ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಹ್ಮಣ ಸಿಎಂ ಮಾಡಲು ಆರ್‌ಎಸ್‌ಎಸ್‌ ಚಿತಾವಣೆ: ಸಂಗನಬಸವ ಸ್ವಾಮೀಜಿ

Last Updated 21 ಜುಲೈ 2021, 18:01 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು (ಆರ್‌ಎಸ್‌ಎಸ್‌) ಜಾತಿವಾದಿಗಳು. ಅವರು ಉದಾರ ಮನಸ್ಸಿನವರಲ್ಲ. ತಮ್ಮದೇ ಹಠ ಸಾಧಿಸಬೇಕೆಂದು ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರನ್ನು ಬದಲಿಸಲು ಹೊರಟಿದ್ದಾರೆ. ಆದರೆ, ಕರ್ನಾಟಕದಲ್ಲಿ ಅವರ ಮಾತು ನಡೆಯೊಲ್ಲ’ ಎಂದು ವೀರಶೈವ ಶಿವಯೋಗ ಮಂದಿರ ಸಂಸ್ಥೆಯ ಅಧ್ಯಕ್ಷ ಸಂಗನಬಸವ ಸ್ವಾಮೀಜಿ ಹೇಳಿದರು.

‘ಆರ್‌ಎಸ್‌ಎಸ್‌ನವರ ಮಾತು ಕೇಳಿಕೊಂಡೇ ಮಹಾರಾಷ್ಟ್ರದಲ್ಲಿ ಬ್ರಾಹ್ಮಣ ಸಮುದಾಯದವರಿಗೆ ಸೇರಿದವರನ್ನು ಮುಖ್ಯಮಂತ್ರಿ ಮಾಡಿದ್ದರು. ಆದರೆ, ಅದು ಸರಿಯಾಗಿ ನಡೆಯಲಿಲ್ಲ. ಬೇರೆ ಕಡೆ ಆರ್‌ಎಸ್‌ಎಸ್‌ನವರ ಮಾತು ನಡೆಯಬಹುದು. ಆದರೆ, ಕರ್ನಾಟಕದಲ್ಲಿ ನಡೆಯುವುದಿಲ್ಲ. ಅವರ ಮಾತು ಕೇಳಿ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬದಲಿಸಿದರೆ ಬಿಜೆಪಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

‘ವೀರಶೈವ ಲಿಂಗಾಯತರು ಆರ್‌ಎಸ್ಎಸ್‌ ಜೊತೆಗೆ ಹೋಗುತ್ತಿಲ್ಲ. ಯಡಿಯೂರಪ್ಪನವರ ಜತೆಗೆ ಹೋಗುತ್ತಿದ್ದೇವೆ. ಲಿಂಗಾಯತರು ಯಾವುದೇ ಆತ್ಮವಂಚನೆ ಮಾಡಿಕೊಳ್ಳುತ್ತಿಲ್ಲ. ಪ್ರಲ್ಹಾದ್‌ ಜೋಶಿ ಅವರು ಮುಂದಿನ ಮುಖ್ಯಮಂತ್ರಿ ಆಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ಆರ್‌ಎಸ್‌ಎಸ್‌ನವರ ಚಿತಾವಣೆಯೇ ಮುಖ್ಯ ಕಾರಣ. ನಾಯಕತ್ವ ಬದಲಿಸುವುದಿಲ್ಲ ಎಂದು ಬಿಜೆಪಿ ಹೈಕಮಾಂಡ್‌ ಸ್ಪಷ್ಟವಾಗಿ ಹೇಳಬೇಕು. ಅವರು ಏನನ್ನೂ ಹೇಳದ ಕಾರಣ ರಾಜ್ಯದಲ್ಲಿ ರಾಜಕೀಯ ಗೊಂದಲ ಸೃಷ್ಟಿಯಾಗಿದೆ’ ಎಂದು ಆರೋಪಿಸಿದರು.

‘ಯಡಿಯೂರಪ್ಪ ಸಮರ್ಥ ನಾಯಕರು. ಒಂದುವೇಳೆ ಅವರು ಅಸಮರ್ಥರಿದ್ದರೆ ಬದಲಿಸಬಹುದಿತ್ತು. ಕೋವಿಡ್‌, ಪ್ರವಾಹ ಪರಿಸ್ಥಿತಿಯನ್ನು ಬಹಳ ಉತ್ತಮ ರೀತಿಯಲ್ಲಿ ನಿಭಾಯಿಸುತ್ತಿದ್ದಾರೆ. ರಾಜ್ಯದ ಪ್ರತಿಯೊಂದು ಊರುಗಳಲ್ಲಿ ಲಿಂಗಾಯತ ಸಮಾಜದ ಮಠಗಳಿವೆ. ಸಮಾಜಕ್ಕೆ ಅವುಗಳ ದೊಡ್ಡ ಕೊಡುಗೆ ಇದೆ. ಯಡಿಯೂರಪ್ಪನವರನ್ನು ಕೆಳಗಿಳಿಸಿದರೆ ಎಲ್ಲರಿಗೂ ನೋವಾಗುತ್ತದೆ. ಯಡಿಯೂರಪ್ಪ ಎಲ್ಲ ಧರ್ಮೀಯರನ್ನು ಸಮಾನರಾಗಿ ಕಾಣುತ್ತಾರೆ. ಹಿಂದುಳಿದವರನ್ನು ಪ್ರೀತಿಯಿಂದ ನೋಡುತ್ತಾರೆ. ಹೀಗಿರುವಾಗ ಅವರನ್ನು ಬದಲಿಸುವುದು ಸರಿಯಲ್ಲ’ ಎಂದರು.

‘ಯಡಿಯೂರಪ್ಪನವರು ಸಮರ್ಥವಾಗಿ ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ. ಆದರೆ, ಹೈಕಮಾಂಡ್‌ ಎಂದೂ ಅವರಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಟ್ಟಿಲ್ಲ. ಅದರ ಬಗ್ಗೆ ಅನೇಕ ಸಲ ಮಠಾಧೀಶರು ತಕರಾರು ತೆಗೆದಿದ್ದಾರೆ. ಯಡಿಯೂರಪ್ಪ ಸಮರ್ಥರಿರುವಾಗ ಜಗದೀಶ ಶೆಟ್ಟರ್ ಸೇರಿದಂತೆ ಲಿಂಗಾಯತ ಸಮುದಾಯದ ಬೇರೊಬ್ಬರನ್ನು ಮುಖ್ಯಮಂತ್ರಿ ಮಾಡುವ ಅವಶ್ಯಕತೆ ಇಲ್ಲ. ಗೋವಿಂದ ಕಾರಜೋಳ ಸೇರಿದಂತೆ ಹಿಂದುಳಿದ ಸಮುದಾಯಕ್ಕೆ ಸೇರಿದವರನ್ನು ಸಿ.ಎಂ. ಮಾಡಬಹುದು. ಆದರೆ, ಕೋವಿಡ್‌, ಪ್ರವಾಹದ ಗಂಭೀರ ಪರಿಸ್ಥಿತಿಯಲ್ಲಿ ನಾಯಕತ್ವ ಬದಲಿಸುವುದು ಸರಿಯಲ್ಲ’ ಎಂದು ಹೇಳಿದರು.

ಇದನ್ನೂ ಓದಿ... ರಾಜ್ಯದಲ್ಲಿ ರಾಜಕೀಯ ವಿಪ್ಲವ ಸುಖಾಂತ್ಯ: ಕೋಡಿಮಠದ ಶ್ರೀ ಭವಿಷ್ಯ

‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪನವರ ಪರಿಶ್ರಮ ಬಹಳ ದೊಡ್ಡದಿದೆ. ಅದನ್ನು ಬಿಜೆಪಿ ಹೈಕಮಾಂಡ್‌ ಮರೆಯಬಾರದು. ಅವರು ಮುಖ್ಯಮಂತ್ರಿ ಆದಾಗಿನಿಂದ ನಾಯಕತ್ವ ಬದಲಾವಣೆಯ ವಿಚಾರ ಚರ್ಚೆಯಾಗುತ್ತಿದೆ. ಹೈಕಮಾಂಡ್‌ನವರು ಅದಕ್ಕೆ ಅವಕಾಶ ಕೊಡಬಾರದಿತ್ತು. ಹೈಕಮಾಂಡ್‌ ಯಡಿಯೂರಪ್ಪನವರನ್ನು ಬೆಂಬಲಿಸಿದರೆ ಕೋವಿಡ್‌, ಪ್ರವಾಹ ಪರಿಸ್ಥಿತಿಯನ್ನು ಅವರು ಇನ್ನಷ್ಟು ಸಮರ್ಥವಾಗಿ ನಿಭಾಯಿಸುತ್ತಿದ್ದರು. ಯಾವುದೇ ರಾಜ್ಯ ಪ್ರಗತಿ ಹೊಂದಬೇಕಾದರೆ ರಾಜಕೀಯ ಸ್ಥಿರತೆ ಬಹಳ ಮುಖ್ಯ. ಸಮರ್ಥ ಮುಖ್ಯಮಂತ್ರಿ ಬೇಕು. ಅಂತಹ ಸಮರ್ಥ ನಾಯಕತ್ವ ಯಡಿಯೂರಪ್ಪನವರಲ್ಲಿದೆ’ ಎಂದು ಹೇಳಿದರು.

‘ರಾಜ್ಯದ ಎಲ್ಲ ಮಠಾಧೀಶರು, ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷರು, ಯಡಿಯೂರಪ್ಪನವರಿಗೆ ಬೆಂಬಲ ಸೂಚಿಸಿದ್ದಾರೆ. ಹೈಕಮಾಂಡ್‌ ನಿರ್ಧಾರಕ್ಕೆ ತಕ್ಕಂತೆ ಯಡಿಯೂರಪ್ಪ ನಡೆದುಕೊಳ್ಳಬೇಕು ಎಂದು ಬಿಜೆಪಿ ಮುಖಂಡರು ಆಡುತ್ತಿರುವ ಮಾತುಗಳು ಕೇಳಿ ಮನಸ್ಸಿಗೆ ನೋವಾಗಿದೆ. ಹೈಕಮಾಂಡ್‌ ತನ್ನ ಧೋರಣೆ ಬದಲಿಸಿಕೊಳ್ಳಬೇಕು. ಯಡಿಯೂರಪ್ಪನವರನ್ನು ಬದಲಿಸಿದರೆ ರಾಜ್ಯದಲ್ಲಿ ಬಿಜೆಪಿ ಉಳಿಯಲು ಸಾಧ್ಯವಿಲ್ಲ’ ಎಂದರು.

ಹಾಲಕೆರೆ ಅನ್ನದಾನೀಶ್ವರ ಸಂಸ್ಥಾನ ಮಠ ಹಾಲಕೆರೆಯ ಮುಪ್ಪಿನ ಬಸವಲಿಂಗದೇವರು, ಕೊಟ್ಟೂರು ದೇಶಿಕರು, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಸಾಲಿ ಸಿದ್ದಯ್ಯ ಸ್ವಾಮಿ, ಶರಣ ಸ್ವಾಮಿ, ರವಿಶಂಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT