ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಬತ್ತು ಜನ ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ

ಕೋವಿಡ್‌ನಲ್ಲಿ ಸರ್ಕಾರಿ ನೌಕರರ ಸೇವೆ ಶ್ಲಾಘನೆ
Last Updated 21 ಏಪ್ರಿಲ್ 2022, 13:26 IST
ಅಕ್ಷರ ಗಾತ್ರ

ಹೊಸಪೇಟೆ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದಿಂದ ಗುರುವಾರ ನಗರದಲ್ಲಿ ಸರ್ಕಾರಿ ನೌಕರರ ದಿನ ಆಚರಿಸಲಾಯಿತು.

ಅತ್ಯುತ್ತುಮ ಸೇವೆ ಸಲ್ಲಿಸಿದ ಒಂಬತ್ತು ಜನ ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಗೌರವಿಸಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ.ಭಾಸ್ಕರ್, ಪಿಡಬ್ಲ್ಯೂಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಿಶೋರ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಅನಿಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣವರ್, ಗುಡೇಕೋಟೆ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಥಮ ದರ್ಜೆ ಸಹಾಯಕ ಎಂ.ಮೊಹಮ್ಮದ್ ರಫೀಕ್, ಕೊಟ್ಟೂರಿನ ಮಹಿಳಾ ಪೌರ ಕಾರ್ಮಿಕರಾದ ಲಕ್ಷ್ಮಮ್ಮ ಕುಮಾರಪ್ಪ, ತಾಲ್ಲೂಕು ಕಚೇರಿ ‘ಡಿ’ ಗ್ರುಪ್ ನೌಕರರಾದ ಎಸ್.ಎನ್.ಮಧು, ಮಾಲವಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ, ಹಂಪಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ ಸೇರಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಅನ್ನಪೂರ್ಣ ಗೈರಾಗಿದ್ದರು.

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅನಿರುದ್ಧ್‌ ಶ್ರವಣ್‌ ಪಿ., ‘ಕೋವಿಡ್‌ನಲ್ಲಿ ಸರ್ಕಾರಿ ನೌಕರರು ತಮ್ಮ ಆರೋಗ್ಯ, ಕುಟುಂಬವನ್ನು ಬದಿಗೊತ್ತಿ ಸಾರ್ವಜನಿಕರಿಗೆ ಸೇವೆ ಒದಗಿಸಿದ್ದು ಶ್ಲಾಘನಾರ್ಹ’ ಎಂದು ಕೊಂಡಾಡಿದರು.

‘ಸೇವಾ ನಿರತ ನೌಕರರಿಗೆ ಮತ್ತಷ್ಟು ಸ್ಫೂರ್ತಿ ತುಂಬಲು ನೌಕರರ ದಿನ ಆಚರಿಸಲಾಗುತ್ತಿದೆ. ಕೋವಿಡ್ ಸಮಯದಲ್ಲಿ ಎಲ್ಲ ರೀತಿಯ ಸವಾಲುಗಳನ್ನು ಮೆಟ್ಟಿ ನಿಂತು ನೌಕರರು ಕೆಲಸ ಮಾಡಿದ್ದಾರೆ. ಬೇರೆ ರಾಜ್ಯಗಳಲ್ಲಿ ಕೋವಿಡ್ ಸಮಯದಲ್ಲಿ ವೇತನ ವಿಳಂಬ ಸೇರಿ ಇತರ ಸಮಸ್ಯೆಗಳು ಆಗಿತ್ತು, ಆದರೆ, ನಮ್ಮ ರಾಜ್ಯದಲ್ಲಿ ಆ ಪರಿಸ್ಥಿತಿ ಇರಲಿಲ್ಲ’ ಎಂದರು.

‘ನೌಕರರ ಸಂಘದಿಂದ ನೌಕರರಿಗಾಗಿ ಆರೋಗ್ಯ ಶಿಬಿರ, ಅವರ ಏಳಿಗೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಬದ್ಧತೆಯಿಂದ ಕೆಲಸ ಮಾಡಿದಾಗ ಸಾರ್ವಜನಿಕರು ನಿಮ್ಮನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ. ‌ಕಾನೂನು ಚೌಕಟ್ಟು ಮೀರಿ ಯಾರೂ ಕೆಲಸ ಮಾಡಬಾರದು’ ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಸರ್ಕಾರದಿಂದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಸಾರ್ವಜನಿಕರಿಗೆ ಸೇವೆ ಒದಗಿಸುವ ವರ್ಗ ನಮ್ಮದು. ಸರ್ಕಾರಿ ಸೇವೆ ಜೊತೆಗೆ ಸಂಘಟನೆಯಲ್ಲಿ ಸಹ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಹರ್ಷಲ್ ಭೋಯರ್ ನಾರಾಯಣ ರಾವ್, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಹೆಚ್ಚುವರಿ ಜಿಲ್ಲಾಧಿಕಾರಿ ಮಹೇಶ್ ಬಾಬು, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ್ ಚವ್ಹಾಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT