ಶನಿವಾರ, ಅಕ್ಟೋಬರ್ 23, 2021
22 °C
ವಿಜಯ ರಥ ಮೆರವಣಿಗೆ; ನೂರು ಕಲಾ ತಂಡಗಳು ಭಾಗಿ

ಹೊಸಪೇಟೆ: ವಿಜಯನಗರ ವೈಭವಕ್ಕೆ ಸಿದ್ಧತೆ ಜೋರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಅಕ್ಟೋಬರ್‌ 2, 3ರಂದು ನಡೆಯಲಿರುವ ನೂತನ ವಿಜಯನಗರ ಜಿಲ್ಲೆಯ ಉದ್ಘಾಟನಾ ಸಮಾರಂಭಕ್ಕೆ ನಗರದಲ್ಲಿ ಭರದ ಸಿದ್ಧತೆಗಳು ನಡೆದಿವೆ.

ನಗರದ ಹೃದಯ ಭಾಗದ ಕ್ರೀಡಾಂಗಣದಲ್ಲಿ ಪ್ರಧಾನ ಕಾರ್ಯಕ್ರಮಗಳು ಜರುಗಲಿವೆ. ಅದಕ್ಕಾಗಿ 150 ಅಡಿ ಅಗಲವಾದ ವೇದಿಕೆ ನಿರ್ಮಿಸಲಾಗುತ್ತಿದೆ. ಹಂಪಿ ವಾಸ್ತುಶಿಲ್ಪ, ಪರಿಸರದ ಮಾದರಿಯಲ್ಲಿ ವೇದಿಕೆಗೆ ರೂಪ ಕೊಡಲಾಗುತ್ತಿದೆ. 150ಕ್ಕೂ ಹೆಚ್ಚು ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳದ ಸುತ್ತಲೂ ತಗಡಿನ ಶೀಟಿನಿಂದ ಮುಚ್ಚಲಾಗಿದೆ. ಗಣ್ಯರು, ಸಾರ್ವಜನಿಕರು ಬಂದು ಹೋಗಲು ಪ್ರತ್ಯೇಕವಾಗಿ ತಾತ್ಕಾಲಿಕ ಪ್ರವೇಶ ದ್ವಾರ ನಿರ್ಮಿಸಲಾಗುತ್ತಿದೆ. ಎಲ್ಲರೂ ಅದರಿಂದಲೇ ಬಂದು ಹೋಗುವುದು ಕಡ್ಡಾಯ.

ಕ್ರೀಡಾಂಗಣದ ಒಂದು ಬದಿಯಲ್ಲಿ ಸರ್ಕಾರದ ವಿವಿಧ ಇಲಾಖೆಯ 30 ಮಳಿಗೆಗಳು ತಲೆ ಎತ್ತಲಿವೆ. ಪ್ರದರ್ಶನ ಮಳಿಗೆಗಳನ್ನು ಬೆಳಿಗ್ಗೆಯಿಂದ ಸಂಜೆಯವರೆಗೆ ಜನ ವೀಕ್ಷಿಸಬಹುದು. ಸಂಜೆ ನಂತರ ಪಾಸ್‌ ಇದ್ದವರಿಗಷ್ಟೇ ಅವಕಾಶ ಇರಲಿದೆ. ಇಡೀ ಕ್ರೀಡಾಂಗಣದ ಸುತ್ತ ಬೆಳೆದಿದ್ದ ಮುಳ್ಳು, ಕಂಟಿ ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿದೆ. ರಸ್ತೆಯ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ನಗರದ ಪ್ರಮುಖ ರಸ್ತೆಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗುತ್ತಿದೆ.

ವಿಜಯ ರಥ: ಅ. 2ರಂದು ನಗರದ ವಡಕರಾಯ ದೇವಸ್ಥಾನದಿಂದ ಕಾರ್ಯಕ್ರಮ ನಡೆಯಲಿರುವ ಸ್ಥಳದ ವರೆಗೆ ವಿಜಯ ರಥ ಸಾಗಲಿದೆ. ತೆರೆದ ವಾಹನದಲ್ಲಿ ಭುವನೇಶ್ವರಿ ದೇವಿಯ ಮೂರ್ತಿ, 100 ಕಲಾ ತಂಡಗಳು ಪಾಲ್ಗೊಳ್ಳಲಿವೆ. ಎಲ್ಲಾ ಕಲಾವಿದರಿಗೆ ಕೋವಿಡ್‌ ಪರೀಕ್ಷೆ ನಡೆಸಿದ ನಂತರವೇ ಅವರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಲಾಗುತ್ತದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರ ಥರ್ಮಲ್‌ ಸ್ಕ್ರೀನಿಂಗ್‌, ಮಾಸ್ಕ್‌ ಧರಿಸುವುದು ಕಡ್ಡಾಯಗೊಳಿಸಲಾಗಿದೆ.

ಸಿದ್ಧತೆ ಪರಿಶೀಲನೆ: ಕಾರ್ಯಕ್ರಮದ ನಿಮಿತ್ತ ವಿಜಯನಗರ ಜಿಲ್ಲೆ ವಿಶೇಷ ಅಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌ ಅವರು ಸೋಮವಾರ ನಗರದಲ್ಲಿ ಕಾರ್ಯಕ್ರಮ ಸಿದ್ಧತೆಯ ಪರಿಶೀಲನೆ ನಡೆಸಿದರು. ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಯಾವುದೇ ರೀತಿಯ ಕುಂದು ಕೊರತೆ ಆಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು.

ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ಡಿವೈಎಸ್ಪಿಗಳಾದ ವಿಶ್ವನಾಥ್‌ ರಾವ್‌ ಕುಲಕರ್ಣಿ, ಕಾಶಿಗೌಡ, ತಹಶಿಲ್ದಾರ್ ಎಚ್‌. ವಿಶ್ವನಾಥ್‌, ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ, ತಾಲ್ಲೂಕು ವೈದ್ಯಾಧಿಕಾರಿ ಡಾ. ಭಾಸ್ಕರ್, ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಲೀಂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು