ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಕೋವಿಡ್‌ ಮರೆತು ಪರೀಕ್ಷೆ ಬರೆದರು

ಹುರುಪಿನಿಂದ ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳು; ಎಲ್ಲೆಡೆ ಅಚ್ಚುಕಟ್ಟು ಪರೀಕ್ಷೆ
Last Updated 19 ಜುಲೈ 2021, 11:50 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕೊರೊನಾ ಮೂರನೇ ಅಲೆಯ ಕರಿಛಾಯೆಯ ನಡುವೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದರು.

ವಿದ್ಯಾರ್ಥಿಗಳು ಯಾವುದೇ ರೀತಿಯ ಅಳುಕಿಲ್ಲದೇ ನಿಗದಿತ ಅವಧಿಗೂ ಮುನ್ನವೇ ಪರೀಕ್ಷಾ ಕೇಂದ್ರಗಳಿಗೆ ಬಂದಿದ್ದರು. ಎಲ್ಲರ ಮುಖದಲ್ಲಿ ಮಂದಹಾಸ, ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು. ಒಂದರ್ಥದಲ್ಲಿ ಅವರೆಲ್ಲರೂ ಕೊರೊನಾ ಭಯ ಬದಿಗಿರಿಸಿ ಕೇಂದ್ರಗಳಿಗೆ ಬಂದಿದ್ದರು.

ನಗರದ ಮುನ್ಸಿಪಲ್‌ ಶಾಲೆ, ಸರ್ದಾರ್‌ ಪಟೇಲ್‌ ಪ್ರೌಢಶಾಲೆ, ದೀಪಾಯನ ಶಾಲೆ ಸೇರಿದಂತೆ ಎಲ್ಲ ಶಾಲೆಗಳ ಮೈದಾನದಲ್ಲಿ ವಿದ್ಯಾರ್ಥಿಗಳು ಅಂತರ ಕಾಯ್ದುಕೊಂಡು ನಿಲ್ಲುವುದಕ್ಕೆ ಮಾರ್ಕಿಂಗ್‌ ಮಾಡಲಾಗಿತ್ತು. ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಿಂದ ಬಂದಿದ್ದ ವಿದ್ಯಾರ್ಥಿಗಳು ಮಾರ್ಕಿಂಗ್‌ ಮಾಡಿರುವ ಜಾಗದಲ್ಲಿ ಸಾಲಲ್ಲಿ ನಿಂತುಕೊಂಡು ಒಬ್ಬೊಬ್ಬರಾಗಿ ಕೇಂದ್ರದೊಳಗೆ ತೆರಳಿದರು.

ಬಹುತೇಕರು ಮಾಸ್ಕ್‌ ಧರಿಸಿಕೊಂಡೇ ಕೇಂದ್ರಗಳಿಗೆ ಬಂದಿದ್ದರು. ಎಲ್ಲರೂ ಥರ್ಮಲ್‌ ಸ್ಕ್ರೀನಿಂಗ್‌ ಒಳಪಟ್ಟು, ಸ್ಯಾನಿಟೈಸರ್‌ನಿಂದ ಕೈಸ್ವಚ್ಛ ಮಾಡಿಕೊಂಡು ಒಳಪ್ರವೇಶಿಸಿದರು. ಒಬ್ಬರಾದ ನಂತರ ಒಬ್ಬರನ್ನು ಕೇಂದ್ರದೊಳಗೆ ಬಿಟ್ಟಿದ್ದರಿಂದ ಎಲ್ಲೂ ನೂಕು ನುಗ್ಗಲು ಉಂಟಾಗಲಿಲ್ಲ. ಒಬ್ಬೊಬ್ಬರೇ ಒಳಗೆ ಬಂದು, ಪರೀಕ್ಷಾ ಕೊಠಡಿ ಸಂಖ್ಯೆ ಖಚಿತಪಡಿಸಿಕೊಂಡು ತೆರಳಿದರು.

ಕೆಲವು ವಿದ್ಯಾರ್ಥಿಗಳೊಂದಿಗೆ ಅವರು ಪೋಷಕರು ಬಂದಿದ್ದರು. ಕೊನೆಯ ಕ್ಷಣದವರೆಗೆ ಅವರಿಗೆ ಧೈರ್ಯ ತುಂಬಿ ಕೇಂದ್ರದೊಳಗೆ ಬಿಟ್ಟು ಕಳುಹಿಸಿದರು. ಕೇಂದ್ರದ ಒಳ ಹಾಗೂ ಹೊರಗೆ ಅನಗತ್ಯವಾಗಿ ಯಾರಿಗೂ ನಿಲ್ಲಲು ಅವಕಾಶ ಕಲ್ಪಿಸಿರಲಿಲ್ಲ. ಎಲ್ಲ ಕೇಂದ್ರಗಳ ಹೊರಭಾಗದಲ್ಲಿ ಪೊಲೀಸ್‌, ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗಷ್ಟೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಕೊಠಡಿ ಒಳ ಹಾಗೂ ಕೇಂದ್ರದ ಹೊರಭಾಗದಲ್ಲಿ ಯಾರಿಗೂ ನಿಲ್ಲಲು ಅವಕಾಶ ಕಲ್ಪಿಸದ ಕಾರಣ ವಿದ್ಯಾರ್ಥಿಗಳು ಶಾಂತ ವಾತಾವರಣದಲ್ಲಿ ಪರೀಕ್ಷೆ ಬರೆದರು. ಕೆಲ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಮಾಸ್ಕ್‌, ಬಿಸ್ಕತ್‌ ಹಾಗೂ ನೀರಿನ ಬಾಟಲ್‌ ವಿತರಿಸಲಾಯಿತು.

ಪರೀಕ್ಷೆ ಮುಗಿದ ನಂತರವೂ ವಿದ್ಯಾರ್ಥಿಗಳು ಶಿಸ್ತಿನಿಂದ ಹೊರಬಂದರು. ಅಲ್ಲಲ್ಲಿ ಕೆಲವು ವಿದ್ಯಾರ್ಥಿಗಳು ಗುಂಪು ಗೂಡಿದರು. ಆದರೆ, ಅಲ್ಲಿದ್ದ ಸಿಬ್ಬಂದಿ ಅವರನ್ನು ಅಂತರ ಕಾಯ್ದುಕೊಂಡು ಹೋಗುವಂತೆ ಸೂಚಿಸಿದರು. ಮೊದಲ ದಿನ ಪರೀಕ್ಷೆ ಸುಸೂತ್ರವಾಗಿ ಜರುಗಿತು. ಎರಡನೇ ಪತ್ರಿಕೆ ಬುಧವಾರ (ಜು.21) ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT