ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಅಧಿಕಾರಕ್ಕೆ ಬಂದೇ ಬರುತ್ತದೆ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ಮಾಲವಿ ಜಲಾಶಯದ ವಿಜಯೋತ್ಸವ, ಸಾರ್ಥಕ ನಮನದಲ್ಲಿ ಸಿದ್ದರಾಮಯ್ಯ ಭರವಸೆ
Last Updated 3 ಜನವರಿ 2023, 15:51 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ/ಹೊಸಪೇಟೆ (ವಿಜಯನಗರ ಜಿಲ್ಲೆ): ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದೇ ಬರುತ್ತದೆ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಇದು ಕೂಡ ಅಷ್ಟೇ ಸತ್ಯ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.

ಪಟ್ಟಣದ ಜಿ.ಬಿ. ಕಾಲೇಜು ಮೈದಾನದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಮಾಲವಿ ಜಲಾಶಯದ ವಿಜಯೋತ್ಸವ ಹಾಗೂ ಸಾರ್ಥಕ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಪರೇಷನ್‌ ಕಮಲದ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ರಾಜ್ಯವನ್ನು ಹಾಳು ಮಾಡಿದೆ. ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ. ಕೇಂದ್ರ ಸರ್ಕಾರದಿಂದ ನಮ್ಮ ಪಾಲಿನ ಅನುದಾನ ತರಲು ಸಾಧ್ಯವಾಗುತ್ತಿಲ್ಲ. ಬೆಲೆ ಏರಿಕೆ, ನಿರುದ್ಯೋಗದಿಂದ ಜನ ಬೇಸತ್ತು ಹೋಗಿದ್ದಾರೆ. ಈ ರಾಜ್ಯ ಉಳಿಸಲು ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದಾಗ ಒಟ್ಟು 165 ಭರವಸೆಗಳನ್ನು ನೀಡಲಾಗಿತ್ತು. ಈ ಪೈಕಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಅದರ ಜತೆಗೆ ಇಂದಿರಾ ಕ್ಯಾಂಟೀನ್‌, ವಿದ್ಯಾಸಿರಿ ಸೇರಿದಂತೆ 30ಕ್ಕೂ ಹೆಚ್ಚು ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ಬಿಜೆಪಿಯವರು ಕಳೆದ ಮೂರು ವರ್ಷಗಳಲ್ಲಿ ಏನು ಮಾಡಿದ್ದಾರೆ. ಬಿಜೆಪಿಯವರು 600 ಭರವಸೆಗಳ ಪೈಕಿ ಶೇ 10ರಷ್ಟು ಈಡೇರಿಸಿಲ್ಲ. ನಾನು ಸುಳ್ಳು ಹೇಳುತ್ತಿಲ್ಲ. ಈ ಕುರಿತು ಬೊಮ್ಮಾಯಿ ಅವರೊಂದಿಗೆ ಚರ್ಚೆಗೂ ಸಿದ್ಧ ಎಂದು ಸವಾಲು ಹಾಕಿದರು.

40 ಪರ್ಸೆಂಟ್‌ ಕಮಿಷನ್‌, ಲಂಚದಿಂದ ಬಿಜೆಪಿಯವರು ಈ ರಾಜ್ಯವನ್ನು ಹಾಳು ಮಾಡಿದ್ದಾರೆ. ಗುತ್ತಿಗೆದಾರ ಸಂಘದವರು ಈ ಕುರಿತು ಪ್ರಧಾನಿಯವರಿಗೆ ಪತ್ರ ಬರೆದು ದೂರಿದರು ಕನಿಷ್ಠ ತನಿಖೆಯೂ ನಡೆಸಲಿಲ್ಲ. ಸರ್ಕಾರದ ವಿರುದ್ಧ ಮಾತನಾಡಿದವರನ್ನು ಹೆದರಿಸಿ, ಕೇಸ್‌ ಹಾಕುತ್ತಿದ್ದಾರೆ. ಅದಕ್ಕೆ ತಾಜಾ ನಿದರ್ಶನ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಬಂಧನ ಎಂದು ಆರೋಪಿಸಿದರು.

ನಾನು ಈ ರಾಜ್ಯದ ಮುಖ್ಯಮಂತ್ರಿಯಿದ್ದಾಗ ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ ₹2 ಸಾವಿರ ಕೋಟಿ ಅನುದಾನ ಕೊಟ್ಟಿದ್ದೆ. ಮಾಲವಿ ಜಲಾಶಯಕ್ಕೆ ₹153 ಕೋಟಿ ಮಂಜೂರು ಮಾಡಿದ್ದೆ. ಆಗ ಕ್ಷೇತ್ರದ ಶಾಸಕ ಭೀಮ ನಾಯ್ಕ ಅವರು ಜೆಡಿಎಸ್‌ ಶಾಸಕರಾಗಿದ್ದರು. ಆದರೆ, ಅನುದಾನ ಕೊಡಲು ಹಿಂದೇಟು ಹಾಕಿರಲಿಲ್ಲ. ಭೀಮ ನಾಯ್ಕ ಕೂಡ ದುಂಬಾಲು ಬಿದ್ದು ಅನುದಾನ ಪಡೆದು, ಜಲಾಶಯಕ್ಕೆ ನೀರು ತುಂಬಿಸುವ ಕೆಲಸ ಮಾಡಿದ್ದಾರೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ. ಕೃಷಿ ಕಾರ್ಯಕ್ಕೆ ಅನುಕೂಲವಾಗಿದೆ. ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಅಭಿವೃದ್ಧಿ ವಿಚಾರ ಬಂದಾಗ ಯಾವ ಪಕ್ಷ ಎಂದು ನೋಡಬಾರದು. ನಾನು ಸಿ.ಎಂ. ಇದ್ದಾಗ ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ 12 ಸಾವಿರ ಮನೆಗಳನ್ನು ಕಟ್ಟಿಸಿಕೊಟ್ಟಿದ್ದೆ. ಬಿಜೆಪಿ ಅವಧಿಯಲ್ಲಿ ಒಂದೇ ಒಂದು ಮನೆ ಮಂಜೂರಾಗಿಲ್ಲ ಎಂದರು.

ಬಿಜೆಪಿಯವರ ಕಾರ್ಯವೈಖರಿಗೆ ಜನ ಬೇಸತ್ತು ಹೋಗಿದ್ದು, ಬರುವ ದಿನಗಳಲ್ಲಿ ಕಾಂಗ್ರೆಸ್‌ ಪುನಃ ಅಧಿಕಾರಕ್ಕೆ ಬರಲಿದೆ. ಕ್ಷೇತ್ರದ ಶಾಸಕ ಭೀಮ ನಾಯ್ಕ ಅವರು ಕ್ಷೇತ್ರದ 40 ಕೆರೆಗಳಿಗೆ ನೀರು ತುಂಬಿಸಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಮೊದಲ ವರ್ಷವೇ ಆ ಕೆಲಸ ಮಾಡಲಾಗುವುದು. ಕ್ಷೇತ್ರದಲ್ಲಿ ಏನೆಲ್ಲ ಅಭಿವೃದ್ಧಿ ಬಯಸುತ್ತಾರೋ ಅದನ್ನೆಲ್ಲ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.

ಶಾಸಕ ಭೀಮ ನಾಯ್ಕ ಮಾತನಾಡಿ, ಮಾಲವಿ ಜಲಾಶಯ ಮತ ಬ್ಯಾಂಕಿಗೆ ಸೀಮಿತವಾಗಿತ್ತು. ಅದಕ್ಕೆ ₹153 ಕೋಟಿ ಅನುದಾನ ಕೊಟ್ಟು ಪೂರ್ಣಗೊಳಿಸಲು ನೆರವಾದವರು ಸಿದ್ದರಾಮಯ್ಯನವರು. ಅಷ್ಟೇ ಅಲ್ಲ, ಚಿಲವಾರು ಬಂಡಿ ನೀರಾವರಿ ಯೋಜನೆಗೂ ಅನುದಾನ ಮಂಜೂರು ಮಾಡಿದ್ದರು. ಬಿಜೆಪಿಯವರು ಎರಡೂ ಯೋಜನೆಗಳಿಗೆ ನಯಾ ಪೈಸೆ ಕೊಟ್ಟಿಲ್ಲ. ಕ್ಷೇತ್ರದಲ್ಲಿ ಒಬ್ಬರಿಗೂ ಮನೆ ಮಂಜೂರು ಮಾಡಿಲ್ಲ ಎಂದು ಆರೋಪಿಸಿದರು.

ಶಾಸಕರಾದ ಈ. ತುಕಾರಾಂ, ಜಮೀರ್‌ ಅಹಮ್ಮದ್‌ ಖಾನ್‌, ಅಮರೇಗೌಡ ಬಯ್ಯಾಪುರ, ರಾಘವೇಂದ್ರ ಹಿಟ್ನಾಳ್‌, ಜೆ.ಎನ್. ಗಣೇಶ್, ಪಿ.ಟಿ. ಪರಮೇಶ್ವರ ನಾಯ್ಕ, ಪಕ್ಷದ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ, ನಗರ ಘಟಕದ ಅಧ್ಯಕ್ಷ ಮಹಮ್ಮದ್ ರಫೀಕ್, ಮುಖಂಡರಾದ ಸಂತೋಷ್ ಲಾಡ್, ಸಿರಾಜ್‌ ಶೇಖ್‌, ನಂದಿಹಳ್ಳಿ ಹಾಲಪ್ಪ, ಗೋಣಿ ಬಸಪ್ಪ, ದ್ವಾರಕೇಶ್‌, ಪತ್ರೇಶ್‌ ಹಿರೇಮಠ, ಕುರಿ ಶಿವಮೂರ್ತಿ, ಅಕ್ಕಿ ತೋಟೇಶ್‌, ಭೀಮಪ್ಪ, ಗಾದಿಗನೂರು ಹಾಲಪ್ಪ, ಮಹಮ್ಮದ್ ಇಮಾಮ್‌ ನಿಯಾಜಿ ಇತರರಿದ್ದರು.

ಸಿದ್ದೇಶ್ವರ ಸ್ವಾಮೀಜಿಗೆ ಶ್ರದ್ಧಾಂಜಲಿ

ಕಾರ್ಯಕ್ರಮದ ಆರಂಭಕ್ಕೂ ಮುನ್ನ ಗಣ್ಯರು ವೇದಿಕೆಯಲ್ಲಿ ಎರಡು ನಿಮಿಷ ಮೌನ ಆಚರಿಸಿ ಸೋಮವಾರ ರಾತ್ರಿ ನಿಧನರಾದ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ವೇದಿಕೆಯ ಮುಂಭಾಗದಲ್ಲಿ ಸಿದ್ದೇಶ್ವರ ಸ್ವಾಮೀಜಿ ಹಾಗೂ ಮಾಲವಿ ಜಲಾಶಯ ನಿರ್ಮಿಸಿದ ಮಾಜಿಶಾಸಕ ಕೆ. ಚನ್ನಬಸವನಗೌಡ ಅವರ ಭಾವಚಿತ್ರಗಳನ್ನು ಇಡಲಾಗಿತ್ತು.

ಸಿದ್ದರಾಮಯ್ಯನವರು ತಮ್ಮ ಭಾಷಣದ ಮೊದಲ ಐದು ನಿಮಿಷ ಸಿದ್ದೇಶ್ವರ ಸ್ವಾಮೀಜಿ ಅವರ ಸಾಧನೆಗಳನ್ನು ವಿವರಿಸಲು ಮೀಸಲಿಟ್ಟರು. ‘ನಿನ್ನೆಯಷ್ಟೇ ಸಿದ್ದೇಶ್ವರ ಶ್ರೀಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೆ. ರಾತ್ರಿ 10.30ರ ಸುಮಾರಿಗೆ ಅವರು ನಮ್ಮನ್ನೆಲ್ಲ ಅಗಲಿದರು. ಸಿದ್ದೇಶ್ವರ ಸ್ವಾಮೀಜಿ ನಾಡು ಕಂಡ ಅಪರೂಪದ ಸಂತ. ಜೀವನದುದ್ದಕ್ಕೂ ಧರ್ಮ ಕಾರ್ಯ ಮಾಡಿದರು. ಸರಳ ಜೀವನದ ಮೂಲಕ ದೇಶ–ವಿದೇಶಗಳಲ್ಲಿ ಪ್ರವಚನ ಮಾಡಿ ಧಾರ್ಮಿಕ ಜಾಗೃತಿ ಮೂಡಿಸಿದರು. ಅವರೊಬ್ಬ ಮೇಧಾವಿ ಸಂತರಾಗಿದ್ದರು. ಅನೇಕ ಸಂದರ್ಭಗಳಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದೆ. ಅವರ ನಿಧನದಿಂದ ಇಡೀ ನಾಡು ಬಡವಾಗಿದೆ’ ಎಂದು ಕಂಬನಿ ಮಿಡಿದರು.

ಮಹರ್ಷಿ ವಾಲ್ಮೀಕಿ ಅವರಿಗೆ ಬಿಜೆಪಿ ಅಪಚಾರ
‘ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠಕ್ಕೆ ಬಾಗಿಲು ಹಾಕಿದ್ದಾರೆ. ಇಲಿ, ಹೆಗ್ಗಣಗಳು ಓಡಾಡುತ್ತಿವೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಈ ಪೀಠ ಆರಂಭಿಸಲಾಗಿತ್ತು. ಬಿಜೆಪಿಯವರು ಅದನ್ನು ನಿರ್ಲಕ್ಷಿಸುವ ಮೂಲಕ ವಾಲ್ಮೀಕಿ ಅವರಿಗೆ ಅಪಚಾರ ಎಸಗಿದ್ದಾರೆ’ ಎಂದು ಮಾಜಿಸಂಸದ ವಿ.ಎಸ್‌. ಉಗ್ರಪ್ಪ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT