ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೌಡೂರು ಪತ್ತಿನ ಸಹಕಾರ ಸಂಘ: ಮೃತ ರೈತರ ಖಾತೆಯಿಂದ ಹಣ ಪಾವತಿ!

ಹಣ ದುರುಪಯೋಗ ಆರೋಪ
Last Updated 6 ಫೆಬ್ರುವರಿ 2022, 5:54 IST
ಅಕ್ಷರ ಗಾತ್ರ

ಅರಸೀಕೆರೆ (ವಿಜಯನಗರ ಜಿಲ್ಲೆ): ಸಮೀಪದ ತೌಡೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮೃತಪಟ್ಟಿರುವ ರೈತರ ಖಾತೆಯಿಂದ ಎರಡು ಲಕ್ಷಕ್ಕೂ ಅಧಿಕ ಹಣ ಬಿಡುಗಡೆ ಮಾಡಿರುವ ಪ್ರಕರಣ ಬಯಲಾಗಿದ್ದು, ನಂಬಿಕೆ ದ್ರೋಹ, ವಂಚನೆಯ ದೂರು ಸಲ್ಲಿಸಲು ಕುಟುಂಬಸ್ಥರು ಮುಂದಾಗಿದ್ದಾರೆ.

ಸಂಘದ ಕ್ಯಾರಕಟ್ಟೆ ಗ್ರಾಮದ ರೈತ ದಿ. ಮಡಿವಾಳರ ಸಿದ್ದಪ್ಪ ಜೂ.15,2020 ರಲ್ಲಿ ನಿಧನ ಹೊಂದಿದ್ದಾರೆ. ಇವರ ಹೆಸರಿನಲ್ಲಿ ಸಂಘದ ಕಾರ್ಯದರ್ಶಿ ಎಚ್.ಜಿ ಪರಮೇಶ್ವರಪ್ಪ ಮಾ.10,2021 ರಲ್ಲಿ ಬಿಡಿಸಿಸಿ ಬ್ಯಾಂಕ್ ನಲ್ಲಿ ರೂ.43,000 ಹಾಗೂ ಸಂಘದಲ್ಲಿ ಮೇ.5 ರಂದು ರೂ.51,875 ಹಣವನ್ನು ಪಡೆದಿದ್ದಾರೆ ಎಂದು ಮೃತ ರೈತನ ಮಗ ಚಂದ್ರಪ್ಪ ಆರೋಪಿಸಿದ್ದಾರೆ. ತಂದೆಯವರ ಹೆಸರಿನಲ್ಲಿ ಅವ್ಯವಹಾರಕ್ಕೆ ಸಹಕರಿಸಿದ ಯಾರೇ ಆಗಿರಲಿ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಯರಬಳ್ಳಿ ಗ್ರಾಮದ ರೈತ ಮಹಿಳೆ ದಿ. ಗಂಗಮ್ಮ ಎಂಬುವವರ ಹೆಸರಿನಲ್ಲಿ ಕ್ರಮವಾಗಿ ರೂ.53,600 ಮತ್ತು ರೂ.58,333 ಹಣವನ್ನು ಪ್ರತ್ಯೇಕವಾಗಿ ಬಿಡುಗಡೆಗೊಳಿಸಿ ಅವ್ಯವಹಾರ ನಡೆಸಿದ್ದಾರೆ ಎಂದು ರೈತ ಮಹಿಳೆಯ ಮಗ ದೊಡ್ಡಮನಿ ಜಾತಪ್ಪ ದೂರು ಸಲ್ಲಿಸಿದ್ದಾರೆ.

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಈಚೆಗೆ ಅವ್ಯವಹಾರ ನಡೆದಿದೆ, ತನಿಖೆ ಕೈಗೊಳ್ಳುವಂತೆ ರೈತರು ಆಗ್ರಹಿಸಿದ ಬೆನ್ನಲ್ಲೇ ಖಾತೆಯ ವಿವರ ಮಾಹಿತೆ ಕಲೆ ಹಾಕಿದೆ. ಬಳಿಕ ತಾಯಿ ಮೃತ ಬಳಿಕ ಖಾತೆಯಿಂದ ಹಣ ಪಾವತಿಯಾಗಿರುವ ಕುರಿತು ದಾಖಲೆ ಪಡೆದಿಕೊಳ್ಳಲಾಗಿದೆ. ಭ್ರಷ್ಟಾಚಾರ ಕುರಿತು ತನಿಖೆಗೆ ಅಧಿಕಾರಿಗಳ ತಂಡ ಬರುತ್ತಾರೆ ಎನ್ನುವ ಮಾಹಿತಿ ಮೇರೆಗೆ ವಾರಗಳಿಂದ ಕಾದರೂ ಪ್ರಯೋಜನವಿಲ್ಲ. ಇಲ್ಲಿಯವರೆಗೂ ಯಾರು ಭ್ರಷ್ಟಾಚಾರದ ಕುರಿತು ಚಕಾರ ಎತ್ತಿಲ್ಲ. ಹಾಗಾಗಿ ಸಹಕಾರ ಸಂಘಗಳ ನಿಭಂದಕರಿಗೆ ದೂರು ಸಲ್ಲಿಸಲಾಗಿದೆ ಎಂದು ರೈತ ದೊಡ್ಡಮನಿ ಜಾತಪ್ಪ 'ಪ್ರಜಾವಾಣಿ'ಗೆ ಮಾಹಿತಿ ನೀಡಿದ್ದಾರೆ.

***
ತೌಡೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭ್ರಷ್ಟಾಚಾರ ನಡೆದಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದಂತೆ ಸಂಘದ ಕಾರ್ಯದರ್ಶಿ ಎಚ್.ಜಿ ಪರಮೇಶ್ವರಪ್ಪ ಕರ್ತವ್ಯಕ್ಕೆ ಗೈರಾಗಿದ್ದು, ಕಳೆದ ನಾಲ್ಕು ತಿಂಗಳುಗಳಿಂದ ಸಂಘದ ಕಚೇರಿಗೆ ಬೀಗ ಹಾಕಲಾಗಿದೆ. ಸಂಘದ ನಿರ್ದೇಶಕರು, ಷೇರುದಾರ ರೈತರಿಗೆ ತಲೆನೋವಾಗಿ ಪರಿಣಮಿಸಿದೆ.

ಜೀವನದ ಕಷ್ಟ ಸುಖಕ್ಕಾಗಿ ದಶಕಗಳಿಂದ ಇಟ್ಟಿರುವ ಠೇವಣಿ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಮಾಹಿತಿಗೆ ರೈತರಲ್ಲಿ ಆತಂಕ ಎದುರಾಗಿದೆ.

ತಲೆ ಮರೆಸಿಕೊಂಡಿರುವ ಕಾರ್ಯದರ್ಶಿ ತಮಗೆ ಬೇಕಾದವರ ತುರ್ತು ಕೆಲಸಕ್ಕೆ ಹರಪನಹಳ್ಳಿಗೆ ಕರೆದು ಕೆಲಸ ನಿರ್ವಹಿಸುತ್ತಿರುವ ಮಾಹಿತಿ ಇದೆ. ದೂರವಾಣಿಗೂ ಸಿಗುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಂಡು ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ರೈತ ಮುಖಂಡರಾದ ಯರಬಳ್ಳಿ ಉಮಾಪತಿ, ಕ್ಯಾರಕಟ್ಟೆ ಕೊಟ್ರನಗೌಡ, ಹಾಲೇಶಪ್ಪ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT