ಹೊಸಪೇಟೆ (ವಿಜಯನಗರ): ನಗರದ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಕಾರ್ಯಕ್ರಮ ಗುರುವಾರ ಸಂಜೆ ಸಡಗರ, ಸಂಭ್ರಮದಿಂದ ಜರುಗಿತು.
ಬೆಳಿಗ್ಗೆ ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದು ದೇವರ ದರ್ಶನ ಪಡೆದರು. ಮಡಿ ತೇರು ಎಳೆದರು. ಸಂಜೆ ಭಕ್ತಗಣದ ನಡುವೆ ತೇರು ಎಳೆಯಲಾಯಿತು. ರಥೋತ್ಸವದ ವೇಳೆ ತೇರಿನ ಮೇಲೆ ಬಾಳೆಹಣ್ಣು ಎಸೆದು ಹರಕೆ ತೀರಿಸುವ ಆಚರಣೆ ನಿಷೇಧಿಸಲಾಗಿದೆ ಎಂದು ದೇವಸ್ಥಾನದ ಟ್ರಸ್ಟ್ ತಿಳಿಸಿತ್ತು. ಆದರೆ, ಭಕ್ತರು ಅದನ್ನು ಲೆಕ್ಕಿಸದೆ ಬಾಳೆಹಣ್ಣು, ಉತ್ತತಿ ತೂರಿ ಹರಕೆ ತೀರಿಸಿದರು. ನಂತರ ನಡೆದ ಹರಾಜಿನಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ಮಗ ಸಿದ್ದಾರ್ಥ ಸಿಂಗ್ ಅವರು ₹2.71 ಲಕ್ಷಕ್ಕೆ ಪಟ ತನ್ನದಾಗಿಸಿಕೊಂಡರು.
ಟ್ರಸ್ಟ್ ಕಾರ್ಯದರ್ಶಿ ಅಶ್ವಿನ್ ಕೊತ್ತಂಬರಿ, ಕೋಶಾಧ್ಯಕ್ಷ ಕೆ. ಗಂಗಾಧರಪ್ಪ, ಸದಸ್ಯರಾದ ಗೊಗ್ಗ ಚನ್ನಬಸವರಾಜ, ಸತ್ಯನಾರಾಯಣ, ಸಂಗಪ್ಪ, ಬಿ.ಎಂ. ಸೋಮಶೇಖರ್, ಶರಣು ಸ್ವಾಮಿ, ಎಲ್. ನಾಗರಾಜ, ಮಂಜುನಾಥ ಇತರರಿದ್ದರು.
ಬುಧವಾರ ಸಂಜೆ ನಗರದ ಮುಖ್ಯ ಬೀದಿಯಲ್ಲಿರುವ ಪೇಟೆ ಬಸವೇಶ್ವರ ದೇವಸ್ಥಾನದಿಂದ ಸಕಲ ವಾದ್ಯಗಳೊಂದಿಗೆ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಉತ್ಸವ ಮೂರ್ತಿ ಕರೆತರಲಾಯಿತು. ಅನಂತರ ಅಗ್ನಿಕುಂಡ ಪ್ರವೇಶ ಕಾರ್ಯಕ್ರಮ ಜರುಗಿತು. ಶುಕ್ರವಾರ (24ರಂದು) ಸಂಜೆ 6ಕ್ಕೆ ಕಡುಬಿನಕಾಳಗದ ಕಾರ್ಯಕ್ರಮ ವೀರಭದ್ರೇಶ್ವರ ದೇವಸ್ಥಾನದಿಂದ ಪೇಟೆ ಬಸವೇಶ್ವರ ದೇಗುಲದ ವರೆಗೆ ಜರುಗಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.