ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲುಮತ ಸಮಾಜದ ಕಾರ್ಯಕ್ರಮಕ್ಕೆ ವಾಲ್ಮೀಕಿ ನಾಯಕರ ಸಂಘ ವಿರೋಧ

ವಿಜಯನಗರ ಸಂಸ್ಥಾಪನಾ ದಿನ ವಿರೋಧಿಸಿ ಪ್ರತಿಭಟನೆ
Last Updated 5 ಏಪ್ರಿಲ್ 2021, 6:33 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ):ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹಕ್ಕ–ಬುಕ್ಕರ ಸವಿನೆನಪಿನಲ್ಲಿ ಏ. 18ರಂದು ಹಾಲುಮತ ಸಮಾಜದವರು ತಾಲ್ಲೂಕಿನ ಹಂಪಿಯಲ್ಲಿ ನಡೆಸಲು ಉದ್ದೇಶಿಸಿರುವ ವಿಜಯನಗರ ಸಂಸ್ಥಾಪನಾ ದಿನ ಕಾರ್ಯಕ್ರಮವನ್ನು ವಿರೋಧಿಸಿ ತಾಲ್ಲೂಕು ವಾಲ್ಮೀಕಿ ನಾಯಕರ ಸಂಘದವರು ಸೋಮವಾರ ನಗರದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಬಾರದು. ಒಂದುವೇಳೆ ಕಾರ್ಯಕ್ರಮ ನಡೆಸಿದರೆ ಆ ದಿನ ಇಡೀ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದವರು ತಹಶೀಲ್ದಾರ್‌ ಮೂಲಕ ವಿಜಯನಗರ ಜಿಲ್ಲೆ ವಿಶೇಷ ಅಧಿಕಾರಿ ಪಿ. ಅನಿರುದ್ಧ ಶ್ರವಣ್‌ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

2010ರಲ್ಲೂ ಹಾಲುಮತ ಸಮಾಜದವರು ವಿಜಯನಗರ ಸಂಸ್ಥಾಪನಾ ದಿನ ಆಚರಣೆಗೆ ಮುಂದಾಗಿದ್ದರು. ಅದಕ್ಕೆ ವಾಲ್ಮೀಕಿ ಸಮಾಜ ವಿರೋಧ ವ್ಯಕ್ತಪಡಿಸಿದ್ದರಿಂದ ಕೈಬಿಟ್ಟಿದ್ದರು. ಆದರೆ, ಈಗ ಪುನಃ ಕಾರ್ಯಕ್ರಮ ಸಂಘಟಿಸಲು ಮುಂದಾಗಿದ್ದಾರೆ. ಇತಿಹಾಸ ತಿರುಚಿ ಹಕ್ಕ ಬುಕ್ಕರು ಹಾಲುಮತದವರು ಎಂದು ವಾದಿಸುವುದು ವಾಲ್ಮೀಕಿ ಹಾಗೂ ಕುರುಬ ಸಮುದಾಯದವರ ನಡುವೆ ಘರ್ಷಣೆಗೆ ಆಸ್ಪದ ಮಾಡಿಕೊಟ್ಟಂತಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಹಕ್ಕ ಬುಕ್ಕ ಅಧ್ಯಯನ ಪೀಠ ಸ್ಥಾಪಿಸುವ ಪ್ರಯತ್ನಗಳು ನಡೆದಿದ್ದವು. ವಾಲ್ಮೀಕಿ ಸಮಾಜದವರು ವಿರೋಧ ವ್ಯಕ್ತಪಡಿಸಿದ್ದಾಗ ಅದನ್ನು ಕೈಬಿಟ್ಟು ಹಾಲುಮತ ಅಧ್ಯಯನ ಪೀಠ ಎಂದು ಮಾಡಿದ್ದರು. ಕುರುಬರು ಹಾಗೂ ವಾಲ್ಮೀಕಿ ಸಮಾಜದವರು ಸಹೋದರರಂತೆ ಜೀವನ ನಡೆಸುತ್ತಿದ್ದಾರೆ. ರಾಜಕೀಯ ಕುತಂತ್ರದಿಂದ ಎರಡು ಸಮುದಾಯಗಳ ನಡುವೆ ಒಡಕು ಉಂಟು ಮಾಡಲು ವಿಜಯನಗರ ಸಂಸ್ಥಾಪನಾ ದಿನ ಆಚರಿಸಲಾಗುತ್ತಿದೆ. ಇದರಿಂದ ಎರಡೂ ಸಮುದಾಯದವರು ಘರ್ಷಣೆಗೆ ಇಳಿಯಬಹುದು. ಜಿಲ್ಲಾಡಳಿತ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸದೇ ಸೌಹಾರ್ದ ವಾತಾವರಣ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.

‘ಅನುಮತಿ ಕೊಟ್ಟರೆ ದಾಂಧಲೆ’

‘ಕೆಲ ಮುಖಂಡರು ಜಾತಿ ಜಾತಿಗಳ ನಡುವೆ ಗಲಭೆ ಸೃಷ್ಟಿಸುವ ಕೆಲಸ ಮಾಡುತ್ತಿರುವುದು ನಿಲ್ಲಿಸಬೇಕು. ಕುಲಶಾಸ್ತ್ರೀಯ ಅಧ್ಯಯನದ ನಂತರ ಹಕ್ಕ ಬುಕ್ಕರು ಯಾವ ಸಮಾಜದವರೆಂದು ನಿರ್ಧಾರವಾದ ನಂತರ ಸಂಸ್ಥಾಪನಾ ದಿನಾಚರಣೆ ಆಚರಿಸಬೇಕು. ಇದನ್ನು ಮೀರಿ ಸರ್ಕಾರ ಅನುಮತಿ ಕೊಟ್ಟರೆ ಆಚರಣೆ ಸ್ಥಳದಲ್ಲಿ ದಾಂಧಲೆ ಮಾಡಲಾಗುತ್ತದೆ’ ಎಂದು ವಾಲ್ಮೀಕಿ ಸಮುದಾಯದ ಮುಖಂಡ ಪಿ.ವೆಂಕಟೇಶ್ ಎಚ್ಚರಿಸಿದರು.

ವಾಲ್ಮೀಕಿ ಗುರುಪೀಠದ ಜಿಲ್ಲಾ ಧರ್ಮದರ್ಶಿ ಜಂಬಯ್ಯ ನಾಯಕ, ಮುಖಂಡರಾದ ಪಿ.ವೆಂಕಟೇಶ್, ಗಣೇಶ್, ಸಣ್ಣಕ್ಕಿ ರುದ್ರಪ್ಪ, ಜಗದೀಶ್ ಕಮತಗಿ, ವೀರಭದ್ರ, ಸೋಮಶೇಖರ್‌, ಕಟಗಿ ಜಂಬಯ್ಯ, ಗೋಸಲ ಭರಮಪ್ಪ ಇದ್ದರು.

ಕಲಬುರ್ಗಿ ವಿಭಾಗದ ಕನಕಗುರು ಪೀಠದ ಶಾಖಾ ಮಠದ ಪೀಠಾಧಿಪತಿ ಸಿದ್ದರಾಮನಂದಪುರಿ ಸ್ವಾಮೀಜಿ ಅವರು ಇತ್ತೀಚೆಗೆ ನಗರದಲ್ಲಿ ಸಭೆ ನಡೆಸಿ, ಏ. 18ರಂದು ಹಕ್ಕ ಬುಕ್ಕರ ನೆನಪು ಹಾಗೂ ಹಾಲುಮತ ಸಂಸ್ಕೃತಿ ಬಿಂಬಿಸುವ ವಿಜಯನಗರ ಸಂಸ್ಥಾಪನಾ ದಿನ ಆಚರಿಸಲಾಗುವುದು ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT