ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ | ಗಣಿಗಾರಿಕೆಗೆ ನಿರ್ಬಂಧ, ಹೆಚ್ಚಿದ ಕರಡಿ ಸಂತತಿ

ದರೋಜಿ ಕರಡಿಧಾಮದಲ್ಲಿ ಮಣ್ಣಿನ ಸಂರಕ್ಷಣೆ– ಅಂತರ್ಜಲ ಮಟ್ಟ ಹೆಚ್ಚಳ, ಬೇಟೆಗೆ ಕಡಿವಾಣ
Last Updated 13 ಮಾರ್ಚ್ 2021, 20:46 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ಕಲ್ಲು ಕ್ವಾರಿ ಗಣಿಗಾರಿಕೆ ಮೇಲೆ ನಿರ್ಬಂಧ ಹೇರಿ ಕರಡಿಗಳ ಆವಾಸಸ್ಥಾನದ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದರ ಪರಿಣಾಮ ತಾಲ್ಲೂಕಿನ ದರೋಜಿ ಕರಡಿಧಾಮದಲ್ಲಿ ಕರಡಿ ಸಂತತಿ ನಿರಂತರವಾಗಿ ಹೆಚ್ಚಳವಾಗುತ್ತಿದೆ.

ಈ ಹಿಂದೆ ವರ್ಷದಲ್ಲಿ ಐದಾರು ಕರಡಿ ಮರಿಗಳು ಜನಿಸಿದರೆ ಹೆಚ್ಚಿತ್ತು. ಈಗ ವರ್ಷಕ್ಕೆ ಏನಿಲ್ಲವೆಂದರೂ 20 ಮರಿಗಳು ಧಾಮದಲ್ಲಿ ಜನಿಸುತ್ತಿವೆ. ಪ್ರಸಕ್ತ ಸಾಲಿನ ಜನವರಿಯಲ್ಲಿ ಎರಡು ಕರಡಿಗಳು ತಲಾ ಎರಡೆರಡು ಕರಡಿಗಳು ಜನ್ಮ ನೀಡಿವೆ. ಫೆಬ್ರುವರಿಯಲ್ಲಿ ಮತ್ತೊಂದು ಕರಡಿಗೆ ಎರಡು ಮರಿಗಳು ಜನಿಸಿದ್ದು, ಇವುಗಳು ಅರಣ್ಯ ಇಲಾಖೆಯ ಸಿಬ್ಬಂದಿಗೆ ಗೋಚರಿಸಿವೆ.

2019ರ ಸೆಪ್ಟೆಂಬರ್‌ನಿಂದ ಡಿಸೆಂಬರ್‌ ಅವಧಿಯಲ್ಲಿ ಏಳೆಂಟು ಕರಡಿಗಳು ಮರಿ ಹಾಕಿವೆ. ಒಂದು ಕರಡಿ ಒಟ್ಟಿಗೆ ಎರಡು ಮರಿ ಹಾಕುತ್ತದೆ. ಬಂಡೆಗಲ್ಲುಗಳಿಂದ ಕೂಡಿರುವ ಗುಹೆಗಳಲ್ಲಿಯೇ ಕರಡಿಗಳು ಹೆಚ್ಚಾಗಿ ವಾಸವಾಗಿರುವುದರಿಂದ ಅವುಗಳ ನಿಖರ ಸಂಖ್ಯೆ ಗೊತ್ತಾಗಿಲ್ಲ. ಸದ್ಯ ಧಾಮದಲ್ಲಿ 130ಕ್ಕೂ ಅಧಿಕ ಕರಡಿಗಳು ಇರಬಹುದು ಎಂದು ಅರಣ್ಯ ಇಲಾಖೆ ಅಂದಾಜಿಸಿದೆ.

1994ರ ಅಕ್ಟೋಬರ್‌ 17ರಂದು ದರೋಜಿಯನ್ನು ಸರ್ಕಾರ ಕರಡಿಧಾಮವೆಂದು ಘೋಷಿಸಿತು. ಆದರೆ, ಧಾಮದ ಸುತ್ತ ಕಲ್ಲು ಕ್ವಾರಿ ಗಣಿಗಾರಿಕೆ, ಬೇಟೆ ಅವ್ಯಾಹತವಾಗಿ ನಡೆಯುತ್ತಿದ್ದವು. ಮಣ್ಣಿನ ಸಂರಕ್ಷಣೆ, ಕರಡಿಗಳಿಗೆ ಕುಡಿಯುವ ನೀರು, ಆಹಾರ ಸಿಗದೆ ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿದ್ದವು. ಜನ ಹೊಡೆದು ಸಾಯಿಸುತ್ತಿದ್ದರು.

ಇತ್ತೀಚಿನ ಕೆಲವು ವರ್ಷಗಳಿಂದ ಅರಣ್ಯ ಇಲಾಖೆ ಬಿಗಿ ಕ್ರಮಗಳನ್ನು ಕೈಗೊಂಡಿತು. 2019ರ ಸೆ. 25ರಂದು ಸರ್ಕಾರವು ಧಾಮವನ್ನು ಪರಿಸರ ಸೂಕ್ಷ್ಮ ವಲಯವಾಗಿ ಘೋಷಿಸಿದ ನಂತರ ಎಲ್ಲದಕ್ಕೂ ತಡೆ ಬಿದ್ದಿದೆ.

ಧಾಮದ ಏಳು ಕಿ.ಮೀ ಪ್ರದೇಶದ ಸುತ್ತಮುತ್ತ ಕಲ್ಲು ಕ್ವಾರಿ ಗಣಿಗಾರಿಕೆ ಸಂಪೂರ್ಣ ನಿಂತಿದೆ. ಅಕ್ರಮ ಪ್ರವೇಶಕ್ಕೆ ತಡೆ ಬಿದ್ದಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ ಇಂಗುಗುಂಡಿ, ಬದು ನಿರ್ಮಿಸಲಾಗಿದೆ. ಸಣ್ಣ ಕೆರೆಗಳ ಹೂಳು ತೆಗೆಸಿರುವುದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿದೆ. ಉಲುಪಿ, ಕಾರೆ, ಕವಳೆ, ಬಾರೆ, ಜಾನೆ, ಕಕ್ಕೆ, ಗೊರವಿ, ಸೀತಾಫಲ ಸೇರಿದಂತೆ 28 ಜಾತಿಯ ಗಿಡ ಮರಗಳನ್ನು ಅರಣ್ಯ ಇಲಾಖೆ ಬೆಳೆಸಿದೆ.

‘ಕರಡಿಗಳಿಗೆ ಕರಡಿಧಾಮ ಸುರಕ್ಷಿತ ಆವಾಸಸ್ಥಾನವಾಗಿ ಬದಲಾಗಿದೆ. ನೀರು, ಆಹಾರ, ಸಂತಾನೋತ್ಪತ್ತಿಗೆ ಪೂರಕ ವಾತಾವರಣ, ಭದ್ರತೆ ಎಲ್ಲವೂ ಸಿಕ್ಕಿರುವುದರಿಂದ ಅವುಗಳ ಸಂತತಿ ನಿರಂತರ ಹೆಚ್ಚಳವಾಗುತ್ತಿದೆ. ಶೀಘ್ರದಲ್ಲೇ ಗಣತಿ ನಡೆಸಿ, ಅವುಗಳ ನಿಖರ ಸಂಖ್ಯೆ ದಾಖಲಿಸಲಾಗುವುದು’ ಎಂದು ಧಾಮದ ಆರ್‌ಎಫ್‌ಒ ಉಷಾ ತಿಳಿಸಿದರು.

*
ವರ್ಷಕ್ಕೆ ಸುಮಾರು 20 ಕರಡಿ ಮರಿಗಳು ಜನಿಸುತ್ತಿವೆ. ಕರಡಿಗಳು ಸ್ಥಳೀಯ ಪರಿಸರಕ್ಕೆ ಹೊಂದಿಕೊಂಡಿರುವುದಕ್ಕೆ ಇದು ಸಾಕ್ಷಿಯಾಗಿದೆ.
–ಉಷಾ, ಆರ್‌ಎಫ್‌ಒ, ದರೋಜಿ ಕರಡಿಧಾಮ

*
ಅರಣ್ಯ ಇಲಾಖೆಯ ವಿಶೇಷ ಕಾಳಜಿಯಿಂದಾಗಿ ದಖನ್‌ ಪ್ರಸ್ಥಭೂಮಿಯ ಮಾದರಿ ಅರಣ್ಯಧಾಮವಾಗಿ ದರೋಜಿ ಕರಡಿಧಾಮ ಬದಲಾಗಿದೆ.
–ಸಮದ್‌ ಕೊಟ್ಟೂರು, ವನ್ಯಜೀವಿ ತಜ್ಞ

*
ಅರಣ್ಯ ಇಲಾಖೆಯ ವಿಶೇಷ ಕಾಳಜಿಯಿಂದಾಗಿ ದಖನ್‌ ಪ್ರಸ್ಥಭೂಮಿಯ ಮಾದರಿ ಅರಣ್ಯಧಾಮವಾಗಿ ದರೋಜಿ ಕರಡಿಧಾಮ ಬದಲಾಗಿದೆ.
ಸಮದ್‌ ಕೊಟ್ಟೂರು, ವನ್ಯಜೀವಿ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT