ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಕಾಳಜಿಯ ‘ಹಸಿರು ಪರ್ವ’

Last Updated 5 ಜೂನ್ 2021, 14:54 IST
ಅಕ್ಷರ ಗಾತ್ರ

ಹೂವಿನಹಡಗಲಿ: ಇಲ್ಲಿನ ‘ಹಸಿರು ಪರ್ವ’ ತಂಡದ ಯುವಕರು ಪರಿಸರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿ ಗಮನ ಸೆಳೆದಿದ್ದಾರೆ. ಪರಿಸರದಲ್ಲಿ ಬೆರೆತು ಹೋಗಿದ್ದ ಅಪಾರ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೆಕ್ಕಿ ತೆಗೆದು, ವೈಜ್ಞಾನಿಕವಾಗಿ ವಿಲೇವಾರಿಗೊಳಿಸಿ ನೈಜ ಪರಿಸರ ಕಾಳಜಿ ತೋರಿದ್ದಾರೆ.

ಪಟ್ಟಣದ ಯುವಕ ಟಿ. ಗಿರೀಶ್ ನೇತೃತ್ವದಲ್ಲಿ ‘ಹಸಿರು ಪರ್ವ’ ತಂಡದ ಯುವಕರು ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ (ಐಟಿಐ) ಆವರಣದಲ್ಲಿ ಶ್ರಮದಾನ ನಡೆಸಿ, ಪ್ಲಾಸ್ಟಿಕ್ ಕಸದ ರಾಶಿಯನ್ನೇ ಸಂಗ್ರಹಿಸಿದ್ದಾರೆ.

ಪಟ್ಟಣದ ಹೊರ ವಲಯದ ಬಯಲು, ಹರಪನಹಳ್ಳಿ ರಸ್ತೆಯಲ್ಲಿರುವ ಐಟಿಐ ಕಾಲೇಜು ಅನೈತಿಕ ಚಟುವಟಿಕೆಯ ತಾಣವಾಗಿತ್ತು. ಪ್ರತಿದಿನ ಸಂಜೆಯಾಗುತ್ತಿದ್ದಂತೆ ಮದ್ಯ ಸೇವಿಸುವವರ ಗುಂಪುಗಳು ಕಾಲೇಜು ಆವರಣಕ್ಕೆ ದಾಂಗುಡಿ ಇಡುತ್ತಿದ್ದವು. ಈ ತರಹದ ಅನೈತಿಕ ಚಟುವಟಿಕೆ ನಿಯಂತ್ರಿಸಲು ಕಾಲೇಜು ಸಿಬ್ಬಂದಿ ಹರಸಾಹಸಪಟ್ಟರೂ ಸಾಧ್ಯವಾಗಿರಲಿಲ್ಲ. ಇದರ ಪರಿಣಾಮವಾಗಿ ಕಾಲೇಜು ಅಂಗಳ, ಗಿಡಮರಗಳ ಕೆಳಗೆ ಎಲ್ಲೆಂದರಲ್ಲಿ ಮದ್ಯದ ಸ್ಯಾಶೆ, ಪ್ಲಾಸ್ಟಿಕ್ ಬಾಟಲಿಗಳು ಕಂಡು ಬರುತ್ತಿದ್ದವು. ಈ ಅಸಹ್ಯಕರ ಪರಿಸರ ವಿದ್ಯಾರ್ಥಿಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತಿತ್ತು.

ಪರಿಸರ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸುವ ತೀರ್ಮಾನ ಕೈಗೊಂಡ ಯುವಕರು 16 ಎಕರೆ ವಿಶಾಲವಾಗಿರುವ ಐಟಿಐ ಕಾಲೇಜು ಆವರಣದಲ್ಲಿ ಶ್ರಮದಾನ ನಡೆಸಿದ್ದಾರೆ. ಅಪಾರ ಪ್ರಮಾಣದ ಮದ್ಯದ ಬಾಟಲಿ, 300 ಕೆ.ಜಿಗೂ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯವನ್ನು ಆರಿಸಿ ವಿಲೇವಾರಿಗೆ ಪುರಸಭೆಗೆ ಹಸ್ತಾಂತರಿಸಿದ್ದಾರೆ. ಯುವಕರ ಪರಿಸರ ಕಾಳಜಿಯನ್ನು ಐ.ಟಿ.ಐ ಕಾಲೇಜು ಸಿಬ್ಬಂದಿ ಹಾಗೂ ಸಾರ್ವಜನಿಕರು ಪ್ರಶಂಸಿಸಿದ್ದಾರೆ.

ಛಾಯಾಚಿತ್ರ ತೆಗೆಸಿಕೊಳ್ಳುವುದಕ್ಕಾಗಿ ಗಿಡ ನೆಟ್ಟು ಸಾಂಕೇತಿಕ ಪರಿಸರ ದಿನ ಆಚರಿಸುವವರ ನಡುವೆ ನೈಜ ಪರಿಸರ ಕಾಳಜಿ ಮೆರೆದಿರುವ ಹಸಿರು ಪರ್ವ ತಂಡದ ಟಿ.ತಿರುಮಲ, ಕೆ.ಎಸ್.ಶಮಂತ್, ವಿನಾಯಕ, ಜಾನ್ ಬೆನ್ಸನ್, ಚಾಂದಬಾಷಾ, ಜಿ.ಪುನೀತ್, ಮಂಜುನಾಥ, ಭರತೇಶ, ಜೆ.ಸೇತುರಾಂ, ಟಿ.ಹರೀಶ್ ಮಾದರಿಯಾಗಿದ್ದಾರೆ.

‘ಪ್ಲಾಸ್ಟಿಕ್ ಮತ್ತು ಗಾಜನ್ನು ಎಲ್ಲೆಂದರಲ್ಲಿ ಬಳಸಿ ಬಿಸಾಡುವುದರಿಂದ ಅದು ಪರಿಸರಕ್ಕೆ ಹಾನಿ ಉಂಟು ಮಾಡುತ್ತದೆ. ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ನೇಹಿತರ ಜತೆಗೆ ಸೇರಿ ಶ್ರಮದಾನ ಮಾಡಿದ್ದೇವೆ’ ಎಂದು ಗಿರೀಶ್ ತಿಳಿಸಿದರು.

‘ಕಳೆದ ವರ್ಷವೂ ಇದೇ ಸ್ಥಳದಲ್ಲಿ ಶ್ರಮದಾನ ನಡೆಸಿ ಕಾಲೇಜು ಆವರಣವನ್ನು ಶುಚಿಗೊಳಿಸಿದ್ದೆವು. ಇಲ್ಲಿಗೆ ಮದ್ಯ ಸೇವಿಸಲು ಬರುವವರು ಬಾಟಲಿ ಒಡೆದು ವಿಕೃತ ಮೆರೆಯುತ್ತಾರೆ. ಗಾಜುಗಳನ್ನು ಹೆಕ್ಕಿ ತೆಗೆಯುವುದು ಕಷ್ಟಕರವಾಗಿದೆ. ಕೈ ಗವಸು ಸೇರಿದಂತೆ ಸುರಕ್ಷಿತ ಸಾಧನಗಳನ್ನು ದಾನಿಗಳು ಒದಗಿಸಿದಲ್ಲಿ ಇನ್ನು ಹೆಚ್ಚಿನ ರೀತಿ ಸೇವೆ ಸಲ್ಲಿಸಲು ಸಿದ್ಧರಿದ್ದೇವೆ. ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸುವವರ ಮೇಲೆ ಪೊಲೀಸರು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT