ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಸ್ವಚ್ಛತೆ ಮರೀಚಿಕೆ, ಕಳಪೆ ಆಹಾರ ವಿತರಣೆ

120 ವಿದ್ಯಾರ್ಥಿಗಳಿಗೆ 6 ಶೌಚಾಲಯ; ಎಸ್ಟಿ ಹಾಸ್ಟೆಲ್‌ನಲ್ಲಿ ಸೌಕರ್ಯಗಳ ಕೊರತೆ
Last Updated 23 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರ ಹೊರವಲಯದ ಜಂಬುನಾಥಹಳ್ಳಿ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಪರಿಶಿಷ್ಟ ಪಂಗಡದವರ ಮೆಟ್ರಿಕ್‌ ನಂತರದ ಹಾಸ್ಟೆಲ್‌ ಅವ್ಯವಸ್ಥೆಯ ಗೂಡಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಸ್ವಚ್ಛತೆ ಸಂಪೂರ್ಣ ಮರೀಚಿಕೆಯಾಗಿದೆ. ಹಣ ಲಪಟಾಯಿಸಲು ಕಳಪೆ ಗುಣಮಟ್ಟದ ಆಹಾರ ಪೂರೈಸಲಾಗುತ್ತಿದೆ ಎಂದು ಅಲ್ಲಿನ ವಿದ್ಯಾರ್ಥಿಗಳೇ ಆರೋಪಿಸಿದ್ದಾರೆ.

‘ಹಾಸ್ಟೆಲ್‌ನಲ್ಲಿ ಒಟ್ಟು 120 ವಿದ್ಯಾರ್ಥಿಗಳಿದ್ದಾರೆ. ಒಂದು ಕೊಠಡಿಯಲ್ಲಿ ತಲಾ 12ರಿಂದ 14 ವಿದ್ಯಾರ್ಥಿಗಳಿದ್ದಾರೆ. ಎಂಟು ಶೌಚಾಲಯಗಳಿವೆ. ಇದರಲ್ಲಿ ಎರಡು ಬಳಕೆಯಲ್ಲಿಲ್ಲ. ಇರುವ ಆರು ಶೌಚಾಲಯಗಳನ್ನು ಎಲ್ಲರೂ ಉಪಯೋಗಿಸುತ್ತಿದ್ದಾರೆ. ಅದನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ಸದಾ ದುರ್ಗಂಧ ಇರುತ್ತದೆ. ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಸಿದವರಿಗೆ ಹೇಳಿದರೂ ತಲೆಗೆ ಹಾಕಿಕೊಂಡಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಬೆಳಿಗ್ಗೆ ಎದ್ದ ತಕ್ಷಣ ಪ್ರತಿಯೊಬ್ಬರೂ ಶೌಚಾಲಯಕ್ಕೆ ಹೋಗುತ್ತಾರೆ. ಬೇಗ ಸಿದ್ಧರಾಗಿ ಕಾಲೇಜಿಗೆ ಹೋಗಬೇಕಾಗುತ್ತದೆ. ಆದರೆ, ಆರು ಶೌಚಾಲಯಗಳಿರುವುದರಿಂದ ‘ಪ್ರಕೃತಿ ಕರೆ’ಯನ್ನು ತಡೆದುಕೊಂಡು ಕಾದು ನಿಲ್ಲಬೇಕಾದ ದುಃಸ್ಥಿತಿ ಇದೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಕೊಡುತ್ತಿರುವ ಆಹಾರ ಗುಣಮಟ್ಟದಿಂದ ಕೂಡಿಲ್ಲ. ಪದೇ ಪದೇ ಆಹಾರ, ಧಾನ್ಯಗಳಲ್ಲಿ ಹುಳುಗಳು ಕಾಣಿಸಿಕೊಳ್ಳುತ್ತಿವೆ. ಅದನ್ನು ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ತಿಂಗಳಲ್ಲಿ ಒಂದೆರಡು ಸಲ ಮಾಂಸದೂಟ ಕೊಡುತ್ತಾರೆ. ಅದು ಹೆಸರಿಗಷ್ಟೇ ಮಾಂಸದೂಟವಾಗಿರುತ್ತದೆ. ಪೌಷ್ಟಿಕಾಂಶಯುಕ್ತ ಆಹಾರವೇ ಕೊಡುವುದಿಲ್ಲ. ಸರ್ಕಾರದ ಅನುದಾನ ವಿದ್ಯಾರ್ಥಿಗಳಿಗೆ ಸರಿಯಾಗಿ ಬಳಕೆಯಾಗುತ್ತಿಲ್ಲ. ಕರೆಂಟ್‌ ಹೋದರೆ ಓದಲು ಸಮಸ್ಯೆಯಾಗುತ್ತದೆ. ಯು.ಪಿ.ಎಸ್‌. ಐದು ನಿಮಿಷವಷ್ಟೇ ನಡೆಯುತ್ತದೆ. ಮೇಲಧಿಕಾರಿಗಳು ಇದರತ್ತ ಗಮನಹರಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT