ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಿ ಹರಿಯುತ್ತಿರುವ ಹಳ್ಳ; ಅಂತ್ಯ ಸಂಸ್ಕಾರಕ್ಕೆ ಗ್ರಾಮಸ್ಥರ ಪರದಾಟ

Last Updated 19 ಅಕ್ಟೋಬರ್ 2022, 7:47 IST
ಅಕ್ಷರ ಗಾತ್ರ

ಹರಪನಹಳ್ಳಿ (ವಿಜಯನಗರ ಜಿಲ್ಲೆ) : ನಿರಂತರ ಮಳೆಯಿಂದ ತಾಲ್ಲೂಕಿನ ಕುಂಚೂರು ಕೆರೆ ತಾಂಡಾದಲ್ಲಿ ಹಳ್ಳ ತುಂಬಿ ಹರಿಯುತ್ತಿದ್ದು, ಮೃತ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಗ್ರಾಮಸ್ಥರು ಪರದಾಟ ನಡೆಸಿರುವ ಘಟನೆ ಬುಧವಾರ ನಡೆದಿದೆ.

ಕುಂಚೂರು ಕೆರೆ ತಾಂಡದ ಶಾರದಾಬಾಯಿ (65) ಮಂಗಳವಾರ ಮೃತಪಟ್ಟಿದ್ದರು. ಅವರ ಶವವನ್ನು ಕೆರೆಯಂಗಳದ ಒಂದು ಭಾಗದಲ್ಲಿ ಅಂತ್ಯ ಸಂಸ್ಕಾರಕ್ಕೆ ಬುಧವಾರ ತೆಗೆದುಕೊಂಡು ಹೋಗುವಾಗ, ಸೊಂಟದ ವರೆಗೆ ತುಂಬಿ ಹರಿಯುತ್ತಿದ್ದ ಹಳ್ಳಕ್ಕೆ ಇಳಿದು ಶವದಾಟಿಸಲು ತೀವ್ರ ಪರದಾಡಿದರು.

ಕುಂಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕುಂಚೂರು ಕೆರೆ ತಾಂಡದಲ್ಲಿ ಅಂದಾಜು 2 ಸಾವಿರ ಜನಸಂಖ್ಯೆಯಿದೆ.ಪ್ರತ್ಯೇಕವಾಗಿ ಸ್ಮಶಾನಕ್ಕೆ ಜಾಗ ಕಲ್ಪಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ತಹಶೀಲ್ದಾರ್ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಯಾರಾದರೂ ಸತ್ತರೆ ಕುಂಚೂರು ಕೆರೆತಾಂಡದ ಕೆರೆಯಂಗಳಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ ಮೃತದೇಹದ ಅಂತ್ಯಸಂಸ್ಕಾರ ಮಾಡಬೇಕಾಗಿದೆ. ಸರ್ಕಾರ ಸೂಕ್ತ ಸ್ಥಳ ಕಲ್ಪಿಸಬೇಕು ಎಂದು ತಾಂಡಾದ ಮುಖಂಡರಾದ ಯು.ಟೀಕ್ಯನಾಯ್ಕ, ಪುಟ್ಟನಾಯ್ಕ, ಪರಮೇಶನಾಯ್ಕ, ಪೂಜಾರಿ ರವಿನಾಯ್ಕ, ಜೇಮ್ಲಾ ನಾಯ್ಕ, ರಾಮನಾಯ್ಕ ಇತರರು ಒತ್ತಾಯಿಸಿದ್ದಾರೆ.

ಕುಂಚೂರು ಕೆರೆ ತಾಂಡ ಜನತೆಯು ಮನವಿ ಸಲ್ಲಿಸಿದ್ದಾರೆ. ಕೂಡಲೇ ಸ್ಮಶಾನ ಜಾಗ ಗುರುತಿಸಲು ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿಗೆ ಸೂಚಿಸಿದ್ದೇನೆ.

-ಶಿವಕುಮಾರ ಬಿರಾದಾರ್, ತಹಶೀಲ್ದಾರ, ಹರಪನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT