ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ನೀಗದ ಕುಡಿಯುವ ನೀರಿನ ಬವಣೆ

ಪೂರ್ಣಗೊಳ್ಳದ 24X7 ಯೋಜನೆ; ಸಮಸ್ಯೆಗಿಲ್ಲ ಶಾಶತ್ವ ಪರಿಹಾರ
Published 25 ಮೇ 2023, 6:55 IST
Last Updated 25 ಮೇ 2023, 6:55 IST
ಅಕ್ಷರ ಗಾತ್ರ

ಹೊಸಪೇಟೆ: ನಗರದಲ್ಲಿ ಇನ್ನೂ ಕುಡಿಯುವ ನೀರಿನ ಬವಣೆ ನೀಗಿಲ್ಲ.

ವಿಜಯನಗರ, ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯ ನಗರದಿಂದ ಅಣತಿ ದೂರದಲ್ಲೇ ಇದ್ದರೂ ನಗರದ ಜನ ಕುಡಿಯುವ ನೀರಿಗೆ ಪರದಾಟ ನಡೆಸಬೇಕಾದ ಪರಿಸ್ಥಿತಿ ಇದೆ. ನಗರದ ಹೃದಯ ಭಾಗದಲ್ಲಿರುವ ಎಂಟನೇ ವಾರ್ಡ್‌ನಲ್ಲಿ (ಸಿದ್ದಲಿಂಗಪ್ಪ ಚೌಕಿ ಪ್ರದೇಶ) ಜನ ಕುಡಿವ ನೀರಿಗಾಗಿ ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ. ನಗರಸಭೆಯು ಸಮಸ್ಯೆ ಪರಿಹಾರಕ್ಕಾಗಿ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದೆ. ಆದರೆ, ವಿಪರೀತ ಬಿಸಿಲು ಇರುವುದರಿಂದ ಸಹಜವಾಗಿಯೇ ಹೆಚ್ಚಿಗೆ ನೀರಿನ ಬೇಡಿಕೆ ಇರುವುದರಿಂದ ಜನರ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಕೈಮೀರಿ ಹೋಗಿರುವುದರಿಂದ ನಗರಸಭೆಯು ಎರಡು ಕೊಳವೆ ಬಾವಿಗಳನ್ನು ಕೊರೆಸಲು ಮುಂದಾಗಿದೆ. ಆದರೆ, ಇದು ಸಮಸ್ಯೆಗೆ ತಾತ್ಕಾಲಿಕವಾದ ಪರಿಹಾರವೇ ಹೊರತು ಶಾಶ್ವತವಾದುದ್ದಲ್ಲ ಎನ್ನುತ್ತಾರೆ ಸ್ಥಳೀಯರು.

‘ಸಿದ್ದಲಿಂಗಪ್ಪ ಚೌಕಿಯಲ್ಲಿ ಬಹಳ ವರ್ಷಗಳಿಂದ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುತ್ತದೆ. ಪ್ರತಿ ವರ್ಷ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಾರೆ. ಅದರ ಬದಲು ಸಮಸ್ಯೆಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳುತ್ತಿಲ್ಲ. ಪ್ರತಿ ಸಲ ಬೇಸಿಗೆಯಲ್ಲಿ ಅನೇಕ ಭರವಸೆಗಳನ್ನು ಕೊಡಲಾಗುತ್ತದೆ. ಆದರೆ, ಅದ್ಯಾವುದೂ ಜಾರಿಗೆ ಬರುವುದಿಲ್ಲ’ ಎಂದು ಸ್ಥಳೀಯ ನಿವಾಸಿ ಹುಲುಗಪ್ಪ ಹೇಳಿದರು.

ನಗರದ ಬಳ್ಳಾರಿ ರಸ್ತೆಯ ಶಿರಸಿನಕಲ್ಲು, ಹಂಪಿ ರಸ್ತೆಯಲ್ಲೂ ಇದೇ ರೀತಿಯ ಸಮಸ್ಯೆ ಇದೆ. ಅಲ್ಲೂ ಕೂಡ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಬೇಸಿಗೆ ಶುರುವಾದ ಬಳಿಕ ನಗರದಲ್ಲಿ ಒಟ್ಟು ಎಂಟು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ತಲೆದೋರಿತ್ತು. ಈಗಲೂ ಹೆಚ್ಚು ಕಮ್ಮಿ ಅದೇ ರೀತಿಯ ಪರಿಸ್ಥಿತಿ ಇದೆ.

24X7 ಯೋಜನೆಗೆ ಗ್ರಹಣ:

ನಗರದಲ್ಲಿ 2014–15ನೇ ಸಾಲಿನಲ್ಲಿ 24X7 ಕುಡಿಯುವ ನೀರಿನ ಯೋಜನೆ ಆರಂಭಗೊಂಡಿತ್ತು. ಆದರೆ, ಕುಂಟುತ್ತ ಏಳುತ್ತ ಒಂಬತ್ತು ವರ್ಷ ಗತಿಸಿದರೂ ಯೋಜನೆ ಪೂರ್ಣಗೊಂಡಿಲ್ಲ. ಕೆಲ ತಿಂಗಳ ಹಿಂದೆ ನಗರದ ರಾಣಿಪೇಟೆಯಲ್ಲಿ ಅಶುದ್ಧ ಕುಡಿಯುವ ನೀರು ಸೇವನೆಯಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂಬ ಆರೋಪಗಳು ಕೇಳಿ ಬಂದವು. ಇದಕ್ಕೆ ಅವೈಜ್ಞಾನಿಕ ಪೈಪ್‌ಲೈನ್‌ ಅಳವಡಿಕೆಯೇ ಕಾರಣ ಎಂದು ಸ್ವತಃ ನಗರಸಭೆಯ ಅಧಿಕಾರಿಗಳು, ಜನಪ್ರತಿನಿಧಿಗಳೇ ಹೇಳಿದ್ದರು.

ಘಟನೆ ನಡೆದು ಐದಾರೂ ತಿಂಗಳಾದರೂ ರಾಣಿಪೇಟೆ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ಸತತವಾಗಿ ಅಲ್ಲಿ ನೆಲ ಅಗೆದು ಒಳಚರಂಡಿ, ಕುಡಿಯುವ ನೀರಿನ ಪೈಪ್‌ಲೈನ್‌ ದುರಸ್ತಿ ಮಾಡಲಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಅಷ್ಟರೊಳಗೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಕುಡಿವ ನೀರಿಗೆ ಇನ್ನಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಟ್ಯಾಂಕರ್‌ ನೀರಿಗಾಗಿ ಕಾದು ಕೂರಬೇಕಾಗುತ್ತದೆ ಎನ್ನುವುದು ಸ್ಥಳೀಯರ ಗೋಳು.

‘24X7 ಕುಡಿಯುವ ನೀರಿನ ಕಾಮಗಾರಿ ಏಳೆಂಟು ವಾರ್ಡ್‌ಗಳಲ್ಲಿ ಅವೈಜ್ಞಾನಿಕವಾಗಿದೆ. ಹಂತ ಹಂತವಾಗಿ ಅದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ರಾಣಿಪೇಟೆಯಲ್ಲಿ ಬಹುತೇಕ ಕೆಲಸ ಪೂರ್ಣಗೊಂಡಿದೆ. ಇನ್ನುಳಿದ ವಾರ್ಡ್‌ಗಳಲ್ಲೂ ಶೀಘ್ರದಲ್ಲೇ ಕೆಲಸ ಪೂರ್ಣಗೊಳ್ಳಲಿದೆ. ಎಲ್ಲರಿಗೂ ಶುದ್ಧ ಕುಡಿಯುವ ನೀರು ಕೊಡಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಮನೋಹರ್‌ ನಾಗರಾಜ್‌ ತಿಳಿಸಿದರು.

‘ನಗರಸಭೆ ಶುದ್ಧ ಕುಡಿವ ನೀರು ಪೂರೈಸಲಾಗದ ಕಾರಣ ಜನ ಕುಡಿಯುವ ನೀರಿನ ಘಟಕಗಳಲ್ಲಿ ಹಣ ತೆತ್ತು ಖರೀದಿಸುತ್ತಿದ್ದಾರೆ. ಸಾರ್ವಜನಿಕರು ತೆರಿಗೆ ಪಾವತಿಸಿದರೂ ಕನಿಷ್ಠ ಕುಡಿಯುವ ನೀರು ಕೊಡಲು ಆಗುತ್ತಿಲ್ಲ. ಈ ವಿಷಯದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಗಂಭೀರವಾಗಿಲ್ಲ. ಜನರ ನೋವು ಅರ್ಥವಾಗುತ್ತಿಲ್ಲ’ ಎಂದು ಹಂಪಿ ರಸ್ತೆಯ ಗಾಳೆಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT