ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ವೈಫಲ್ಯದಿಂದ ಜನ ಮತಾಂತರಗೊಳ್ಳುತ್ತಿದ್ದಾರೆ: ವಿ.ಎಸ್‌.ಉಗ್ರಪ್ಪ ಆರೋಪ

Last Updated 15 ಡಿಸೆಂಬರ್ 2021, 7:54 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಬಡತನ, ನಿರುದ್ಯೋಗ, ಶೋಷಣೆಗಳಿಂದ ಅಲ್ಲಲ್ಲಿ ಕೆಲ ಜನ ಮತಾಂತರಗೊಳ್ಳುತ್ತಿದ್ದಾರೆ. ಆದರೆ, ಈ ಸಮಾಜದ ಅನಿಷ್ಠಗಳನ್ನು ಹೋಗಲಾಡಿಸಲು ಸರ್ಕಾರ ವೈಫಲ್ಯಗೊಂಡಿರುವುದರಿಂದ ಮತಾಂತರ ಹೊಂದುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ವಿ.ಎಸ್‌. ಉಗ್ರಪ್ಪ ಹೇಳಿದರು.

‘ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕೆಂಬ ಬಿಜೆಪಿಯ ಚಿಂತನೆಯಲ್ಲಿ ರಾಜಕೀಯ ಹುನ್ನಾರ ಇದೆ. 75 ವರ್ಷಗಳಲ್ಲಿ ಮತಾಂತರದ ಪಿಡುಗು ಇರಲಿಲ್ಲವೇ? ಈಗೇಕೇ ಜಾಸ್ತಿ ಆಗಿದೆ? ಈಗೇಕೇ ಕಾಯ್ದೆ ಅಗತ್ಯವೆನಿಸುತ್ತಿದೆ? ಯಾವುದೇ ಪ್ರಬಲ ಸಮುದಾಯದವರು, ಶ್ರೀಮಂತರು ಮತಾಂತರ ಆಗುವುದಿಲ್ಲ. ಬಡವರು, ಶೋಷಿತರು, ನಿರುದ್ಯೋಗಕ್ಕೆ ಬೇಸತ್ತು ಮತಾಂತರ ಆಗುತ್ತಿದ್ದಾರೆ. ಸರ್ಕಾರ ಅದನ್ನು ತಡೆಯುವ ಕೆಲಸವೇಕೇ ಮಾಡುತ್ತಿಲ್ಲ?’ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಪೆಟ್ರೋಲ್‌, ಡೀಸೆಲ್‌, ಸಿಲಿಂಡರ್‌ ದರ ಗಗನಕ್ಕೆ ಏರಿದೆ. ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಜನ ಬೇಸತ್ತಿದ್ದಾರೆ. ಜನರ ದಿಕ್ಕು ತಪ್ಪಿಸುವುದಕ್ಕಾಗಿ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಮಾತುಗಳನ್ನು ಆಡುತ್ತಿದೆ. ಭಾವನಾತ್ಮಕ ವಿಷಯಗಳನ್ನು ಮುಂದೆ ತಂದು ಸಂವಿಧಾನ ವಿರೋಧಿ ಕೃತ್ಯಗಳನ್ನು ಎಸಗುತ್ತಿದೆ’ ಎಂದು ಆರೋಪಿಸಿದರು.

‘ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಸಮಾನ ಸ್ಥಾನಗಳು ಬಂದಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 15 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದ್ದರು. ಹಣ ಬಲ, ತೋಳ್ಬಲ, ಜಾತಿ ಬಲದಿಂದ ಚುನಾವಣೆ ಎದುರಿಸಿದ್ದ ಬಿಜೆಪಿ ಅದು ಅಂದುಕೊಂಡಷ್ಟು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಜನ ಬಿಜೆಪಿ ಬಗ್ಗೆ ಭರವಸೆ ಕಳೆದುಕೊಂಡಿದ್ದಾರೆ. ಬರುವ ವಿಧಾನಸಭೆ, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಪರಿಷತ್‌ ಚುನಾವಣೆ ದಿಕ್ಸೂಚಿ’ ಎಂದು ಹೇಳಿದರು.

‘ಹೊಸಪೇಟೆ ನಗರಸಭೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ ಗೆಲುವಿನ ಬಾವುಟ ಹಾರಾಡಲಿದೆ. ಆನಂದ್‌ ಸಿಂಗ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಬಿಜೆಪಿ ಪಕ್ಷದವರು ಕಾಂಗ್ರೆಸ್‌ ಟಿಕೆಟ್‌ ಕೇಳುತ್ತಿದ್ದಾರೆ. ಇದು ಕಾಂಗ್ರೆಸ್‌ ಪರ ಅಲೆ ಇರುವುದನ್ನು ತೋರಿಸುತ್ತದೆ’ ಎಂದರು.

‘ಆಹಾರದ ಹೆಸರಲ್ಲಿ ರಾಜ್ಯ ಸರ್ಕಾರ ಸಮಾಜ ವಿಭಜಿಸುವ ಕೆಲಸ ಮಾಡಬಾರದು. ಮೊಟ್ಟೆ ಬೇಕು ಎನ್ನುವವರಿಗೆ ಮೊಟ್ಟೆ ಕೊಡಬೇಕು. ಬೇಡ ಎನ್ನುವವರಿಗೆ ಬೇರೆ ಕೊಡಬೇಕು. ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿನಾಯಕ್‌ ಶೆಟ್ಟರ್‌, ಮುಖಂಡರಾದ ಗುಜ್ಜಲ್‌ ನಾಗರಾಜ್‌, ಗುಜ್ಜಲ್‌ ರಘು, ನಿಂಬಗಲ್‌ ರಾಮಕೃಷ್ಣ, ಸೋಮಶೇಖರ್‌ ಬಣ್ಣದಮನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT