ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಸ್ಥಳನಾಮ ಅಧ್ಯಯನ ಆರಂಭಿಸಿದವರು ವಿದೇಶಿಯರು: ಸಂಶೋಧನಾ ವಿದ್ಯಾರ್ಥಿ

Last Updated 23 ಏಪ್ರಿಲ್ 2021, 8:59 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಭಾರತದಲ್ಲಿ ಮೊದಲ ಬಾರಿಗೆ ಸ್ಥಳನಾಮಗಳ ಅಧ್ಯಯನ ಆರಂಭಿಸಿದವರು ವಿದೇಶಿಯರು’ ಎಂದು ಸಂಶೋಧನಾ ವಿದ್ಯಾರ್ಥಿ ನಾಗೇಶ್‌ ತಿಳಿಸಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಿಂದ ಶುಕ್ರವಾರ ಏರ್ಪಡಿಸಿದ್ದ ದೇಸಿ ಮಾತು–10ರಲ್ಲಿ ಸ್ಥಳನಾಮ ಕುರಿತು ವಿಷಯ ಮಂಡಿಸಿದರು.

‘ವಿದ್ವಾಂಸರಾದ ಜರ್ಮನಿಯ ಲಿಬ್ರಿಯಲ್‌ ಲೀಬ್ನಿಜಾ, ಇಂಗ್ಲೆಂಡಿನ ಸ್ಕೀಟ್‌, ಎಚ್‌.ಎಸ್‌. ಸ್ಮಿತ್‌ ಸೇರಿದಂತೆ ಹಲವರು ಸ್ಥಳನಾಮಗಳ ಕುರಿತು ಅಧ್ಯಯನ ಆರಂಭಿಸಿದ್ದರು. ಭಾರತದಲ್ಲಿ ಮೊದಲ ಬಾರಿಗೆ ಸ್ಥಳೀಯರಾದ ಎಚ್‌.ಡಿ. ಸಂಕಾಲಿಯ ಶುರು ಮಾಡಿದರು. ಅವರ ಬಳಿಕ ಅನೇಕ ವಿದ್ವಾಂಸರು ಈ ಕುರಿತು ಅಧ್ಯಯನ ನಡೆಸಿದರು’ ಎಂದರು.

‘ರಾಜ್ಯದಲ್ಲಿ ಶಂಬಾ ಜೋಶಿಯವರು ಸ್ಥಳನಾಮಗಳ ಅಧ್ಯಯನ ಕೈಗೊಂಡರು. ಕೊಪ್ಪಳ ಪರಿಸರದ ಸ್ಥಳನಾಮಗಳ ಕುರಿತು ವಿಭಿನ್ನ ಆಯಾಮಗಳಲ್ಲಿ ಅಧ್ಯಯನ ನಡೆಸಿದರು. ಐತಿಹಾಸಿಕ, ಜಾನಪದೀಯ, ಭಾಷಿಕ, ಶಾಸನಾಧಾರಿತ, ಕನ್ನಡ ಕಾವ್ಯ ಆಧರಿಸಿ ಕೊಪ್ಪಳ, ಜಬ್ಬಲಗುಡ್ಡ, ಗಿಣಿಗೇರಾ, ಕನಕಗಿರಿ, ಜೀರ್ಹಾಳ, ಘಡಿವಡಕಿ, ಹೇರೂರು, ವೆಂಕಟಗಿರಿ, ಗಂಗಾವತಿ, ವಿಪ್ರ, ಸಂಗಾಪುರ, ರಾಂಪುರ, ಹೇಮಗುಡ್ಡ, ಕಿನ್ನಾಳ, ಬೂದಗುಂಪಾ, ಹುಲಿಗಿ, ಕಡೆಬಾಗಿಲು, ಅಂಜನಾದ್ರಿ, ಕಲಿಕೇರಾ, ಆನೆಗೊಂದಿ ಸೇರಿದಂತೆ ಮುಂತಾದ ಸ್ಥಳಗಳ ಸ್ಥಳನಾಮಗಳ ಮಹತ್ವವನ್ನು ಅರ್ಥಪೂರ್ಣವಾಗಿ ವಿಶ್ಲೇಷಿಸಿದರು’ ಎಂದರು.

ಸಂಶೋಧನಾ ವಿದ್ಯಾರ್ಥಿ ಅಶೋಕ ಮಾತನಾಡಿ, ‘ಕೊಪ್ಪಳ ಪರಿಸರದ ಸ್ಥಳನಾಮಗಳ ಹಿನ್ನೆಲೆ ಹುಡುಕುತ್ತ ಹೋದರೆ ಅದು ನಮ್ಮನ್ನು ಕ್ರಿ. ಪೂ. 4ನೇ ಶತಮಾನದ ಮೌರ್ಯರ ಕಾಲಕ್ಕೆ ಕರೆದೊಯ್ಯುತ್ತದೆ. ಈ ಭೂಭಾಗವು ಅನಾದಿ ಕಾಲದಿಂದಲೂ ಬಹಳ ಸಮೃದ್ಧಿಯಿಂದ ಕೂಡಿದೆ. ಅದನ್ನು ಚೀನಾದ ಸೀ-ಯು-ಕಿ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಕಲ್ಯಾಣಿ ಚಾಲುಕ್ಯರು, ಕಳಚೂರ್ಯರ ಕಾಲದಲ್ಲೂ ಕೊಪ್ಪಳ ಪರಿಸರದೊಂದಿಗೆ ನಿಕಟವಾದ ಸಂಬಂಧವಿದೆ. ಕಂಪಲಿಯ ಕಂಪಿಲರಾಯನ ಕಾಲದಲ್ಲಿ ಕೊಪ್ಪಳ ಕೋಟೆಯನ್ನು ಮಾಂಡಲಿಕನಾದ ತಿಮ್ಮರಾಜ ಈ ಭಾಗದಲ್ಲಿ ಆಳ್ವಿಕೆ ನಡೆಸಿದ್ದ. ಆದಿ ಮಾನವನ ನೆಲೆಗೆ ಹಿರೆಬೆಣಕಲ್ ಜೀವಂತ ಸಾಕ್ಷಿ’ ಎಂದು ಹೇಳಿದರು.

ಸಂಶೋಧನಾ ವಿದ್ಯಾರ್ಥಿಗಳಾದ ಎಂ. ಓಬಳೇಶ್ ಎಂ, ವಿ. ರೇಖಾ, ಬಿ.ಕೆ. ಮಾರುತಿ, ಬಿಳೇನಿ ಸಿದ್ಧ, ಕೆ. ಬೆಟ್ಟಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT