ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಮರಗಳ ಮಾರಣಹೋಮ ವಿರುದ್ಧ ‘ಟೀಮ್‌ ಫಾರ್‌ ದಿ ನೇಚರ್‌’

‘ಟೀಮ್‌ ಫಾರ್‌ ದಿ ನೇಚರ್‌’ನಿಂದ ಆನ್‌ಲೈನ್‌ನಲ್ಲಿ ಸಹಿ ಸಂಗ್ರಹ ಅಭಿಯಾನ
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದಲ್ಲಿ ರಸ್ತೆಗಳ ವಿಸ್ತರಣೆಗೆ 875 ಮರಗಳನ್ನು ಕಡಿಯಲು ನಿರ್ಧರಿಸಲಾಗಿದ್ದು, ಅದರ ವಿರುದ್ಧ ಯುವಪಡೆ ಬಲವಾದ ಧ್ವನಿ ಎತ್ತಿದೆ.

ನಗರದ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನ (ಪಿಡಿಐಟಿ) ‘ಟೀಮ್‌ ಫಾರ್‌ ದಿ ನೇಚರ್‌’ ವಿದ್ಯಾರ್ಥಿಗಳು ಮರಗಳ ಮಾರಣಹೋಮದ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ವಿಷಯವನ್ನು ಅಭಿಯಾನದ ರೀತಿಯಲ್ಲಿ ತೆಗೆದುಕೊಂಡು ಆನ್‌ಲೈನ್‌ನಲ್ಲಿ ಸಹಿ ಸಂಗ್ರಹ ಚಳವಳಿ ಕೂಡ ಆರಂಭಿಸಿದ್ದಾರೆ.

ಚೇಂಜ್‌ ಡಾಟ್‌ ಆರ್ಗ್‌ (change.org) ವೆಬ್‌ಸೈಟಿನಲ್ಲಿ ಅಭಿಯಾನ ಆರಂಭಿಸಿದ್ದು, ಅದನ್ನು ಬೆಂಬಲಿಸಿ ಈಗಾಗಲೇ 2,106 ಜನ ಸಹಿ ಮಾಡಿದ್ದಾರೆ. ಅಭಿಯಾನ ಇದೊಂದು ಅಂತರರಾಷ್ಟ್ರೀಯ ವೇದಿಕೆಯಾಗಿದ್ದು, ಇದರ ಮೂಲಕ ಅನೇಕರು ಅಭಿಯಾನ ನಡೆಸಿ, ಯಶಸ್ಸು ಕಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಈ ವೇದಿಕೆಯ ಮೊರೆ ಹೋಗಿದ್ದಾರೆ.

‘ಮರಗಳು ನಮ್ಮ ಪರಿಸರದ ಬಹುಮುಖ್ಯ ಭಾಗ. ಪ್ರತಿದಿನ ಯಾವುದೇ ಕರುಣೆಯಿಲ್ಲದೆ ಅವುಗಳನ್ನು ಕತ್ತರಿಸಲಾಗುತ್ತಿದೆ. ಸತತವಾಗಿ ಮರಗಳನ್ನು ಕಡಿಯುತ್ತಿರುವುದರಿಂದ ಮಾಲಿನ್ಯ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಿದ್ದರೂ ರಸ್ತೆಗಳ ವಿಸ್ತರಣೆಗೆ ಅರಣ್ಯ ಇಲಾಖೆಯು ನಗರದಲ್ಲಿ ಮರಗಳನ್ನು ಕಡಿಯಲು ಮುಂದಾಗಿದೆ. ನಾವೆಲ್ಲರೂ ಇದನ್ನು ತಡೆಯಬೇಕಾಗಿದೆ. ಪ್ರತಿಯೊಬ್ಬರೂ ಈ ಅಭಿಯಾನವನ್ನು ಬೆಂಬಲಿಸಿ ಸಹಿ ಸಂಗ್ರಹ ಚಳವಳಿಯಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ. ನಗರದ ಯಾವ ಭಾಗದಲ್ಲಿ ಎಷ್ಟು ಮರಗಳನ್ನು ಕತ್ತರಿಸಲು ನಿರ್ಧರಿಸಲಾಗಿದೆ ಎಂಬ ವಿವರ ಕೂಡ ಹಂಚಿಕೊಂಡಿದ್ದಾರೆ.

ಏತಕ್ಕಾಗಿ ಈ ಅಭಿಯಾನ?:ಸಂಡೂರು–ಸಿರುಗುಪ್ಪ ರಾಜ್ಯ ಹೆದ್ದಾರಿ–149ರಲ್ಲಿ ನಗರದ ಅನಂತಶಯನಗುಡಿಯಿಂದ ಕಮಲಾಪುರ, ಬಳ್ಳಾರಿ ರಸ್ತೆಯ ಎಚ್‌ಎಲ್‌ಸಿಯಿಂದ ಇಂಗಳಗಿ ಕ್ರಾಸ್‌, ನಗರದ ಸಾಯಿಬಾಬಾ ವೃತ್ತದಿಂದ ಟಿ.ಬಿ. ಡ್ಯಾಂ ವರೆಗಿನ ರಸ್ತೆಯನ್ನು ಚತುಷ್ಪಥವಾಗಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ಖನಿಜ ನಿಧಿ ಅಡಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ.

ಲೋಕೋಪಯೋಗಿ ಇಲಾಖೆಯ ಕೋರಿಕೆಯ ಮೇರೆಗೆ ಅರಣ್ಯ ಇಲಾಖೆಯು ಮರಗಳನ್ನು ಕತ್ತರಿಸಲು ಮುಂದಾಗಿದೆ. ಇದಕ್ಕಾಗಿ ಇತ್ತೀಚೆಗೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಇದರ ಬೆನ್ನಲ್ಲೇ ವಿದ್ಯಾರ್ಥಿಗಳು ಇದರ ವಿರುದ್ಧ ಚಳವಳಿ ಶುರು ಮಾಡಿದ್ದಾರೆ.

ಜನರಿಂದಲೂ ವಿರೋಧ:ಅಭಿವೃದ್ಧಿ ಹೆಸರಿನಲ್ಲಿ ನಗರದಲ್ಲಿ ಈಗಾಗಲೇ ಸಾಕಷ್ಟು ಮರಗಳನ್ನು ಕಡಿಯಲಾಗಿದೆ. ಹಸಿರು, ನೆರಳು ದಿನೇ ದಿನೇ ಕ್ಷೀಣಿಸುತ್ತಿದೆ. ಈಗ ಸಾವಿರದ ಸಮೀಪ ಮರಗಳನ್ನು ಕಡಿದ ಮೇಲೆ ಇನ್ನೇನು ಉಳಿಯುತ್ತದೆ? ಹೀಗೆಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.

ಎಲ್ಲೆಲ್ಲಿ ಎಷ್ಟು ಮರಗಳು ಹೋಗಲಿವೆ?


357 ಅನಂತಶಯನಗುಡಿಯಿಂದ ಕಮಲಾಪುರ ವರೆಗೆ
257 ಬಳ್ಳಾರಿ ಎಚ್‌ಎಲ್‌ಸಿಯಿಂದ ಇಂಗಳಗಿ ಕ್ರಾಸ್‌
261 ಸಾಯಿಬಾಬಾ ವೃತ್ತದಿಂದ ಟಿ.ಬಿ. ಡ್ಯಾಂ ವರೆಗೆ
875 ಒಟ್ಟು ಗುರುತಿಸಿರುವ ಮರಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT