ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ ನಿವೇಶನಕ್ಕೆ ಆಗ್ರಹಿಸಿ ಪ್ರತಿಭಟನೆ

Last Updated 4 ಜನವರಿ 2023, 13:34 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಿವೇಶನ, ಮನೆ ಇಲ್ಲದ ಬಡವರಿಗೆ ಜಾಗ ಹಾಗೂ ಸೂರು ಕಟ್ಟಿಸಿಕೊಡಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳವರು ಬುಧವಾರ ಇಲ್ಲಿನ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಿಪಿಎಂ, ದಲಿತ ಹಕ್ಕುಗಳ ಸಮಿತಿ, ಸಿಐಟಿಯು, ಡಿವೈಎಫ್‌ಐ, ಕೆ.ಪಿ.ಆರ್‌.ಎಸ್‌., ದೇವದಾಸಿ ಮಹಿಳಾ ವಿಮೋಚನಾ ಸಂಘದವರು ಪ್ರತಿಭಟನೆ ನಡೆಸಿ, ಪೌರಾಯುಕ್ತ ಮನೋಹರ್‌ ನಾಗರಾಜ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ನಗರಸಭೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ 8315 ಜನ ನಿವೇಶನ, ಮನೆ ಕಟ್ಟಿಸಿಕೊಡಬೇಕೆಂದು 2015ರಲ್ಲಿ ಮನವಿ ಸಲ್ಲಿಸಿದ್ದಾರೆ. ಆದರೆ, ಇದುವರೆಗೆ ಈನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳಾಗಿಲ್ಲ. ಅನಗತ್ಯ ವಿಳಂಬ ಮಾಡಲಾಗುತ್ತಿದೆ. 210 ಎಕರೆ ಸರ್ಕಾರಿ ಜಮೀನು ನಿವೇಶನಕ್ಕಾಗಿಯೇ ಮೀಸಲಿಡಬೇಕೆಂದು ಹಕ್ಕೊತ್ತಾಯ ಮಾಡಿದರು.

ಹೊಸಪೇಟೆ ನಗರದ ಜನಸಂಖ್ಯೆ ಸುಮಾರು ಮೂರು ಲಕ್ಷದ ನಲವತ್ತು ಸಾವಿರ ಇದೆ. ಸ್ವಂತ ಮನೆ, ಸ್ವಂತ ಜಾಗ ಇಲ್ಲದ ಮೂವತ್ತು ಸಾವಿರಕ್ಕೂ ಹೆಚ್ಚು ಕುಟುಂಬಗಳಿವೆ. ಕಪ್ಪು ಹಣ ಹೊಂದಿದ ಅನೇಕ ಶ್ರೀಮಂತರು ಹೊಸಪೇಟೆಯ ಸುತ್ತಮುತ್ತಲಿನ ಕೃಷಿ ಭೂಮಿಯನ್ನು ರೈತರಿಂದ ಕಡಿಮೆ ಬೆಲೆಗೆ ಖರೀದಿಸಿ ನೂರಾರು ಕೋಟಿ ರೂಪಾಯಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದರ ಜೊತೆಯಲ್ಲಿ ಭೂಗಳ್ಳರು ರಿಯಲ್ ಎಸ್ಟೇಟ್ ಮಾಫಿಯಾಗಳು, ರಾಜಕಾರಣಿಗಳ ಜತೆ ಕೈಜೋಡಿಸಿರುವುದರಿಂದ ಭೂಮಿ ಬೆಲೆ ಹತ್ತುಪಟ್ಟು ಹೆಚ್ಚಾಗಿದೆ. ಕೃಷಿ ಭೂಮಿ ವಸತಿ ನಿವೇಶನಗಳಾಗಿ ಬದಲಾಗಿವೆ. ಸಾಮಾನ್ಯರು ನಿವೇಶನ ಖರೀದಿಸಲಾಗದಂತಹ ಪರಿಸ್ಥಿತಿ ಇದೆ ಎಂದು ವಿವರಿಸಿದರು.

ನಗರದಲ್ಲಿಯೇ ಹುಟ್ಟಿ ಬದುಕಿದ ಶೇ. 40ರಷ್ಟು ಜನಸಂಖ್ಯೆ ಹೊಂದಿರುವ ಎಸ್ಸಿ/ಎಸ್ಟಿ ಸಮುದಾಯಗಳು, ಹಾಗೆಯೇ ಶೇ 50ರಷ್ಟು ಜನಸಂಖ್ಯೆ ಹೊಂದಿರುವ ಕುರುಬರು, ಕಬ್ಬೇರರು, ಗಂಗಾಮತಸ್ಥರು, ಈಡಿಗರು, ಉಪ್ಪಾರರು, ಮಡಿವಾಳರು, ಗೊಲ್ಲರು, ಪಿಂಜಾರರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಹಿಂದುಳಿದ ವರ್ಗಗಳ ಬಡವರು ಮನೆ ನಿವೇಶನಗಳ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಇವರ ಕುಟುಂಬಗಳು ಬೆಳೆದಿವೆ. ಇವರ ಆರ್ಥಿಕ ಶಕ್ತಿ ಹೆಚ್ಚಾಗದ ಕಾರಣ ಒಂದೇ ಮನೆಯಲ್ಲೇ ಎರಡು ಮೂರು ಕುಟುಂಬಗಳು ವಾಸ ಮಾಡುತ್ತಿವೆ ಎಂದು ಸಮಸ್ಯೆ ಬಿಚ್ಚಿಟ್ಟರು.

ಕೂಡಲೇ ಎಲ್ಲಾ ವಾರ್ಡ್‌ಗಳಲ್ಲಿ ನಾಗರಿಕರ ಸಭೆ ಕರೆದು ಸರ್ವೇ ನಡೆಸಿ, ಜ. 20ರೊಳಗೆ ಅರ್ಹ ಫಲಾನುಭವಿಗಳ ಪಟ್ಟಿ ಪ್ರಕಟಿಸಬೇಕು. ಹೊಸಪೇಟೆ ನಗರಕ್ಕೆ ಹೊಂದಿಕೊಂಡ ಹೊರವಲಯದ 5 ಕಿ.ಮೀ ಒಳಗಿನ ಸರ್ಕಾರಿ ಜಮೀನು ಖಾಸಗಿ ವ್ಯಕ್ತಿ, ಕಂಪನಿ, ಟ್ರಸ್ಟ್‌ಗಳಿಗೆ ನೀಡಬಾರದು. ಒಂದುವೇಳೆ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಜ. 26ರಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಆರ್‌. ಭಾಸ್ಕರ್‌ ರೆಡ್ಡಿ, ಮರಡಿ ಜಂಬಯ್ಯ ನಾಯಕ, ಎನ್‌. ಯಲ್ಲಾಲಿಂಗ, ಗೋಪಾಲ, ಮಹೇಶ, ತಾಯಪ್ಪ ನಾಯಕ, ನಾಗರತ್ನಮ್ಮ, ರಮೇಶ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT