗಮನಿಸಿಲ್ಲ. ಒಂದುವೇಳೆ ಏನಾದರೂ ಅಸಮಾಧಾನ, ಸಮಸ್ಯೆಯಿದ್ದರೆ ಪಕ್ಷದ ವರಿಷ್ಠರು ಅದನ್ನು ಬಗೆಹರಿಸುತ್ತಾರೆ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ದಿವಂಗತ ನಟ ಡಾ. ಪುನೀತ್‌ ರಾಜಕುಮಾರ್‌ ಅವರಿಗೆ ರಾಜ್ಯ ಸರ್ಕಾರ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿದೆ. ಇಷ್ಟೇ ಅಲ್ಲ, ಕನ್ನಡಕ್ಕಾಗಿ ಕೆಲಸ ನಿರ್ವಹಿಸಿದವರನ್ನು ಗುರುತಿಸಿ ಗೌರವಿಸುತ್ತಿದೆ. ಎಲ್ಲೆಡೆ ಕನ್ನಡದ ಕೆಲಸಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತಾಯಿಯ ಗರ್ಭದಲ್ಲೇ ಮಗು ಮೃತಪಟ್ಟಿರುವ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದ್ದು, ಒಂದುವೇಳೆ ವೈದ್ಯರಿಂದ ಲೋಪವಾದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ಇನ್ನು, ಯಾರಾದರೂ ಆಸ್ಪತ್ರೆಯಲ್ಲಿ ಹಣ ಕೇಳುತ್ತಿದ್ದರೆ, ಅಂಥವರ ಬಗ್ಗೆ ನಿರ್ದಿಷ್ಟವಾಗಿ ದೂರು ಕೊಟ್ಟರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯೋತ್ಸವದ ಅಂಗವಾಗಿ ಹೊಸಪೇಟೆಯ ಮಹಾತ್ಮ ಗಾಂಧಿ ವೃತ್ತದಲ್ಲಿ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಸಚಿವೆ ಶಶಿಕಲಾ ಉದ್ಘಾಟಿಸಿದರು. ಅಂಬೆ ಪ್ರಕಾಶನದ ಅಂಜಲಿ ಬೆಳಗಲ್‌ ಇದ್ದರು.

ಡಿಸೆಂಬರ್ ಅಥವಾ ಜನವರಿಯಲ್ಲಿ ಹಂಪಿ ಉತ್ಸವ
‘ಬರುವ ಡಿಸೆಂಬರ್‌ ಅಥವಾ ಜನವರಿಯಲ್ಲಿ ‘ಹಂಪಿ ಉತ್ಸವ’ ಸಂಘಟಿಸಲಾಗುವುದು. ಈ ಕುರಿತು ಈಗಾಗಲೇ ಸಿ.ಎಂ. ಜತೆ ಚರ್ಚಿಸಲಾಗಿದೆ’ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಮೈಸೂರು ದಸರಾ ಮಾದರಿಯಲ್ಲಿ ಹಂಪಿ ಉತ್ಸವಕ್ಕೂ ನಿರ್ದಿಷ್ಟ ದಿನಾಂಕ ನಿಗದಿ ಮಾಡಬೇಕೆಂಬ ಬೇಡಿಕೆಯಿದ್ದು, ಅದರ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಭವನ ನಿರ್ಮಾಣಕ್ಕೆ ಜಾಗ ನೀಡುವುದರ ಕುರಿತು ಜಿಲ್ಲಾಧಿಕಾರಿಗೆ ಸೂಚನೆ ಕೊಡಲಾಗಿದೆ. ಆ ನಿಟ್ಟಿನಲ್ಲಿ ಅವರು ಕ್ರಮ ಕೈಗೊಳ್ಳುವರು ಎಂದರು.

ಪತ್ರಕರ್ತರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೀಪಾವಳಿಯ ಸಿಹಿ ಜೊತೆಗೆ ಹಣ ಕೊಟ್ಟಿದ್ದು, ಅವರ ವಿರುದ್ಧ ಲಂಚದ ಪ್ರಕರಣ ದಾಖಲಿಸಬೇಕೆಂಬ ವಿರೋಧ ಪಕ್ಷಗಳ ಆಗ್ರಹದ ಕುರಿತು ನಾನೇನೂ ಪ್ರತಿಕ್ರಿಯಿಸಲಾರೆ. ಅದರ ಬಗ್ಗೆ ಈಗಾಗಲೇ ಸಿ.ಎಂ. ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT