ಹೂವಿನಹಡಗಲಿ (ವಿಜಯನಗರ ಜಿಲ್ಲೆ): ‘ಈ ಕ್ಷೇತ್ರದ ಜನರು ಕಾಂಗ್ರೆಸ್ ಶಾಸಕರನ್ನು ಮನೆಗೆ ಕಳಿಸಲು ಸಜ್ಜಾಗಿದ್ದಾರೆ. ನೀವು (ಆಕಾಂಕ್ಷಿಗಳು) ಪ್ರತಿಷ್ಠೆ ಬಿಟ್ಟು ಒಗ್ಗೂಡುವ ಮೂಲಕ ಪಕ್ಷದ ಗೆಲುವಿಗೆ ಶ್ರಮಿಸಬೇಕು’ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್ ಹೇಳಿದರು.
ಪಟ್ಟಣದಲ್ಲಿ ಗುರುವಾರ ಸಂಜೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ರೋಡ್ ಶೋ ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಕಳೆದ ಹಲವು ಚುನಾವಣೆಗಳಲ್ಲಿ ನಾನು ಇಲ್ಲಿಗೆ ಬಂದಿದ್ದೇನೆ. ಈ ಕ್ಷೇತ್ರದಲ್ಲಿ ಬಿಜೆಪಿಗೆ ದೊಡ್ಡ ನೆಲೆ ಇದ್ದರೂ ಮುಖಂಡರ ಒಳ ಜಗಳದಿಂದ ಸೋಲಾಗುತ್ತಿದೆ. ಈ ಬಾರಿ ಪಕ್ಷ ಗುರುತಿಸುವ ಅಭ್ಯರ್ಥಿ ಪರ ಒಗ್ಗಟ್ಟಿನಿಂದ ಕೆಲಸ ಮಾಡಿ, ಬಿಜೆಪಿ ಗೆಲ್ಲಿಸಬೇಕು. ಇಲ್ಲಿನ ಕಾರ್ಯಕರ್ತರ ಉತ್ಸಾಹ ನೋಡಿದರೆ, ಇದು ವಿಜಯೋತ್ಸವ ಮೆರವಣಿಗೆ ಎನಿಸುತ್ತದೆ’ ಎಂದರು.
ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಆರಂಭವಾದ ರೋಡ್ ಶೋ ಮದಲಗಟ್ಟಿ ವೃತ್ತ, ಓಂ ಸರ್ಕಲ್ ಮೂಲಕ ಮುಖ್ಯ ರಸ್ತೆಯಲ್ಲಿ ಸಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಲ್ಲಿ ಕೊನೆಗೊಂಡಿತು. ಯಾತ್ರೆಯ ಉದ್ದಕ್ಕೂ ಮೋದಿ ಹಾಗೂ ಬಿಜೆಪಿ ಪರ ಘೋಷಣೆಗಳು ಮೊಳಗಿದವು. ಬಿಜೆಪಿ ಕಾರ್ಯಕರ್ತರು ಮೆರವಣಿಗೆಯುದ್ದಕ್ಕೂ ಮುಖಂಡರ ಮೇಲೆ ಪುಷ್ಪವೃಷ್ಟಿ ಸುರಿಸಿದರು.
ಮಾಜಿ ಶಾಸಕ ಬಿ.ಚಂದ್ರನಾಯ್ಕ, ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಸಂಜೀವ ರೆಡ್ಡಿ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಎಚ್.ಪೂಜಪ್ಪ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಚ್.ಹನುಮಂತಪ್ಪ, ಮುಖಂಡರಾದ ಓದೋ ಗಂಗಪ್ಪ, ಎಸ್.ದೂದನಾಯ್ಕ, ರವಿಕುಮಾರ್ ಎಲ್.ಕೆ., ಬಿ.ರಾಮನಾಯ್ಕ, ಶಿವಪುರ ಸುರೇಶ, ಎಲ್.ಮಧುನಾಯ್ಕ, ಕೊಟ್ರನಾಯ್ಕ, ಎಂ.ಬಿ.ಬಸವರಾಜ, ಈಟಿ ಲಿಂಗರಾಜ ಇತರರು ಇದ್ದರು.
ಆಕಾಂಕ್ಷಿಗಳ ಬೆಂಬಲಿಗರ ಪೈಪೋಟಿ; ವಾಹನ ಇಳಿದ ಶ್ರೀರಾಮುಲು
ರೋಡ್ ಶೋ ವೇಳೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರು ತಮ್ಮ ನಾಯಕರ ಭಾವಚಿತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ಆಕಾಂಕ್ಷಿಗಳನ್ನು ಬಿಂಬಿಸಲು ಮೂರ್ನಾಲ್ಕು ಗುಂಪುಗಳು ಪೈಪೋಟಿ ನಡೆಸಿದ್ದರಿಂದ ಸಚಿವ ಶ್ರೀರಾಮುಲು ಬೇಸರಗೊಂಡು ಮಧ್ಯದಲ್ಲೇ ವಾಹನದಿಂದ ಇಳಿದು ಹೊರಟು ಹೋದರು.
ಐದು ಗಂಟೆ ತಡವಾಗಿ ಬಂದ ಯಾತ್ರೆ
ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಧ್ಯಾಹ್ನ 1 ಗಂಟೆಗೆ ಪಟ್ಟಣಕ್ಕೆ ಬರಲಿದೆ ಎಂದು ತಿಳಿಸಲಾಗಿತ್ತು. ಆದರೆ, ಪಟ್ಟಣಕ್ಕೆ ಬಂದಿದ್ದು ಸಂಜೆ 6 ಗಂಟೆಗೆ. ಹಳ್ಳಿಗಳಿಂದ ಬೆಳಿಗ್ಗೆಯೇ ಟ್ರ್ಯಾಕ್ಟರ್, ಟಾಂಟಾಂ, ಬೈಕ್ ಗಳಲ್ಲಿ ಬಂದಿದ್ದ ಕಾರ್ಯಕರ್ತರು ಯಾತ್ರೆಗಾಗಿ ಗಂಟೆಗಟ್ಟಲೇ ಕಾದು ಗೊಣಗುತ್ತಿದ್ದರು. ರೋಡ್ ಶೋ ಆರಂಭಕ್ಕೂ ಮುನ್ನವೇ ಕೆಲವರು ವಾಪಸ್ ಹೊರಟು ಹೋದರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.