ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈಲು ಶೌಚಾಲಯ ಸ್ವಚ್ಛತೆಗೆ ಆದ್ಯತೆ ವಹಿಸಿ

ಹೊಸಪೇಟೆ ರೈಲ್ವೆ ನಿಲ್ದಾಣ ಸಲಹಾ ಸಮಿತಿ ಸದಸ್ಯರ ಸಭೆ
Published : 26 ಸೆಪ್ಟೆಂಬರ್ 2024, 15:39 IST
Last Updated : 26 ಸೆಪ್ಟೆಂಬರ್ 2024, 15:39 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ಹೊಸಪೇಟೆ ರೈಲ್ವೆ ನಿಲ್ದಾಣ ಸಲಹಾ ಸಮಿತಿ ಸದಸ್ಯರ ಸಭೆ, ಇಲಾಖೆಯ ವಾಣಿಜ್ಯ ನಿರೀಕ್ಷಕ ಶ್ರೀನಿವಾಸ್ ಮೆಟ್ಲಾ ಅವರ ನೇತೃತ್ವದಲ್ಲಿ ಗುರುವಾರ ಇಲ್ಲಿ ಜರುಗಿತು. ರೈಲ್ವೆ ಪ್ರಯಾಣಿಕರಿಗೆ ಸೌಲಭ್ಯ ಕಲ್ಪಿಸುವ ಕುರಿತಂತೆ ಅನೇಕ ವಿಷಯಗಳನ್ನು ಚರ್ಚಿಸಲಾಯಿತು.

ಸದಸ್ಯ ಮಹೇಶ್ ಕುಡುತಿನಿ ಮಾತನಾಡಿ, ಕಳೆದ 5-ತಿಂಗಳಿಂದ ರದ್ದಾಗಿರುವ ರೈಲುಗಾಡಿ ಸಂಖ್ಯೆ 07335/36, ಬೆಳಗಾವಿ-ಹೊಸಪೇಟೆ-ಹೈದ್ರಾಬಾದ್-ಭದ್ರಾಚಲಂ ರೈಲನ್ನು ಕೂಡಲೇ ಪುನರಾರಂಭಿಸಬೇಕು. ಈ ರೈಲು ರದ್ದಾಗಿರುವುದರಿಂದ ಉತ್ತರ ಕರ್ನಾಟಕ ಹಾಗೂ ವಿಜಯನಗರ ಬಳ್ಳಾರಿ ಜಿಲ್ಲೆಗಳ ಪ್ರಯಾಣಿಕರ ಯಾತ್ರಾಸ್ಥಳವಾದ ಮಂತ್ರಾಲಯ-ಹೈದ್ರಾಬಾದ್ ಮತ್ತು ಭದ್ರಾದ್ರಿಗೆ ತೆರಳುವವರಿಗೆ ನೇರ ಸಂಪರ್ಕ ತಪ್ಪಿಹೋಗಿದೆ ಎಂದರು.

ಗಾಡಿ ಸಂಖ್ಯೆ16591/92, ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊಸಪೇಟೆ-ಹುಬ್ಬಳ್ಳಿ ಹಾಗೂ ಹುಬ್ಬಳ್ಳಿ-ಹೊಸಪೇಟೆ ನಡುವೆ ಹೋಗಿ ಬರಲು ಸಾಮಾನ್ಯ ದರ್ಜೆ ಟಿಕೆಟ್ ಪಡೆದು ಕೆಲವು ನಿಗದಿತ ಸ್ಲೀಪರ್ ಕ್ಲಾಸ್ ಕೋಚ್‍ಗಳಲ್ಲಿ ಪ್ರಯಾಣಿಸುವ ಸೌಲಭ್ಯ ಕಲ್ಪಿಸಲಾಗಿತ್ತು. ಈ ಸೌಲಭ್ಯವನ್ನು ನಿರಂತರವಾಗಿ ಮುಂದುವರಿಸಬೇಕು. ಅದೇ ರೀತಿ ಗಾಡಿ ಸಂಖ್ಯೆ17225/26 ಹುಬ್ಬಳ್ಳಿ-ವಿಜಯವಾಡ ಮತ್ತು ವಿಜಯವಾಡ-ಹುಬ್ಬಳ್ಳಿ ರೈಲಿನಲ್ಲಿಯೂ ಸಹ ಹೊಸಪೇಟೆ, ಬಳ್ಳಾರಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಿಗದಿತ ಸ್ಲೀಪರ್ ಕೋಚ್‍ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪ್ರಭಾಕರ್ ಮಾತನಾಡಿ, ಹೊಸಪೇಟೆ ಮಾರ್ಗವಾಗಿ ಸಂಚರಿಸುತ್ತಿರುವ ಗಾಡಿ ಸಂಖ್ಯೆ 07657 ತಿರುಪತಿ-ಹುಬ್ಬಳ್ಳಿ ಹಾಗೂ ಗುಂತಕಲ್-ಹುಬ್ಬಳ್ಳಿ ಗಾಡಿ ಸಂಖ್ಯೆ 07338 ಈ ಎರಡು ರೈಲುಗಳು ಪ್ರತಿನಿತ್ಯ ವಿಳಂಬವಾಗಿ ಸಂಚರಿಸುತ್ತಿದ್ದು, ಸರಿಯಾದ ಸಮಯಕ್ಕೆ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ಕೆಲವು ರೈಲುಗಳ ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಇಲ್ಲದೇ ದುರ್ನಾತ ಹರಡುತ್ತಿದ್ದು, ಸ್ವಚ್ಚತೆ ಕಾಪಾಡಬೇಕು, ನಿಲ್ದಾಣದ ಪಾರ್ಕಿಂಗ್ ಆವರಣದಲ್ಲಿ ಪ್ರಯಾಣಿಕರ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ನೂತನ ಸುಸರ್ಜಿತ ಶೌಚಾಲಯವನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಶ್ರೀನಿವಾಸ್ ಮೆಟ್ಲಾ ಮಾತನಾಡಿ, ಹೊಸಪೇಟೆ ನಿಲ್ದಾಣವನ್ನು ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿಯಲ್ಲಿ ಅಭಿವೃದ್ದಿ ಗೊಳಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು. 

ಸಭೆಯಲ್ಲಿ ಸಲಹಾ ಸಮಿತಿಯ ವೈ.ಯಮುನೇಶ್, ರಾಮಕೃಷ್ಣ, ಶರಣಗೌಡ, ಕೌತಾಳ್ ವಿಶ್ವನಾಥ್, ಪೀರಾನ್ ಸಾಬ್, ಇಲಾಖೆಯ ಟಿಕೆಟ್ ಪರಿವೀಕ್ಷಕ ದೇವಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT