ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಆರ್‌ಎ‌ಸ್‌ಎಸ್ ಕಾರ್ಯಕರ್ತರಿಂದ ಪಥಸಂಚಲನ

Last Updated 3 ಏಪ್ರಿಲ್ 2022, 8:38 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಶುಭಕೃತು ಸಂವತ್ಸರದ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಕಾರ್ಯಕರ್ತರು ಭಾನುವಾರ ನಗರದಲ್ಲಿ ಪಥಸಂಚಲನ ನಡೆಸಿದರು.

ನಗರದ ಥಿಯೋಸಫಿಕಲ್ ಕಾಲೇಜಿನಿಂದ ಆರಂಭಗೊಂಡ ಪಥಸಂಚಲನ ಮೂರಂಗಡಿ ವೃತ್ತ, ಗಾಂಧಿ ವೃತ್ತ, ಪುನೀತ್‌ ರಾಜಕುಮಾರ್‌ ವೃತ್ತದ ಮೂಲಕ ಸಾಗಿ ಮೂಲ ಸ್ಥಳದಲ್ಲೇ ಕೊನೆಗೊಂಡಿತು. ಸಂಘದ ಕಾರ್ಯಕರ್ತರು ಕಪ್ಪು ಟೋಪಿ ಧರಿಸಿ, ಲಾಠಿ ಹಿಡಿದು ಶಿಸ್ತುಬದ್ಧವಾಗಿ ಪಥಸಂಚಲನ ನಡೆಸಿದರು. ಪಥಸಂಚಲನ ಹಾದು ಹೋಗುವ ಮಾರ್ಗದಲ್ಲಿ ಮಹಿಳೆಯರು ರಂಗೋಲಿ ಹಾಕಿದರು. ಕಾರ್ಯಕರ್ತರು ತೆರಳುವಾಗ ಅವರ ಮೇಲೆ ಹೂ ಹಾಕಿ ಸ್ವಾಗತಿಸಿದರು.

ಸಂಸದರೂ ಆದ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ನಗರದ ಗಾಂಧಿ ವೃತ್ತದಲ್ಲಿ ಸ್ವಯಂ ಸೇವಕರ ಮೇಲೆ ಹೂಮಳೆಗರೆದು ಸ್ವಾಗತಿಸಿದರು. ಮಕ್ಕಳು, ವಿವಿಧ ಮಹನೀಯರ ವೇಷ ತೊಟ್ಟು ಗಮನ ಸೆಳೆದರು. ಆನೆಗೊಂದಿ ರಾಜವಂಶಸ್ಥ ಕೃಷ್ಣದೇವರಾಯ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಅಶ್ವಿನ್‌ ಕೋತಂಬ್ರಿ ಕೂಡ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ಪಥ ಸಂಚಲನ ಹಾದು ಹೋಗುವ ಮಾರ್ಗದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಸುದ್ದಿಗಾರರೊಂದಿಗೆ ಮಾತನಾಡಲು ತೇಜಸ್ವಿ ಸೂರ್ಯ ನಿರಾಕರಿಸಿದರು. ಬಳಿಕ ಅವರು ಹಂಪಿಗೆ ತೆರಳಿ ವಿರೂಪಾಕ್ಷೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇಗುಲದ ಆವರಣದಲ್ಲೇ ಪಕ್ಷ ಹಾಗೂ ಸಂಘದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT