ಹೂವಿನಹಡಗಲಿ: ಶಂಕಿತ ಡೆಂಗಿ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ತಾಲ್ಲೂಕಿನ ದಾಸನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಗುರುವಾರ ರಾತ್ರಿ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ದೇವಪ್ಪ ಹರಿಜನ (46) ಮೃತರು. ಅವರಿಗೆ ಪತ್ನಿ ಇಬ್ಬರು ಪುತ್ರರು ಇದ್ದಾರೆ. ಕೆಲ ದಿನಗಳಿಂದ ಜ್ವರ ಕಾಣಿಸಿಕೊಂಡಿದ್ದರಿಂದ ದೇವಪ್ಪ ಅವರನ್ನು ಹೊಳಲು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಶಿಫಾರಸು ಮಾಡಿದ್ದರಿಂದ ದಾವಣಗೆರೆ ಎಸ್.ಎಸ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಪರೀಕ್ಷೆ ನಡೆಸಿದಾಗ ಶಂಕಿತ ಡೆಂಗಿ ಇರುವುದು ತಿಳಿದಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶವವನ್ನು ಶುಕ್ರವಾರ ಸ್ವಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು.
‘ದಾಸನಹಳ್ಳಿಯ ದೇವಪ್ಪ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪ್ರಾಥಮಿಕ ಪರೀಕ್ಷೆಯಲ್ಲಿ ಶಂಕಿತ ಡೆಂಗಿ ಎಂದು ಗುರುತಿಸಲಾಗಿದೆ. ಎಲಿಸಾ ಪರೀಕ್ಷೆಯ ವರದಿ ಮಾತ್ರ ಡೆಂಗಿಯನ್ನು ಖಚಿತಪಡಿಸುತ್ತಿದ್ದು, ಅವರ ಎಲಿಸಾ ಪರೀಕ್ಷೆ ವರದಿ ಬಂದಿಲ್ಲ. ಆದಾಗ್ಯೂ ಮಾರ್ಗಸೂಚಿ ಪ್ರಕಾರ ಗ್ರಾಮದಲ್ಲಿ ನೈರ್ಮಲ್ಯ, ಫಾಗಿಂಗ್ ಸಿಂಪರಣೆ ಮಾಡಿಸುತ್ತೇವೆ. ಮನೆ ಮನೆ ಸಮೀಕ್ಷೆ ನಡೆಸುತ್ತೇವೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸಪ್ನಾ ಕಟ್ಟಿ ತಿಳಿಸಿದರು.
‘ಜ್ವರ ಕಾಣಿಸಿದ ಎರಡೇ ದಿನಕ್ಕೆ ಸಾವಾಗುವುದಿಲ್ಲ. ಬೇರೆ ಕಾಯಿಲೆಯ ಚಿಕಿತ್ಸೆಗೆ ಅವರು ಖಾಸಗಿ ಆಸ್ಪತ್ರೆಗೆ ತೆರಳಿದ್ದರು ಎಂಬ ಮಾಹಿತಿ ಇದೆ. ಅವರ ಎಲಿಸಾ ಪರೀಕ್ಷೆ ವರದಿ ಬಾರದ ಹೊರತು ಡೆಂಗಿ ಪ್ರಕರಣ ಎಂದು ಪರಿಗಣಿಸಲು ಬರುವುದಿಲ್ಲ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಂಕರನಾಯ್ಕ ತಿಳಿಸಿದರು.
ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ: ‘ದಾಸನಹಳ್ಳಿ ಗ್ರಾಮದಲ್ಲಿ ಚರಂಡಿಗಳು ತುಂಬಿ ಹರಿಯುತ್ತಿವೆ. ನೈರ್ಮಲ್ಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸೊಳ್ಳೆಗಳ ಕಾಟ ತೀವ್ರವಾಗಿದ್ದರೂ ಫಾಗಿಂಗ್ ಸಿಂಪರಣೆ ಮಾಡುತ್ತಿಲ್ಲ. ಶಂಕಿತ ಡೆಂಗಿ ಜ್ವರಕ್ಕೆ ವ್ಯಕ್ತಿಯೊಬ್ಬ ಬಲಿಯಾಗಿದ್ದರೂ ಗ್ರಾಮ ಪಂಚಾಯಿತಿಯವರು ಎಚ್ಚೆತ್ತುಕೊಂಡಿಲ್ಲ’ ಎಂದು ಯುವ ಮುಖಂಡ ಮಾಲತೇಶ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.