ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರದರ್ಶಕತೆಯಿಂದ ₹ 2.5 ಲಕ್ಷ ಕೋಟಿ ಹಣ ಉಳಿಕೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ವಿಜಯನಗರ ಜಿಲ್ಲಾಮಟ್ಟದ ಫಲಾನುಭವಿಗಳ ಸಮ್ಮೇಳನ
Last Updated 6 ಮಾರ್ಚ್ 2023, 12:41 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಖಾತೆಗೆ ನೇರ ಹಣ (ಡಿಬಿಟಿ) ಜಮೆ ಮಾಡಿ ಪಾರದರ್ಶಕತೆ ಬಂದಿರುವುದರಿಂದ ಬಡವರ ಹಣ ಮಧ್ಯವರ್ತಿಗಳ ಪಾಲಾಗದೇ ₹ 2.5 ಲಕ್ಷ ಕೋಟಿ ಉಳಿತಾಯವಾಗಿದೆ’ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಜಿಲ್ಲಾಡಳಿತದಿಂದ ಸೋಮವಾರ ನಗರದ ಡಾ. ಪುನೀತ್‌ ರಾಜಕುಮಾರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ವಿಜಯನಗರ ಜಿಲ್ಲಾಮಟ್ಟದ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಡಿಬಿಟಿಯಿಂದ ಭ್ರಷ್ಟಾಚಾರಕ್ಕೆ ತಡೆ ಬಿದ್ದಿದೆ. ಡಿಜಿಟಲ್ ಬ್ಯಾಂಕಿಂಗ್ ಮೂಲಕ ₹ 13 ಲಕ್ಷ ಕೋಟಿ ವ್ಯವಹಾರ ಮಾಡಲಾಗಿದೆ. ಕಪ್ಪುಹಣದ ವಹಿವಾಟು, ಭ್ರಷ್ಟಾಚಾರ ತಗ್ಗಿದೆ ಎಂದರು.

ಕಳೆದ 75 ವರ್ಷಗಳಲ್ಲಿ ಸಾಕಷ್ಟು ಘೋಷಣೆಗಳಾಗಿವೆ. ದೇಶದಲ್ಲಿ ಬಡವರೇ ಇರಬಾರದಿತ್ತು. ಕಾಂಗ್ರೆಸ್‌ ಹೆಚ್ಚಿನ ಕಾಲ ದೇಶದಲ್ಲಿ ಅಧಿಕಾರದಲ್ಲಿತ್ತು. ಅವರು ಒಂದು ಭರವಸೆಯನ್ನೂ ಈಡೇರಿಸಿಲ್ಲ. ‘ಗರೀಬಿ ಹಟಾವೋ’ ಘೋಷಣೆ ಜಾರಿಯಾಗಿದ್ದರೆ ಮತ್ತೆ ‘ಗ್ಯಾರಂಟಿ’ ಎಂದು ಹೇಳಿ ತಿರುಗಾಡುತ್ತಿರಲಿಲ್ಲ. ‘ರೋಟಿ, ಕಪಡಾ ಔರ್‌ ಮಕಾನ್‌, ‘ಕಾಂಗ್ರೆಸ್‌ ಕಾ ಹಾಥ್‌ ಗರೀಬೋಂಕೆ ಸಾಥ್‌’ ಎಂದು ಹೇಳಿದ್ದರು. ಆದರೆ, ಅದಕ್ಕೆ ತಕ್ಕಂತೆ ಕೆಲಸ ಮಾಡಲಿಲ್ಲ. ಆದರೆ, ಬಡತನದಿಂದ ಬಂದಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅದರ ಕಲ್ಪನೆ ಇದೆ. ಅದನ್ನು ಅರ್ಥ ಮಾಡಿಕೊಂಡು ಪ್ರತಿ 15 ದಿನಗಳಿಗೊಮ್ಮೆ ಹೊಸ ಯೋಜನೆಗಳನ್ನು ತರುತ್ತಿದ್ದಾರೆ. ಜನರನ್ನು, ಮಹಿಳೆಯರನ್ನು ಸಶಕ್ತಗೊಳಿಸುತ್ತಿದ್ದಾರೆ ಎಂದು ತಿಳಿಸಿದರು.

ಹಿಂದಿನ ಸರ್ಕಾರ ‘ಆಧಾರ್‌’ ಜಾರಿಗೆ ತಂದಿತ್ತು. ಆದರೆ, ಅದಕ್ಕೆ ಕಾನೂನಿನ ಮಾನ್ಯತೆ ಕೊಟ್ಟು ಬ್ಯಾಂಕಿನಲ್ಲಿ ಹೊಸ ಖಾತೆಗಳನ್ನು ತೆರೆಯಬೇಕೆಂದು ಜನರಿಗೆ ಪ್ರಧಾನಿ ಕರೆ ಕೊಟ್ಟಾಗ 42 ಕೋಟಿ ಜನ ಹೊಸ ಬ್ಯಾಂಕ್‌ ಖಾತೆಗಳನ್ನು ತೆಗೆದರು. ಆಧಾರ್‌ ಸಂಖ್ಯೆ ಹಾಗೂ ಮೊಬೈಲ್‌ ಸಂಖ್ಯೆ ಜೋಡಿಸಿ ಸರ್ಕಾರದ ವಿವಿಧ ಯೋಜನೆಗಳ ಹಣ ನೇರ ಅವರ ಖಾತೆಗೆ ಜಮೆ ಮಾಡಲಾಗುತ್ತಿದೆ. ಅದರ ಮಾಹಿತಿಯೂ ಮೊಬೈಲ್‌ನಲ್ಲಿ ಲಭ್ಯವಾಗುತ್ತಿದೆ ಎಂದು ಹೇಳಿದರು.

ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಪ್ರಧಾನಮಂತ್ರಿಗಳ ಕಾರ್ಯಕ್ರಮದಲ್ಲಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೊದಲ ಕಂತಿನ ಹಣವನ್ನು ಒಂದು ಬಟನ್ ಒತ್ತುವುದರ ಮೂಲಕ 8 ಕೋಟಿ ಜನ ರೈತರ ಖಾತೆಗೆ ಏಕಕಾಲಕ್ಕೆ ಜಮೆ ಮಾಡಲಾಯಿತು. ದೇಶದಲ್ಲಿ 230 ಕೋಟಿ ಜನರಿಗೆ ಕೋವಿಡ್‌ ಲಸಿಕೆ ಕೊಡಲಾಗಿದೆ. ಲಾಕ್‌ಡೌನ್‌ನಲ್ಲಿ ಜನರ ಖಾತೆಗೆ ಹಣ, ರೇಷನ್‌ ತಲುಪಿಸಿ ನೆರವಾದರು. ನಮ್ಮ ಸರ್ಕಾರ ದೇಶದ 11 ಕೋಟಿ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಿದೆ. ರಾಜ್ಯದಲ್ಲಿ 58 ಲಕ್ಷ ಮನೆಗಳಿಗೆ ನೀರಿನ ಸೌಲಭ್ಯ ಸಿಕ್ಕಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಮಾತನಾಡಿ, ಡಬಲ್‌ ಎಂಜಿನ್ ಸರ್ಕಾರ ಜಿಲ್ಲೆಯ ಅಭಿವೃದ್ಧಿಗೆ ಕ್ರಾಂತಿಕಾರಿ ಯೋಜನೆಗಳನ್ನು ಜಾರಿ ಮಾಡಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಹಿಂದಿನ ಸರ್ಕಾರಗಳಲ್ಲಿ ಅನುದಾನ ಫಲಾನುಭವಿಗಳಿಗೆ ಸೇರುವ ಮುಂಚೆ ಸೋರಿಕೆಯಾಗುವ ಸಂಭವ ಇರುತ್ತಿತ್ತು. ಈಗ ಸೋರಿಕೆ ತಡೆಗಟ್ಟಿ ನೇರ ಜನಸಾಮಾನ್ಯರಿಗೆ ಯೋಜನೆಗಳ ಸೌಲಭ್ಯ ಒದಗಿಸಲಾಗುತ್ತಿದೆ. ಇಂದಿನ ಕಾರ್ಯಕ್ರಮದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆದ 20 ಸಾವಿರ ಜನ ಫಲಾನುಭವಿಗಳು ಭಾಗವಹಿಸಿದ್ದಾರೆ ಎಂದರು.

ನೂತನ ಜಿಲ್ಲೆಯಾದ ನಂತರ 17.3 ಲಕ್ಷ ಜನ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಸೌಲಭ್ಯ ಸಿಕ್ಕಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಮೂಲಕ ₹ 6,170 ಕೋಟಿ ಅನುದಾನ ಒದಗಿಸಿದೆ. 99,287 ಕಾಮಗಾರಿಗಳನ್ನು ಯೋಜಿಸಿ ಅದರಲ್ಲಿ 68,474 ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ. 30,813 ಕಾಮಗಾರಿಗಳು ಪ್ರಗತಿಯಲ್ಲಿವೆ. ಮರಿಯಮ್ಮನಹಳ್ಳಿ ಭಾಗದಲ್ಲಿ ಕುಡಿಯುವ ನೀರು ಒದಗಿಸಲು ₹ 77 ಕೋಟಿ ಅನುದಾನದ ಯೋಜನೆಯನ್ನು ಸದ್ಯದಲ್ಲೇ ಆರಂಭಿಸಲಾಗುತ್ತದೆ. ಇದರಿಂದ ಆ ಭಾಗದ 11 ಸಾವಿರ ಜನರಿಗೆ ಅನುಕೂಲ ಆಗಲಿದೆ ಎಂದು ವಿವರಿಸಿದರು.

ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಬಸಪ್ಪ ಆಚಾರ್, ಸರ್ಕಾರದ ಹಲವು ಯೋಜನೆಗಳಿಂದ ರಾಜ್ಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮಗು ಸೇರಿದಂತೆ ಗರ್ಭಿಣಿ, ಕಿಶೋರಿ, ಬಾಣಂತಿಯರಿಗೂ ಸಹ ಸರ್ಕಾರದ ಯೋಜನೆಗಳು ತಲುಪಿವೆ ಎಂದರು.

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮಾತನಾಡಿ, ಜಿಲ್ಲೆಯ 17 ಲಕ್ಷ ಜನರಿಗೆ ವಿವಿಧ ಇಲಾಖೆಗಳಿಂದ ಸೌಲಭ್ಯ ನೀಡಲಾಗಿದೆ. ಅವರಿಗೆ ಸೌಲಭ್ಯ ಕೊಡುವ ಜೊತೆಗೆ ಜಾಗೃತಿ ಸಹ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ಇದೇ ವೇಳೆ ಕೆಲವು ಫಲಾನುಭವಿಗಳಿಗೆ ಸಾಂಕೇತಿಕವಾಗಿ ಪ್ರಮಾಣ ಪತ್ರ ವಿತರಿಸಲಾಯಿತು. ಜಿಲ್ಲಾ ಸ್ವೀಪ್ ಸಮಿತಿಯಿಂದ ಇವಿಎಂ ಪ್ರಾತ್ಯಕ್ಷಿಕೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಕುರಿತು ಮಾಹಿತಿ ಪ್ರದರ್ಶನ ಹಾಗೂ ಸರ್ಕಾರದ ಸೌಲಭ್ಯದಿಂದ ವಿವಿಧ ಸ್ತ್ರೀಶಕ್ತಿ ಸಂಘಗಳು ತಯಾರಿಸಿದ ವಿವಿಧ ವಸ್ತು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಸಂಸದ ವೈ.ದೇವೇಂದ್ರಪ್ಪ, ವಿಧಾನ ಪರಿಷತ್ ಸದಸ್ಯರಾದ ವೈ.ಎಂ.ಸತೀಶ್, ಹೇಮಲತಾ ನಾಯಕ, ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಎಸ್ಪಿ ಶ್ರೀಹರಿ ಬಾಬು ಬಿ.ಎಲ್., ಜಿಪಂ ಸಿಇಒ ಬಿ. ಸದಾಶಿವ ಪ್ರಭು, ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧ ಜಿ., ಉಪವಿಭಾಗಾಧಿಕಾರಿಗಳಾದ ಸಿದ್ದರಾಮೇಶ್ವರ, ಟಿ.ವಿ.ಪ್ರಕಾಶ್, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಹುಡಾ ಅಧ್ಯಕ್ಷ ಅಶೋಕ್ ಇದ್ದರು.

ಸರ್ಕಾರಿ ಕಾರ್ಯಕ್ರಮದಲ್ಲಿ ಬಿಜೆಪಿ ಧ್ವಜ
ಜಿಲ್ಲಾಡಳಿತದಿಂದ ಸೋಮವಾರ ನಗರದ ಡಾ. ಪುನೀತ್‌ ರಾಜಕುಮಾರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಮ್ಮೇಳನದ ಹೊರಭಾಗದಲ್ಲಿ ಬಿಜೆಪಿ ಪಕ್ಷದ ಧ್ವಜಗಳು ರಾರಾಜಿಸಿದವು. ಕ್ರೀಡಾಂಗಣಕ್ಕೆ ಹೋಗುವ ಮಾರ್ಗುದುದ್ದಕ್ಕೂ ಬಿಜೆಪಿ ಪಕ್ಷದ ಧ್ವಜಗಳನ್ನು ಹಾಕಲಾಗಿತ್ತು.

ಮೂರು ಗಂಟೆ ವಿಳಂಬ
ಬೆಳಿಗ್ಗೆ ಹತ್ತು ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮವು ಮೂರು ಗಂಟೆ ವಿಳಂಬವಾಗಿ ಶುರುವಾಗಿತ್ತು. ಮಧ್ಯಾಹ್ನ 12.57ಕ್ಕೆ ಗಣ್ಯರು ವೇದಿಕೆಗೆ ಬಂದ ನಂತರ ಕಾರ್ಯಕ್ರಮ ಆರಂಭಗೊಂಡಿತ್ತು. ವಿವಿಧ ಗ್ರಾಮಗಳಿಂದ ಬಂದಿದ್ದ ಫಲಾನುಭವಿಗಳು ಗಣ್ಯರಿಗಾಗಿ ಕಾದು ಕಾದು ಸುಸ್ತಾಗಿದ್ದರು. ಮತದಾನ ಜಾಗೃತಿ ಹಾಸ್ಯ ಕಾರ್ಯಕ್ರಮ ಹಾಗೂ ಗಾಯಕಿ ಅರ್ಚನಾ ಉಡುಪ ಅವರು ಸಂಗೀತ ಗಾಯನವು ಜನರನ್ನು ರಂಜಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT