ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆಯಲ್ಲಿ ಪೊಲೀಸ್ ಹುತಾತ್ಮ ದಿನ ಆಚರಣೆ

ನಾವು ಸುರಕ್ಷಿತರಾಗಿದ್ದೇವೆ ಎಂದರೆ ಅದಕ್ಕೆ ಕಾರಣ ಪೊಲೀಸರು: ಜಿಲ್ಲಾಧಿಕಾರಿ ದಿವಾಕರ್‌
Published 21 ಅಕ್ಟೋಬರ್ 2023, 7:55 IST
Last Updated 21 ಅಕ್ಟೋಬರ್ 2023, 7:55 IST
ಅಕ್ಷರ ಗಾತ್ರ

ಹೊಸಪೇಟೆ: ‘ಹಬ್ಬ ಹರಿದಿನಗಳಲ್ಲಿ ನಾವು ಕುಟುಂಬದವರೊಂದಿಗೆ ಸಂತೋಷವಾಗಿರುತ್ತೇವೆ, ಪ್ರಾಕೃತಿಕ ವಿಕೋಪ ಸಹಿತ ಹಲವಾರು ತೊಂದರೆಗಳು ಇದ್ದಾಗಲೂ ನಾವು ನೆಮ್ಮದಿಯನ್ನು ಅರಸಿ ಹೋಗಿರುತ್ತೇವೆ. ನಮಗಾಗಿ ಬೀದಿಗಳಲ್ಲಿ ಅಲೆಯುವ, ಮಳೆ, ಬಿಸಿಲು ಎನ್ನದೆ ಶ್ರಮಿಸುವ ಪೊಲೀಸರಿಂದಾಗಿಯೇ ನಾವು ಸುರಕ್ಷಿತವಾಗಿದ್ದೇವೆ’ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್ ಹೇಳಿದರು.

ಇಲ್ಲಿನ ನೂತನ ಪೊಲೀಸ್‌ ಪರೇಡ್‌ ಮೈದಾನದಲ್ಲಿ ನಿರ್ಮಿಸಲಾಗಿರುವ ನೂತನ ಪೊಲೀಸ್‌ ಹುತಾತ್ಮ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಶನಿವಾರ ಪೊಲೀಸ್ ಹುತಾತ್ಮ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

’ದೇಶದಲ್ಲಿ ಕರ್ತವ್ಯದ ವೇಳೆ ಹುತಾತ್ಮರಾದ ಪೊಲೀಸರನ್ನು ನೋಡಿದರೆ ಎಸ್‌ಐ ಹಂತಕ್ಕಿಂತ ಕೆಳಗಿನ ಹಂತದ ಪೊಲೀಸ್‌ ಸಿಬ್ಬಂದಿಯೇ ಅಧಿಕ ಮಂದಿ ಇದ್ದಾರೆ. ಕೆಲಸದ ವೇಳೆ ಇತರ ವ್ಯಕ್ತಿಗಳ ಕಾರಣಕ್ಕೆ ಸಾವು ಸಂಭವಿಸಿದ ಪ್ರಸಂಗಗಳ ಜತೆಗೆ ವೈಯಕ್ತಿಕ ಬದುಕಿನ ಕಾರಣದಿಂದಲೂ ಸಾವು ಸಂಭವಿಸಿರುತ್ತದೆ. ಇಂತಹ ಸಾವುಗಳಿಗೆ ಕೆಲಸದ ಒತ್ತಡ, ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದಿರುವುದು ಸಹಿತ ಹಲವು ಕಾರಣಗಳು ಇರುತ್ತವೆ. ಹೀಗಾಗಿ ಕರ್ತವ್ಯದ ಜತೆಗೆ ಆರೋಗ್ಯದ ಕಡೆಗೂ ಪೊಲೀಸರು ಹೆಚ್ಚಿನ ಗಮನ ಹರಿಸಬೇಕು’ ಎಂದು ಅವರು ಸಲಹೆ ನೀಡಿದರು.

ಬೊಗಳದ ನಾಯಿ ಮರಿಯ ನಿದರ್ಶನವೊಂದನ್ನು ಉದಾಹರಿಸಿದ ಅವರು, ನಾಯಿ ಬೊಗಳುತ್ತಿಲ್ಲ ಎಂಬ ಬಗ್ಗೆ ಚಿಂತೆ ಬೇಡ,  ‘ನಾಯಿ ಬೊಗಳುವುದಿಲ್ಲ, ಕಚ್ಚುತ್ತದೆ’ ಎಂಬ ಬೋರ್ಡ್‌ ಹಾಕಿದ್ದೇ ಆದರೆ ಭಯ ಹುಟ್ಟಿಸಲು ಅದುವೇ ಸಾಕಾಗುತ್ತದೆ ಎಂದರು. ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡುವುದು ಪೊಲೀಸರ ಹೊಣೆಗಾರಿಕೆ. ಇದಕ್ಕಾಗಿ ಅವರು ನಾನಾ ತಂತ್ರ ಬಳಸಬೇಕಾಗುತ್ತದೆ. ಕಾನೂನಿನ ಚೌಕಟ್ಟಿನಲ್ಲಿ ಮಾಡುವಂತಹ ಇಂತಹ ಕೌಶಲ ತಂತ್ರಗಳು ಕೊನೆಗೆ ಸಮಾಜದ ಸ್ವಾಸ್ಥ್ಯ ಕಾಪಾಡುತ್ತದೆ, ನಮಗೆ ರಕ್ಷಣೆ ನೀಡುತ್ತದೆ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ. ಅವರು ತಾವು ಸಹ 20 ವರ್ಷ ಸೇನೆಯಲ್ಲಿ ಹಾಗೂ 30 ತಿಂಗಳು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿ, ಪೊಲೀಸ್‌ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆಯ ಅಗತ್ಯ ಇದೆ ಎಂದರು.

ಇದಕ್ಕೆ ಮೊದಲು ಜಿಲ್ಲಾ ಪೊಲೀಸ್‌ ವರಿಷ್ಠ ಶ್ರಿಹರಿಬಾಬು ಬಿ.ಎಲ್‌. ಅವರು ದೇಶದಲ್ಲಿ ಕರ್ತವ್ಯದಲ್ಲಿದ್ದಾಗ ಹುತಾತ್ಮರಾದ ಎಲ್ಲ 189 ಪೊಲೀಸರ ಹೆಸರು ಓದಿ ಹೇಳಿದರು. ರಾಜ್ಯದಲ್ಲಿ ಇಂತಹ 16 ಮಂದಿ ಮತ್ತು ಜಿಲ್ಲೆಯಲ್ಲಿ ಒಬ್ಬರು ಹುತಾತ್ಮರಾಗಿದ್ದರ ಬಗ್ಗೆ ತಿಳಿಸಿದರು.

ಡಿಸಿ, ಸಿಇಒ, ಎಸ್‌ಪಿ ಸಹಿತ ಹಲವು ಪೊಲೀಸ್ ಅಧಿಕಾರಿಗಳು, ನಿವೃತ್ತ ಸೈನಿಕರು, ಹುತಾತ್ಮ ಪೊಲೀಸ್‌ ಅವರ ಕುಟುಂಬದವರು ಹುತಾತ್ಮ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. 

ನಾಲ್ವರು ಸಾವು: ಹುತಾತ್ಮರಾದ ಪೊಲೀಸರ ಪಟ್ಟಿಯಲ್ಲಿ ಒಬ್ಬರ ಹೆಸರಷ್ಟೇ ಇದ್ದರೂ,  ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ ಇನ್ನೂ ಮೂವರು ಅನಾರೋಗ್ಯ ಸಹಿತ ಇತರ ಕಾರಣಗಳಿಂದ ಮೃತಪಟ್ಟಿದ್ದಾರೆ. ಹೀಗಾಗಿ ಎಲ್ಲಾ ನಾಲ್ವರು ಪೊಲೀಸರ ಕುಟುಂಬದವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT