ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿಯಾ ಕಾಡಿಗೆ, ಬಂಡೆ ಕ್ರಷರ್‌ಗೆ, ಹಗರಿಬೊಮ್ಮನಹಳ್ಳಿ ಶಾಸಕ ಕಾಶಿಗೆ: ಕಟೀಲ್‌

Last Updated 15 ಮಾರ್ಚ್ 2023, 15:28 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ (ವಿಜಯನಗರ): ‘ಬರಲಿರುವ ವಿಧಾನಸಭೆ ಚುನಾವಣೆ ನಂತರ ಹುಲಿಯಾ ಕಾಡಿಗೆ ಹೋಗುತ್ತಾನೆ. ಬಂಡೆ ಕ್ರಷರ್‌ನೊಳಗೆ ಹೋಗುತ್ತಾನೆ. ಹಗರಿಬೊಮ್ಮನಹಳ್ಳಿ ಶಾಸಕ (ಭೀಮ ನಾಯ್ಕ) ಕಾಶಿಗೆ ಹೋಗುತ್ತಾನೆ. ಇದರೊಂದಿಗೆ ಹಗರಿಬೊಮ್ಮನಹಳ್ಳಿ ಕ್ಷೇತ್ರ ಕಾಂಗ್ರೆಸ್‌ ಮುಕ್ತವಾಗುತ್ತದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನಕುಮಾರ್‌ ಕಟೀಲ್‌ ಭವಿಷ್ಯ ನುಡಿದರು.

ಪಟ್ಟಣದಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರಿಗೆ ಧ್ವನಿ ಇಲ್ಲ. ಇನ್ನು ಪ್ರಜಾ ಧ್ವನಿ ಮಾಡುವುದರಲ್ಲಿ ಏನು ಅರ್ಥವಿದೆ. ಕೋಲಾರದಲ್ಲಿ ಪಂಕ್ಚರ್‌, ಬ್ರೇಕ್‌ ಫೇಲ್‌ ಆಗಿದೆ. ಬಿಜೆಪಿ ಯಾತ್ರೆ ದಿಗ್ವಿಜಯ ಯಾತ್ರೆ. ತಾಕತ್ತಿದ್ದರೆ ಇದನ್ನು ನಿಲ್ಲಿಸಲಿ ಎಂದು ಸವಾಲು ಹಾಕಿದರು.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ ಅವರನ್ನು ಮುಗಿಸಿದ್ದು ಕಾಂಗ್ರೆಸ್‌. ದಲಿತರನ್ನು ತುಳಿದದ್ದು ಸಿದ್ದರಾಮಯ್ಯ. ಪರಮೇಶ್ವರ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ. ಜಾತಿಗಳ ಮಧ್ಯೆ ಜಗಳ, ಧರ್ಮಗಳನ್ನು ಒಡೆದವರು ಸಿದ್ದರಾಮಯ್ಯ. ಕೆಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಟೀಕಿಸಿದರು.

ಕಾಂಗ್ರೆಸ್‌ ಪಕ್ಷಕ್ಕೆ ಗೆಲ್ಲೋದೆ ಗ್ಯಾರಂಟಿ ಇಲ್ಲ, ಇನ್ನು ಗ್ಯಾರಂಟಿ ಕಾರ್ಡ್‌ ಕೊಡುವ ಪ್ರಶ್ನೆ ಎಲ್ಲಿಂದ ಬಂತು. ಕಾಂಗ್ರೆಸ್‌ ಭಯೋತ್ಪಾದಕ ಪಕ್ಷ. ‘ಗರೀಬಿ ಹಟಾವೋ’ ಕಾಂಗ್ರೆಸ್‌ ಘೋಷವಾಕ್ಯವಾಗಿತ್ತು. ಆದರೆ, ಆ ಕೆಲಸವೇ ಮಾಡಲಿಲ್ಲ ಎಂದರು.

ಶಾಸಕ ಜಗದೀಶ ಶೆಟ್ಟರ್‌ ಮಾತನಾಡಿ, ನಾನು ಸಿ.ಎಂ. ಇದ್ದಾಗ ಪಂಚಮಸಾಲಿ ಭವನಕ್ಕೆ ಅನುದಾನ ಕೊಟ್ಟಿದ್ದೆ ಎಂದು ನೆನಪಿಸಿದರು.

ಕ್ಷೇತ್ರದ ಮಾಜಿಶಾಸಕ ನೇಮರಾಜ ನಾಯ್ಕ ಮಾತನಾಡಿ, ಬಿಜೆಪಿ ಸರ್ಕಾರವಿದ್ದಾಗ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದೆ ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಡಿ.ಕೆ. ಅರುಣಾ, ಜಿಲ್ಲಾ ಉಸ್ತುವಾರಿ ಸಿದ್ದೇಶ್‌ ಯಾದವ್‌, ಕ್ಷೇತ್ರದ ಉಸ್ತುವಾರಿ ನಂಜೇಗೌಡ, ಬಿಜೆಪಿ ಮುಖಂಡರಾದ ಸಿದ್ದರಾಜು, ಬಲ್ಲಾಹುಣ್ಸಿ ರಾಮಣ್ಣ, ಎಂ. ಲಕ್ಷ್ಮಿನಾರಾಯಣ, ಎಚ್‌.ಪಿ. ಜಯಪ್ರಕಾಶ್‌, ಮಂಡಲ ಅಧ್ಯಕ್ಷ ವೀರೇಶ್ವರ ಸ್ವಾಮಿ ಇದ್ದರು.

ಇದಕ್ಕೂ ಮುನ್ನ ಪಟ್ಟಣದ ಕೂಡ್ಲಿಗಿ ರಸ್ತೆಯಲ್ಲಿನ ಬಿಜೆಪಿ ಕಚೇರಿ ಬಳಿ ಪಕ್ಷದ ಮುಖಂಡರಿಗೆ ಪುಷ್ಪವೃಷ್ಟಿ ಮಾಡಿ ಸ್ವಾಗತಿಸಲಾಯಿತು.

ಘೋಷಣೆ ಕೂಗಿದವರಿಗೆ ಟಿಕೆಟ್‌ ಕೊಡೊಲ್ಲ’

ಭಾಷಣ ಮಾಡುವಾಗ ನೇಮರಾಜ ನಾಯ್ಕ ಅವರ ಬೆಂಬಲಿಗರು ಅವರ ಪರ ಜೈಕಾರ ಹಾಕಿದ್ದಕ್ಕೆ ಸಿಟ್ಟಾದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನಕುಮಾರ್‌ ಕಟೀಲ್‌, ಘೋಷಣೆ ಕೂಗಿದವರಿಗೆ ಟಿಕೆಟ್‌ ಕೊಡೊಲ್ಲ. ಇದನ್ನೆಲ್ಲ ನಾನು ದಕ್ಷಿಣ ಕನ್ನಡದಲ್ಲಿ ನೋಡಿರುವೆ. ಹಗರಿಬೊಮ್ಮನಹಳ್ಳಿಯಲ್ಲಿ ಹತ್ತು ಜನ ಆಕಾಂಕ್ಷಿಗಳಿದ್ದಾರೆ. ಯಾರಾದರೂ ಒಬ್ಬರಿಗೆ ಟಿಕೆಟ್‌ ಸಿಗುತ್ತದೆ. ಅದನ್ನು ಬಿಜೆಪಿ ಸಂಸದೀಯ ಮಂಡಳಿ ನಿರ್ಧರಿಸುತ್ತದೆ ಎಂದು ಹೇಳಿದಾಗ ಬೆಂಬಲಿಗರು ಸುಮ್ಮನಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT