ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದ ದಿಢೀರ್‌ ಧರಣಿ: ಪ್ರತಿಭಟನಾಕಾರರು– ಪೊಲೀಸರ ನಡುವೆ ಮಾತಿನ ಚಕಮಕಿ

Last Updated 26 ಜೂನ್ 2021, 8:18 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರು ಮನವಿ ಸ್ವೀಕರಿಸಲು ಅನಗತ್ಯವಾಗಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ರೈತರು ಶನಿವಾರ ಇಲ್ಲಿನ ಸಂಡೂರು ರಸ್ತೆಯಲ್ಲಿ ದಿಢೀರ್‌ ಧರಣಿ ನಡೆಸಿದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ರೈತರಿಗೆ ಕೋವಿಡ್‌ ಪ್ಯಾಕೇಜ್‌ ಘೋಷಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ರಾಜ್ಯದಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿತ್ತು. ಅದರ ಭಾಗವಾಗಿ ರೈತ ಸಂಘದವರು ನಗರದ ಉಪವಿಭಾಗಾಧಿಕಾರಿ ಕಚೇರಿಗೆ ಬಂದು ಗಂಟೆಗೂ ಹೆಚ್ಚು ಸಮಯ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

‘ಮುಂಚಿತವಾಗಿಯೇ ಪ್ರತಿಭಟನೆ ನಡೆಸುವ ವಿಷಯ ತಿಳಿಸಿಲ್ಲ. ಹೀಗಾಗಿ ಮನವಿ ಸ್ವೀಕರಿಸಲು ಬರುವುದಿಲ್ಲ’ ಎಂದು ಅಧಿಕಾರಿಯೊಬ್ಬರು ರೈತರಿಗೆ ತಿಳಿಸಿದ್ದಾರೆ. ಇದರಿಂದ ಸಿಟ್ಟಾದ ರೈತರು, ಕಚೇರಿ ಎದುರಿನ ರಸ್ತೆಯಲ್ಲಿ ಧರಣಿ ಕುಳಿತರು. ವಿಷಯ ಅರಿತು ಸ್ಥಳಕ್ಕೆ ಬಂದ ಸಬ್‌ ಇನ್‌ಸ್ಪೆಕ್ಟರ್‌ ಜಡಿಯಪ್ಪ, ‘ಕೋವಿಡ್‌ ಇರುವುದರಿಂದ ಧರಣಿ ನಡೆಸಲು ಅವಕಾಶ ಇಲ್ಲ. ಎಲ್ಲರೂ ಎದ್ದು ಹೋಗಬೇಕು’ ಎಂದು ತಾಕೀತು ಮಾಡಿದರು. ‘ನಮಗೂ ವಿಷಯ ಗೊತ್ತಿದೆ. ಆದರೆ, ಮನವಿ ಸಲ್ಲಿಸದೇ ಇಲ್ಲಿಂದ ಹೋಗುವುದಿಲ್ಲ’ ಎಂದು ರೈತ ಸಂಘದ ಮುಖಂಡರು ಪಟ್ಟು ಹಿಡಿದರು. ಈ ವೇಳೆ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆಯಿತು.

ಈ ವಿಷಯ ಅರಿತ ಉಪವಿಭಾಗಾಧಿಕಾರಿ ಅವರು ಶಿರಸ್ತೇದಾರ ಶ್ರೀಧರ ಅವರನ್ನು ಸ್ಥಳಕ್ಕೆ ಕಳುಹಿಸಿದರು. ರೈತರು ಅವರಿಗೆ ಮನವಿ ಸಲ್ಲಿಸಿ ಧರಣಿ ಹಿಂಪಡೆದರು.

‘ರಾಜ್ಯ ರೈತ ಸಂಘವು ರಾಜ್ಯದಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದೆ. ಹೀಗಾಗಿ ನಾವು ಸ್ಥಳೀಯ ಆಡಳಿತದಿಂದ ಅನುಮತಿ ಪಡೆದಿಲ್ಲ. ಎಲ್ಲ ಕಡೆ ಜಿಲ್ಲಾಧಿಕಾರಿಗಳೇ ಮನವಿ ಸ್ವೀಕರಿಸಿದ್ದಾರೆ. ನಾವು ಮನವಿ ಸಲ್ಲಿಸಲು ಬರುವ ವಿಷಯ ಎಲ್ಲರಿಗೂ ಗೊತ್ತಿತ್ತು. ಉಪವಿಭಾಗಾಧಿಕಾರಿ ಕಚೇರಿಯಲ್ಲಿಯೇ ಇದ್ದರೂ ಹೊರಗೆ ಬಂದು ಮನವಿ ಸ್ವೀಕರಿಸಲಿಲ್ಲ. ಅವರ ಧೋರಣೆ ಖಂಡಿಸಿ ಧರಣಿ ನಡೆಸಿದ್ದೇವೆ’ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌, ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ ತಿಳಿಸಿದ್ದಾರೆ.

ಈ ಸಂಬಂಧ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಯಾರಿಗೂ ಮಾಹಿತಿ ನೀಡದೆ ನೇರವಾಗಿ ಕಚೇರಿಗೆ ಬಂದು ಪ್ರತಿಭಟನೆ ನಡೆಸಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಯಾರಿಗೂ ಪ್ರತಿಭಟನೆ ನಡೆಸಲು ಅವಕಾಶ ಇಲ್ಲ. ಮನವಿ ಸಲ್ಲಿಸಬಹುದು. ಆದರೆ, ಮುಂಚಿತವಾಗಿಯೇ ವಿಷಯ ತಿಳಿಸಬೇಕು. ಅದನ್ನವರು ಮಾಡಿರಲಿಲ್ಲ. ಬಳಿಕ ವಿಷಯ ತಿಳಿದು ಶಿರಸ್ತೇದಾರ ಅವರನ್ನು ಕಳುಹಿಸಿದ್ದೆ. ಅವರು ಮನವಿ ಸ್ವೀಕರಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ಕೋವಿಡ್‌ನಿಂದ ಮೃತರಾಗುವ ರೈತರಿಗೂ ಕೋವಿಡ್‌ ಪರಿಹಾರ ನೀಡಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಕಾರ್ಖಾನೆಗೆ ಕಬ್ಬು ಪೂರೈಸಿರುವ ರೈತರ ಬಾಕಿ ಪಾವತಿಸಬೇಕು. ಸರ್ಕಾರ ರೈತರಿಂದ ಭತ್ತ, ಜೋಳ ಖರೀದಿಸಿ ಅನೇಕ ತಿಂಗಳಾದರೂ ಅವರ ಹಣ ಪಾವತಿಸಿಲ್ಲ. ಕೂಡಲೇ ಪಾವತಿಗೆ ಕ್ರಮ ಕೈಗೊಳ್ಳಬೇಕು. ಬಳ್ಳಾರಿ–ವಿಜಯನಗರ ಜಿಲ್ಲೆಗಳಲ್ಲಿ ಮೆಣಸಿನಕಾಯಿ ಬೀಜ ಸಮರ್ಪಕ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎನ್ನುವುದು ರೈತರ ಪ್ರಮುಖ ಬೇಡಿಕೆಗಳಾಗಿವೆ.

ಮುಖಂಡರಾದ ಮರಡಿ ಜಂಬಯ್ಯ ನಾಯಕ, ಭಾಸ್ಕರ್‌ ರೆಡ್ಡಿ, ಎನ್‌. ಯಲ್ಲಾಲಿಂಗ, ಮಲ್ಲಿಕಾರ್ಜುನ, ನಾಗರಾಜ, ಜೀರ್‌ ನಾಗರಾಜ, ನಾಗೇಶ್‌, ಹನುಮಂತಪ್ಪ ನಲ್ಲಾಪುರ ಇತರರಿದ್ದರು.

ರೈತರು ಶನಿವಾರ ಇಲ್ಲಿನ ಸಂಡೂರು ರಸ್ತೆಯಲ್ಲಿ ದಿಢೀರ್‌ ಧರಣಿ ನಡೆಸಿದರು.
ರೈತರು ಶನಿವಾರ ಇಲ್ಲಿನ ಸಂಡೂರು ರಸ್ತೆಯಲ್ಲಿ ದಿಢೀರ್‌ ಧರಣಿ ನಡೆಸಿದರು.
ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು
ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು
ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ
ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ
ಶಿರಸ್ತೇದಾರ ಶ್ರೀಧರ ಅವರಿಗೆ ರೈತರು ಮನವಿ ಸಲ್ಲಿಸಿದರು.
ಶಿರಸ್ತೇದಾರ ಶ್ರೀಧರ ಅವರಿಗೆ ರೈತರು ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT