ಕೂಡ್ಲಿಗಿ: ಸೋಮವಾರ ಆರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ಕೊಠಡಿಯೊಂದರಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ವಿದ್ಯಾರ್ಥಿಗಳು ಕತ್ತಲಲ್ಲಿಯೇ ಪರೀಕ್ಷೆ ಬರೆದಿದ್ದಾರೆ.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿಯೊಂದನ್ನು ಎರಡು ಭಾಗಗಳನ್ನಾಗಿ ಮಾಡಿದ್ದರು. ಅದರಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಹೊರಗೆ ಮೋಡ ಕವಿದ ವಾತಾವರಣ ಇದ್ದುದ್ದರಿಂದ ಕೊಠಡಿಯಲ್ಲಿ ಬೆಳಕಿನ ಅಭಾವವಿತ್ತು. ಅಲ್ಲದೆ ವಿದ್ಯುತ್ ಸಂಪರ್ಕ ಸಹ ಇರಲಿಲ್ಲ.
ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಗಳ ಪರಿಶೀಲನೆಗೆಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಭೇಟಿ ನೀಡಿದಾಗ ವಿದ್ಯಾರ್ಥಿಗಳು ಕತ್ತಲಲ್ಲಿ ಪರೀಕ್ಷೆ ಬರೆಯುತ್ತಿರುವುದನ್ನು ಕಂಡು, ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತ, ‘ಈ ರೀತಿ ಕತ್ತಲು ಇದ್ದರೆ ವಿದ್ಯಾರ್ಥಿಗಳು ಹೇಗೆ ಪರೀಕ್ಷೆ ಬರೆಯಬೇಕು’ ಎಂದು ಪರೀಕ್ಷಾ ಮೇಲ್ವಿಚಾರಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು.
‘ಎಲ್ಲಾ ಕೊಠಡಿಗಳಲ್ಲಿ ವಿದ್ಯುತ್ ಸಂಪರ್ಕ ಇದೆ. ಆದರೆ ಈ ಕೊಠಡಿಯಲ್ಲಿ ಮಾತ್ರ ಇಲ್ಲ’ ಎಂದು ಪರೀಕ್ಷಾ ಮೇಲ್ವಿಚಾರಕ ಎಂ. ಕೊಟ್ರೇಶ್ ಹೇಳಿದರು.
ಪರೀಕ್ಷಾ ಸಿದ್ದತೆಗಳನ್ನು ಕೈಗೊಳ್ಳುವಾಗ ಇಂತಹ ದೋಷಗಳನ್ನು ಸರಿಪಡಿಸಿಕೊಳ್ಳಬೇಕು. ಇನ್ನು ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಹಶೀಲ್ದಾರ್ ಟಿ. ಜಗದೀಶ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಜಿ.ಎಂ. ಬಸಣ್ಣ, ಸಮೂಹ ಸಂಪನ್ಮೂಲ ಅಧಿಕಾರಿ ಟಿ. ಶರಣಪ್ಪ, ಎಸ್. ಸಿದ್ದಾರಾಧ್ಯ, ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.