ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ತಜ್ಞರೊಂದಿಗೆ ಚರ್ಚಿಸಿ ಹಾಲುಮತ ಎಸ್ಟಿಗೆ ಸೇರಿಸಲು ಕ್ರಮ: ಸಿಎಂ ಬೊಮ್ಮಾಯಿ

Last Updated 4 ಫೆಬ್ರುವರಿ 2023, 13:43 IST
ಅಕ್ಷರ ಗಾತ್ರ

ಮೈಲಾರ (ವಿಜಯನಗರ): ಹಾಲುಮತ ಸಮಾಜದ ಕುಲಶಾಸ್ತ್ರೀಯ ಅಧ್ಯಯನ ವರದಿಯಲ್ಲಿ ಸಣ್ಣಪುಟ್ಟ ತಿದ್ದುಪಡಿ ಆದ ನಂತರ, ವರದಿ ನನ್ನ ಕೈಸೇರಿದ ನಂತರ ಕಾನೂನು ತಜ್ಞರೊಂದಿಗೆ ಚರ್ಚಿಸಿ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸಲು ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಹೂವಿನಹಡಗಲಿ ತಾಲ್ಲೂಕಿನ ಮೈಲಾರದಲ್ಲಿ ₹10 ಕೋಟಿಯಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಿಂದ ನಿರ್ಮಿಸಿದ ಏಳುಕೋಟಿ ವಸತಿ ನಿಲಯ ಉದ್ಘಾಟಿಸಿದ ನಂತರ ಮಾತನಾಡಿದರು.

ಕುಲಶಾಸ್ತ್ರೀಯ ಅಧ್ಯಯನ ಅಂತಿಮ ಹಂತದಲ್ಲಿದೆ. ಕೆಲವು ಸಣ್ಣಪುಟ್ಟ ತಿದ್ದುಪಡಿ ಆದ ನಂತರ ಕಾನೂನು ತಜ್ಞರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ. ಈ ಹಿಂದೆ ಎರಡು ಸಲ ವರದಿ ಕಳಿಸಿದಾಗ ಕೇಂದ್ರದಿಂದ ವಾಪಸ್ ಬಂದಿತ್ತು. ಈ ಸಲ ಬಹಳ ಕಾಳಜಿ ವಹಿಸಿ ಸರ್ಕಾರ ಅದರ ಮೇಲೆ ಸೂಕ್ತ ಕ್ರಮ ಜರುಗಿಸಲಿದೆ ಎಂದು ಹೇಳಿದರು.

ಮೈಲಾರದಲ್ಲಿ‌ ಸಮುದಾಯ ಭವನ ನಿರ್ಮಾಣಕ್ಕೆ ₹5 ಕೋಟಿ ಅನುದಾನ ಕೊಡಲು ತೀರ್ಮಾನ ತೆಗೆದುಕೊಂಡಿರುವೆ. ನಮ್ಮ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಾಕಷ್ಟು ಅನುದಾನ ಕೊಟ್ಟು ಕಾಗಿನೆಲೆ, ಬಾಡ ಕ್ಷೇತ್ರ ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಕನಕದಾಸರು, ವಾಲ್ಮೀಕಿ ಜಯಂತಿಗೆ ರಜೆ ಘೋಷಿಸಿದ್ದು ನಮ್ಮ ಸರ್ಕಾರ. ಜನರಿಗೆ ಒಳ್ಳೆಯದಾಗುತ್ತದೆ ಎಂಬ ಕಾರಣದಿಂದ ಮಠಗಳಿಗೆ ನಮ್ಮ ಸರ್ಕಾರ ಅನುದಾನ ಕೊಡುವ ಕೆಲಸ ಮಾಡಿದೆ ಎಂದರು.

ಕಳೆದ ಬಜೆಟ್ ನಲ್ಲಿ ಕುರಿಗಾಹಿಗಳಿಗೆ ನೆರವು ಕಲ್ಪಿಸುವ ಯೋಜನೆ ಘೋಷಿಸಲಾಗಿತ್ತು. ಅದು ಶೀಘ್ರ ಜಾರಿಗೆ ಬರಲಿದೆ. 20 ಕುರಿ, ಮೇಕೆ ಕೊಡುವ ಕಾರ್ಯಕ್ರಮ ಕುರಿಗಾಹಿ ಸಂಘಗಳ ಮೂಲಕ ವಿತರಿಸುವ ಕಾರ್ಯಕ್ಕೆ ಚಾಲನೆ ಕೊಡಲಾಗುವುದು. ಎಲ್ಲ ದುಡಿಯುವ ವರ್ಗದ ಜನರ ಅಭಿವೃದ್ಧಿ ನಮ್ಮ ಗುರಿ. ದುಡಿಮೆಯೇ ದೊಡ್ಡಪ್ಪ ಮಾಡುವುದು ನಮ್ಮ ಉದ್ದೇಶ ಎಂದು ಹೇಳಿದರು.

ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಹಾಲುಮತ ಸಮಾಜದ ಕುಲಶಾಸ್ತ್ರೀಯ ಅಧ್ಯಯನ ವರದಿ ಸಿ.ಎಂ. ಮುಂದಿದೆ. ಅವರು ಆದಷ್ಟು ಶೀಘ್ರ ಕೇಂದ್ರಕ್ಕೆ ವರದಿ ಕಳುಹಿಸಿ ಕುರುಬರನ್ನು ಎಸ್ಟಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಬೇಕೆಂದು ಕೋರಿದರು.

ಕುರುಬರನ್ನು ಎಸ್ಟಿಗೆ ಸೇರಿಸಲು ಆಗ್ರಹಿಸಿ ನಡೆಸಿದ ಪಾದಯಾತ್ರೆ ಎರಡು ವರ್ಷ ಪೂರೈಸಿದೆ. ಈಗಾಗಲೇ ನಮ್ಮ ಬೇಡಿಕೆ ಸಲ್ಲಿಸಲಾಗಿದೆ. ಅಖಂಡ ಕರ್ನಾಟಕದ ಕುರುಬರನ್ನು ಎಸ್ಟಿಗೆ ಸೇರಿಸಲು ಮುಂದಿನ ತಿಂಗಳೊಳಗೆ ಶಿಫಾರಸು ಮಾಡಬೇಕು. ನಾವು ಸರ್ಕಾರಕ್ಕೆ ಮುಜುಗರ ಉಂಟು ಮಾಡುವುದಿಲ್ಲ ಎಂದರು.

ಹೈದರಾಬಾದಿನ ವ್ಯಾದಿ ನಿವಾರಣಾಶ್ರಮದ ಸಾಯಿಕುಮಾರ ಬಾಬಾ, ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ, ಎಂ.ಟಿ.ಬಿ.ನಾಗರಾಜ, ಬೈರತಿ ಬಸವರಾಜ, ಶಾಸಕರಾದ ಬಿ‌.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಆರ್. ಶಂಕರ್, ನೆಹರು ಓಲೇಕಾರ್, ಅರುಣಕುಮಾರ್ ಪೂಜಾರ, ಸಂಸದ ವೈ.ದೇವೇಂದ್ರಪ್ಪ, ಕೃಷಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಿರೂಪಾಕ್ಷಪ್ಪ, ಮೈಲಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಪ್ಪ ದೇವರಗುಡ್ಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT