ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಸಂಪಾದನೆಗೆ ಸೀಮಿತರಾದ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು

Last Updated 9 ಡಿಸೆಂಬರ್ 2021, 4:44 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಅಕಾಡೆಮಿಕ್‌ ಕೆಲಸ, ಸಂಶೋಧನಾ ಚಟುವಟಿಕೆಗಳ ಮೂಲಕ ನಾಡಿನಲ್ಲಿ ಸದ್ದು ಮಾಡಬೇಕಿದ್ದ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯವು ಇದೀಗ ಭ್ರಷ್ಟಾಚಾರ, ಲಂಚ, ಕಮಿಷನ್‌ನಂಥ ವಿಷಯಗಳಿಂದ ಹೆಚ್ಚು ಸುದ್ದಿಯಲ್ಲಿದೆ.

ಕನ್ನಡ ವಿಶ್ವವಿದ್ಯಾಲಯವು ನಾಡಿನ ಏಕೈಕ ಭಾಷಿಕ ವಿಶ್ವವಿದ್ಯಾಲಯ. ಸಂಶೋಧನೆಯೇ ಇದರ ಮುಖ್ಯ ಉದ್ದೇಶ. ಈ ಎಲ್ಲ ಕಾರಣಗಳಿಂದಾಗಿ ಇದು ಇತರೆ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾದುದು ಎಂದು ಹೇಳಲಾಗುತ್ತದೆ. ಆದರೆ, ಇತ್ತೀಚಿನ ಕೆಲವು ವಾರಗಳಿಂದ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದಾಗಿ ಎಲ್ಲರ ಚಿತ್ತ ಅದರತ್ತ ಹರಿದಿದೆ.

ಬಡ್ತಿಗೆ ಲಂಚ, ವೇತನ– ಪಿಂಚಣಿ ಬಿಡುಗಡೆಗೆ ಕಮಿಷನ್‌ ಪಡೆಯಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಅಲ್ಲಿನ ಬೋಧಕ–ಬೋಧಕೇತರ ನೌಕರರು ಸತತವಾಗಿ ಆಡಳಿತದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಆಡಳಿತ ಮತ್ತು ಸಿಬ್ಬಂದಿ ವರ್ಗ ಪರಸ್ಪರ ಎದುರು ಬದುರಾಗಿರುವುದರಿಂದ ಸಂಘರ್ಷದ ವಾತಾವರಣ ಸೃಷ್ಟಿಯಾಗಿದ್ದು, ಅಕಾಡೆಮಿಕ್‌, ಸಂಶೋಧನಾ ಚಟುವಟಿಕೆಗಳು ಹಿನ್ನೆಲೆಗೆ ಸರಿದಿವೆ. ಅದರ ಬಗ್ಗೆ ಯಾರೊಬ್ಬರೂ ಚಕಾರ ಎತ್ತುತ್ತಿಲ್ಲ.

ಅಂದಹಾಗೆ, ವಿಶ್ವವಿದ್ಯಾಲಯವು ತನ್ನ ಮೂಲ ಉದ್ದೇಶ ಮರೆತಿರುವುದು ಇತ್ತೀಚಿನ ದಿನಗಳಲ್ಲಿ ಅಲ್ಲ. ಅದಕ್ಕೆ ಹಲವು ವರ್ಷಗಳೇ ಕಳೆದಿವೆ. ಅಂಕಿ ಸಂಖ್ಯೆಗಳ ಮೇಲೆ ಒಮ್ಮೆ ಕಣ್ಣಾಡಿಸಿದರೆ ಎಂಥವರಿಗೂ ಅದು ಮನವರಿಕೆಯಾಗುತ್ತದೆ.

ವಿಶ್ವವಿದ್ಯಾಲಯ ಸ್ಥಾಪನೆಗೊಂಡು 25 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಪ್ರಸಾರಾಂಗವು 1,501 ಪುಸ್ತಕಗಳನ್ನು ಪ್ರಕಟಿಸಿದೆ. ಇದರಲ್ಲಿ 250 ಪುಸ್ತಕಗಳು ಮರು ಮುದ್ರಣಗೊಂಡಿವೆ. ಆದರೆ, ಕಳೆದ ಆರು ವರ್ಷಗಳ ಅಂಕಿ ಸಂಖ್ಯೆ ನೋಡಿದರೆ ನಿರಾಸೆ ಮೂಡುತ್ತದೆ.

ಹಾಲಿ ಕುಲಪತಿ ಪ್ರೊ. ಸ.ಚಿ. ರಮೇಶ ಅವರ ಕಾಲದಲ್ಲಿ ಒಟ್ಟು 105 ಪುಸ್ತಕಗಳು ಪ್ರಕಟಗೊಂಡಿವೆ. 20 ಮರು ಮುದ್ರಣ ಕಂಡಿವೆ. ಈ ಹಿಂದಿನಂತೆಯೇ ಜರ್ನಲ್‌ಗಳನ್ನು ಪ್ರಕಟಿಸಲಾಗುತ್ತಿದೆ. ಹಿಂದಿನ ಕುಲಪತಿ ಮಲ್ಲಿಕಾ ಎಸ್‌. ಘಂಟಿ ಅವರ ಅವಧಿಯಲ್ಲಿ 75 ಹೊಸ ಪುಸ್ತಕ, 75 ಪುಸ್ತಕಗಳನ್ನು ಮರು ಮುದ್ರಿಸಲಾಗಿತ್ತು. ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ 500 ಪುಸ್ತಕಗಳನ್ನು ಪ್ರಕಟಿಸುವ ಯೋಜನೆ ಘೋಷಿಸಲಾಗಿತ್ತು. ಘಂಟಿ ಅವರ ಕೊನೆಯ ಅವಧಿಯಲ್ಲಿ 50 ಪುಸ್ತಕಗಳನ್ನು ಪ್ರಕಟಿಸಲಾಗಿತ್ತು. ಆದರೆ, ಹಾಲಿ ಕುಲಪತಿ ರಮೇಶ ಅವಧಿಯಲ್ಲೂ ಅದು ಪೂರ್ಣಗೊಂಡಿಲ್ಲ. ವಿಶ್ವವಿದ್ಯಾಲಯದ ಆದ್ಯತೆಯ ವಿಷಯಗಳೇನು ಎನ್ನುವುದು ಇದರಿಂದ ಗೊತ್ತಾಗುತ್ತದೆ.

ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರೇ ಹೇಳುವಂತೆ ವಿಶ್ರಾಂತ ಕುಲಪತಿಗಳಾದ ಎಂ.ಎಂ. ಕಲಬುರ್ಗಿ, ವಿವೇಕ ರೈ ಅವರು ಸಂಶೋಧನೆಗೆ ಹೆಚ್ಚಿನ ಒತ್ತು ಕೊಡುತ್ತಿದ್ದರು. ಪ್ರತಿಯೊಬ್ಬ ಪ್ರಾಧ್ಯಾಪಕರಿಗೆ ಬೆನ್ನು ಬಿದ್ದು ಬರೆಸುತ್ತಿದ್ದರು. ಆದರೆ, ನಂತರ ಬಂದ ಕುಲಪತಿಗಳು ಅದರತ್ತ ಚಿತ್ತ ಹರಿಸಲಿಲ್ಲ.

‘ವಿಶ್ವವಿದ್ಯಾಲಯದ ಒಟ್ಟು ಪ್ರಾಧ್ಯಾಪಕರಲ್ಲಿ ಬೆರಳೆಣಿಯ ಜನರಷ್ಟೇ ಸತತವಾಗಿ ಸಂಶೋಧನೆಗಳಲ್ಲಿ ತೊಡಗಿಸಿಕೊಂಡು ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಹೆಚ್ಚಿನವರಿಗೆ ಅದರ ಬಗ್ಗೆ ಆಸಕ್ತಿಯೇ ಇಲ್ಲ. ಕೈತುಂಬ ಸಂಬಳ ಬರುತ್ತಿರುವುದರಿಂದ ರಿಯಲ್‌ ಎಸ್ಟೇಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವರಿಗೆ ಬರವಣಿಗೆಯೇ ಗೊತ್ತಿಲ್ಲ. ಸಂಶೋಧನಾ ಪುಸ್ತಕಗಳನ್ನು ಪ್ರಕಟಿಸುವುದು ದೂರದ ವಿಚಾರ. ಪುಸ್ತಕ ಸಂಪಾದನೆ ಮಾಡುವ ಸರಳ ಮಾರ್ಗ ಕಂಡುಕೊಂಡಿದ್ದಾರೆ. ವಿದ್ವಾಂಸರಿಂದ ಲೇಖನಗಳನ್ನು ಬರೆಸಿ, ತಾವೇ ಪುಸ್ತಕ ಬರೆದದ್ದು ಎಂದು ಹೇಳಿಕೊಂಡು ಓಡಾಡುತ್ತಾರೆ’ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಪ್ರಾಧ್ಯಾಪಕರು ತಿಳಿಸಿದರು.

‘ನಾನು ವಿಶ್ವವಿದ್ಯಾಲಯದ ಆರಂಭದಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಹಿಂದೆ ಶೈಕ್ಷಣಿಕ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದ್ದವು. ಈಗ ಆ ವಾತಾವರಣವೇ ಇಲ್ಲ. ಪರಸ್ಪರ ಆರೋಪ–ಪ್ರತ್ಯಾರೋಪದಲ್ಲೇ ಕಾಲ ಕಳೆಯುತ್ತಾರೆ. ಬಹುತೇಕ ಪ್ರಾಧ್ಯಾಪಕರಿಗೆ ಓದಿನ ಕೊರತೆ ಇದೆ. ಆಡಳಿತದಲ್ಲಿರುವವರಿಗೂ ಅದು ಬೇಕಿಲ್ಲ. ಹೀಗಾಗಿಯೇ ಇತ್ತೀಚಿನ ವರ್ಷಗಳಲ್ಲಿ ಉತ್ಕೃಷ್ಟ ಪುಸ್ತಕಗಳು ಪ್ರಕಟಗೊಂಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT