ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ಯಾನದಿಂದ ಪರೀಕ್ಷಾ ಭಯ ದೂರ: ಬಿಕೆಎಸ್‌ ವರ್ಧನ್‌

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಕಾರ್ಯಾಗಾರದಲ್ಲಿ ಬಿಕೆಎಸ್‌ ವರ್ಧನ್‌
Last Updated 26 ಮಾರ್ಚ್ 2021, 14:29 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಧ್ಯಾನ ಮಾಡುವುದರಿಂದ ಏಕಾಗ್ರತೆ ಲಭಿಸುತ್ತದೆ. ಪರೀಕ್ಷಾ ಭಯ ಕೂಡ ದೂರವಾಗುತ್ತದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರ್ಗಿ ಆಯುಕ್ತ ಬಿಕೆಎಸ್ ವರ್ಧನ್ ತಿಳಿಸಿದರು.

ಬಳ್ಳಾರಿ ಸನ್ಮಾರ್ಗ ಗೆಳೆಯರ ಬಳಗ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ನಗರ ಪೊಲೀಸ್ ಠಾಣೆ ವತಿಯಿಂದ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2020-21 ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಕೆಲ ವಿದ್ಯಾರ್ಥಿಗಳಿಗೆ ಭಯ ಶುರುವಾಗುತ್ತದೆ. ಕಾರ್ಯಾಗಾರಗಳು ಪರೀಕ್ಷಾ ಭಯ ಹೋಗಲಾಡಿಸಲು ಸಹಕಾರಿಯಾಗಿವೆ. ಓದುವುದರ ಜೊತೆಗೆ ವಿದ್ಯಾರ್ಥಿಗಳು ಪ್ರತಿದಿನ ಧ್ಯಾನಕ್ಕಾಗಿ ಸಮಯ ಮೀಸಲಿಡಬೇಕು’ ಎಂದು ತಿಳಿಸಿದರು.

ಉಪವಿಭಾಗಧಿಕಾರಿ ಸಿದ್ದರಾಮೇಶ್ವರ ಮಾತನಾಡಿ, ‘ಪೊಲೀಸ್ ಇಲಾಖೆ ಕರ್ತವ್ಯದ ಜೊತೆಗೆ ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸಿರುವುದು ಖುಷಿಯ ಸಂಗತಿಯಾಗಿದೆ‌. ವಿದ್ಯಾರ್ಥಿಗಳು ಇನ್ನೊಬ್ಬರು ನನ್ನನ್ನು ಗಮನಿಸುತ್ತಾರೆ ಎಂದು ಓದುವ ಬದಲು, ನಿಮ್ಮ ಕನಸುಗಳನ್ನು ಸಾಕಾರಗೊಳಿಸಲು ಓದಬೇಕು’ ಎಂದು ಹೇಳಿದರು.

‘ಶಾಲೆಯಲ್ಲಿ ಕಲಿತ ನಂತರ ಮನೆಯಲ್ಲಿ ಪಾಠಗಳ ಪುನರ್ ಮನನ ಮಾಡಿಕೊಳ್ಳಬೇಕು. ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆ ಸಂಗ್ರಹಿಸಿ ಬಿಡಿಸಿಕೊಳ್ಳಬೇಕು. ಅರ್ಥವಾಗದ ಪ್ರಶ್ನೆಗಳಿಗೆ ಶಿಕ್ಷಕರ ಬಳಿ ಚರ್ಚಿಸಿ ಉತ್ತರ ಕಂಡುಕೊಳ್ಳಬೇಕು. ಸಹಪಾಠಿಗಳೊಂದಿಗೆ ಗುಂಪು ಚರ್ಚೆ ಮಾಡಬೇಕು’ ಎಂದು ತಿಳಿಸಿದರು.

‘ಪಬ್ಲಿಕ್ ಪರೀಕ್ಷೆಗೆ ಇನ್ನೂ ಎರಡು ತಿಂಗಳ ಕಾಲಾವಕಾಶ ಇದೆ. ಅದಕ್ಕೆ ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳು 5ರಿಂದ12 ತರಗತಿಯ ಮೂಲ ಪಠ್ಯಕ್ರಮವನ್ನು ಗಮನದಲ್ಲಿಟ್ಟುಕೊಂಡು ಅಭ್ಯಾಸ ಮಾಡುತ್ತಾರೆ. ಹಿರಿಯ ವಿದ್ಯಾರ್ಥಿಗಳ ಸಲಹೆ ಕೂಡ ಬಹುಮುಖ್ಯ’ ಎಂದು ಹೇಳಿದರು.

ಡಿವೈಎಸ್ಪಿ ವಿ. ರಘುಕುಮಾರ್ ಮಾತನಾಡಿ, ‘ಪ್ರತಿಯೊಬ್ಬರು ಗುರಿ ಹೊಂದಿರಬೇಕು. ಆಯಾ ವಿಷಯಗಳ ಮೇಲೆ ಹಿಡಿತದ ಜೊತೆಗೆ ಸಾಮಾನ್ಯ ಜ್ಞಾನದ ಅಗತ್ಯವಿದೆ. ಮನಸ್ಸು ಶಾಂತವಿದ್ದಾಗ ಮಾಡುವ ಕೆಲಸದಲ್ಲಿ ಏಕಾಗ್ರತೆ ಬರುತ್ತದೆ. ಶೈಕ್ಷಣಿಕ ಚಟುವಟಿಕೆ ಜೊತೆಗೆ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸಿ.ರಾಮಪ್ಪ, ಸತ್ಯನಾರಾಯಣ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಸುನಂದಾ, ಪಟ್ಟಣ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಮೇಟಿ ಶ್ರೀನಿವಾಸ, ಸನ್ಮಾರ್ಗ ಗೆಳೆಯರ ಬಳಗದ ಚಂದ್ರಶೇಖರ ಆಚಾರ್, ವಿಜಯ್ ಕುಮಾರ್, ಗುರುರಾಜ್, ಧರ್ಮೇಂದ್ರ ಸಿಂಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT