ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಿಒ ಹುದ್ದೆ ಖಾಲಿ; ಕೆಲಸ ವಿಳಂಬ, ಸಾರ್ವಜನಿಕರ ಕೆಲಸಕ್ಕೆ ತೊಂದರೆ

ವಿಜಯನಗರ, ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಿನ ಹುದ್ದೆಗಳು ಖಾಲಿ; ಸಾರ್ವಜನಿಕರ ಕೆಲಸಕ್ಕೆ ತೊಂದರೆ
Last Updated 14 ಮಾರ್ಚ್ 2022, 8:35 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಅವಳಿ ಜಿಲ್ಲೆಗಳಾದ ವಿಜಯನಗರ– ಬಳ್ಳಾರಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಹೆಚ್ಚಿನ ಹುದ್ದೆಗಳು ಖಾಲಿ ಇರುವುದರಿಂದ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ.

ಪ್ರತಿ ವರ್ಷ ಸರ್ಕಾರ ಒಂದಾದ ನಂತರ ಒಂದು ಹೊಸ ಯೋಜನೆಗಳನ್ನು ಘೋಷಿಸುತ್ತಿದೆ. ಇಷ್ಟೇ ಅಲ್ಲ, ಸಾರ್ವಜನಿಕರಿಗೆ ಎಲ್ಲ ಸೇವೆಗಳನ್ನು ಗ್ರಾಮ ಪಂಚಾಯಿತಿಯಲ್ಲಿ ನೀಡಲಾಗುವುದು ಎಂದು ಸರ್ಕಾರ ಹೇಳುತ್ತಿದೆ. ಆದರೆ, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಷ್ಟು ಅಗತ್ಯ ಸಿಬ್ಬಂದಿ ಇಲ್ಲ. ಇನ್ನೊಂದೆಡೆ ಹಾಲಿ ಇರುವ ಪಿಡಿಒಗಳ ಮೇಲೆ ಹೆಚ್ಚಿನ ಕಾರ್ಯಭಾರ ಇರುವುದರಿಂದ ಅವರು ಬಹಳ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಕೆಲಸಗಳು ಸಕಾಲಕ್ಕೆ ಆಗುತ್ತಿಲ್ಲ.

ಇನ್ನು, ಹೆಚ್ಚಿನ ಪಿಡಿಒಗಳು ಅವರ ಕಾರ್ಯಕ್ಷೇತ್ರದಲ್ಲಿ ಇರುವುದಿಲ್ಲ. ಬಹುತೇಕರು ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ನೆಲೆಸಿದ್ದಾರೆ. ಕಚೇರಿ ಅವಧಿಗಷ್ಟೇ ಆಯಾ ಪಂಚಾಯಿತಿಗಳಿಗೆ ಕೆಲಸಕ್ಕೆ ಹೋಗಿ ಬರುತ್ತಾರೆ. ವಾರಾಂತ್ಯಕ್ಕೆ ರಜೆ ಹಾಕಿ ತೆರಳುವುದರಿಂದ ಶುಕ್ರವಾರದಿಂದ ಭಾನುವಾರದ ವರೆಗೆ ಯಾವುದೇ ಕೆಲಸಗಳು ಆಗುವುದಿಲ್ಲ. ಜನ ಏನಿದ್ದರೂ ಸೋಮವಾರದಿಂದ ಗುರುವಾರದೊಳಗೆ ಅವರ ಕೆಲಸಗಳನ್ನು ಮಾಡಿಸಿಕೊಳ್ಳಬೇಕು. ಇನ್ನು, ಒಬ್ಬ ಪಿಡಿಒಗೆ ಸಮೀಪದ ಪಂಚಾಯಿತಿಯ ಕಾರ್ಯಭಾರ ಕೂಡ ವಹಿಸುವುದರಿಂದ ಯಾವ ಕಡೆ ಹೆಚ್ಚು ಗಮನಹರಿಸಿ ಕೆಲಸ ಮಾಡಬೇಕು ಎಂಬ ಗೊಂದಲದಲ್ಲಿ ಮುಳುಗಿದ್ದಾರೆ. ಯಾವುದಾದರೂ ಕೆಲಸಗಳು ವಿಳಂಬವಾದರೆ ಜನ ಇವರನ್ನೇ ದೂರುತ್ತಾರೆ. ಮೇಲಧಿಕಾರಿಗಳ ಮಾತನ್ನು ಅಲ್ಲಗಳೆಯುವಂತಿಲ್ಲ. ಅಡ್ಡಕತ್ತರಿಯಲ್ಲಿ ಸಿಲುಕಿದ್ದಾರೆ.

ವಿಜಯನಗರ ಜಿಲ್ಲಾ ವ್ಯಾಪ್ತಿಗೆ 137 ಗ್ರಾಮ ಪಂಚಾಯಿತಿಗಳು ಬರುತ್ತವೆ. ಈ ಪೈಕಿ 89 ಕಡೆಗಳಲ್ಲಿ ಪಿಡಿಒಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನು ಗ್ರೇಡ್‌–1 ಕಾರ್ಯದರ್ಶಿ ಹುದ್ದೆ ಶೇ 60ರಷ್ಟು, ಗ್ರೇಡ್‌–2 ಶೇ 40ರಷ್ಟು, ಎಎಸ್‌ಡಿ ಶೇ 50ರಷ್ಟು ಹುದ್ದೆಗಳು ಭರ್ತಿಯಾಗಿವೆ. ಬಡ್ತಿಯಲ್ಲಿ ಶೇ 30, ಹೊಸ ಹುದ್ದೆಗಳನ್ನು ಶೇ 70ರಷ್ಟು ತುಂಬಲು ಸರ್ಕಾರ ಮೀನ ಮೇಷ ಎಣಿಸುತ್ತಿದೆ. ಹೀಗೆ ಕೆಳಹಂತದಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇರುವುದರಿಂದ ಸರ್ಕಾರದ ಯೋಜನೆಗಳು, ಸಾರ್ವಜನಿಕರ ಕೆಲಸಗಳು ಸಕಾಲಕ್ಕೆ ಆಗುತ್ತಿಲ್ಲ. ಪಿಡಿಒಗಳು ಅತಿ ಒತ್ತಡದಲ್ಲಿ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ಇದೆ.

ಇನ್ನೊಂದೆಡೆ, ಸ್ಥಳೀಯ ರಾಜಕೀಯ ಮುಖಂಡರ ಅತಿಯಾದ ಹಸ್ತಕ್ಷೇಪದಿಂದ ರೋಸಿ ಹೋಗಿದ್ದಾರೆ. ಈ ಎರಡೂ ಕಾರಣಗಳಿಂದ ಅನೇಕರು ಕೆಲಸ ತೊರೆದಿದ್ದಾರೆ. ಕೆಲವರು ತೊರೆಯುವ ಉಮೇದಿನಲ್ಲಿದ್ದಾರೆ. ಹೆಚ್ಚಿನ ಕೆಲಸದ ಒತ್ತಡದಿಂದ ಕೆಲವು ಪಿಡಿಒಗಳು ತಾಲ್ಲೂಕು ಪಂಚಾಯಿತಿಯಲ್ಲಿ ಕುಳಿತು ಕೆಲಸ ನಿರ್ವಹಿಸುತ್ತಾರೆ. ಗ್ರಾಮಗಳಿಗೆ ಹೆಚ್ಚಾಗಿ ಭೇಟಿ ನೀಡಲು ಸಾಧ್ಯವಾಗುವುದಿಲ್ಲ. ಆಗ ಸ್ಥಳೀಯರು ಅವರ ವಿರುದ್ಧ ಆರೋಪ ಮಾಡುತ್ತಾರೆ. ಜಟಾಪಟಿಗೂ ಇಳಿಯುತ್ತಾರೆ. ಬಳ್ಳಾರಿ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ಇದೆ.

ಗ್ರಾಮ ಪಂಚಾಯಿತಿಗಳನ್ನು ಸರ್ಕಾರ ಸಶಕ್ತಗೊಳಿಸಬೇಕಾದರೆ ಅಲ್ಲಿರುವ ಎಲ್ಲ ಹುದ್ದೆಗಳನ್ನು ತುಂಬಬೇಕು. ಅದಾಗದ ಹೊರತು ಯಾವುದೇ ಹೊಸ ಯೋಜನೆ ಘೋಷಿಸಿದರೆ ನಿರುಪಯುಕ್ತ. ಏಕೆಂದರೆ ಯೋಜನೆ ಅನುಷ್ಠಾನಗೊಳಿಸುವ ಸಿಬ್ಬಂದಿಯೇ ಇಲ್ಲದಿದ್ದರೆ ಯೋಜನೆ ಘೋಷಿಸಿ ಏನು ಪ್ರಯೋಜನ ಎನ್ನುತ್ತಾರೆ ಗ್ರಾಮೀಣ ಜನತೆ.

ಪ್ರಜಾವಾಣಿ ತಂಡ: ಶಶಿಕಾಂತ ಎಸ್‌. ಶೆಂಬೆಳ್ಳಿ, ಎಸ್‌.ಎಂ. ಗುರುಪ್ರಸಾದ್‌, ಕೆ. ಸೋಮಶೇಖರ್‌, ಎ.ಎಂ. ಸೋಮಶೇಖರಯ್ಯ, ಎಚ್‌.ಎಂ. ಪಂಡಿತಾರಾಧ್ಯ, ಸಿ. ಶಿವಾನಂದ, ವಾಗೀಶ ಎ. ಕುರುಗೋಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT