ಶನಿವಾರ, ಅಕ್ಟೋಬರ್ 23, 2021
24 °C

27ರ ಭಾರತ ಬಂದ್‌ಗೆ ಬೆಂಬಲ: ‘ಸಂಯುಕ್ತ ಹೋರಾಟ ಕರ್ನಾಟಕ’ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ‘ದೇಶದ 500ಕ್ಕೂ ಹೆಚ್ಚು ಸಂಘಟನೆಗಳನ್ನು ಒಳಗೊಂಡ ಜಂಟಿ ಹೋರಾಟ ಸಮಿತಿಯು ಸೆ. 27ರಂದು ಕರೆ ಕೊಟ್ಟಿರುವ ಭಾರತ ಬಂದ್‌ಗೆ ಸಂಪೂರ್ಣ ಬೆಂಬಲ ಇದೆ. ಆ ದಿನ ವಿಜಯನಗರ ಜಿಲ್ಲೆ ಕೂಡ ಪೂರ್ಣ ಪ್ರಮಾಣದಲ್ಲಿ ಬಂದ್‌ ಮಾಡಲಾಗುವುದು’ ಎಂದು ‘ಸಂಯುಕ್ತ ಹೋರಾಟ ಕರ್ನಾಟಕ’ ಸಂಘಟನೆಯ ಮುಖಂಡ ಸಣ್ಣಕ್ಕಿ ರುದ್ರಪ್ಪ ತಿಳಿಸಿದರು.

ಜಿಲ್ಲೆಯ 15 ಸಂಘಟನೆಗಳು ‘ಸಂಯುಕ್ತ ಹೋರಾಟ ಕರ್ನಾಟಕ’ ಸಂಘಟನೆ ರಚಿಸಿಕೊಂಡಿವೆ. ಸೋಮವಾರ ನಗರದ ರೈತ ಭವನದಲ್ಲಿ ಕರೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡ ಸಣ್ಣಕ್ಕಿ ರುದ್ರಪ್ಪ, ‘ಏಳು ವರ್ಷಗಳ ಕೇಂದ್ರದ ಬಿಜೆಪಿ ಸರ್ಕಾರದ ದುರಾಡಳಿತದಿಂದ ರೈತರು, ಕಾರ್ಮಿಕರು ಸೇರಿದಂತೆ ಎಲ್ಲರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಬದುಕುವ ಹಕ್ಕಿಗಾಗಿ ಈ ಬಂದ್‌ಗೆ ಕರೆ ಕೊಡಲಾಗಿದೆ. ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ದೇಶ ಉಳಿಸುವ ಸಂಕಲ್ಪ ಮಾಡಬೇಕು’ ಎಂದು ಮನವಿ ಮಾಡಿದರು.

‘ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ನೂರಾರು ರೈತರು ನವದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಹತ್ತು ತಿಂಗಳಿಂದ ಸತತ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಒಗ್ಗಟ್ಟಿನ ಬಂದ್ ಮೂಲಕ ಸರ್ಕಾರವನ್ನು ನಿದ್ರೆಯಿಂದ ಬಡಿದೆಬ್ಬಿಸಬೇಕು’ ಎಂದು ಹೇಳಿದರು.

ಮುಖಂಡ ಆರ್‌. ಭಾಸ್ಕರ್‌ ರೆಡ್ಡಿ ಮಾತನಾಡಿ, ‘ಕೃಷಿ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದು ಕಾರ್ಪೊರೇಟ್‌ ಕಂಪೆನಿಗಳಿಗೆ ಮಣೆ ಹಾಕಲಾಗಿದೆ. ಈ ಕಾಯ್ದೆಗಳನ್ನು ವಾಪಸ್‌ ಪಡೆಯುವವರೆಗೆ ಹೋರಾಟ ಮುಂದುವರೆಯಲಿದೆ. ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಜನ ಹಲವು ದಿನ ಮನೆಯಲ್ಲಿ ಕಳೆದಿದ್ದಾರೆ. ಜನರಿಗಾಗಿ ಕರೆ ಕೊಟ್ಟಿರುವ ಒಂದು ದಿನದ ಬಂದ್‌ನಿಂದ ಯಾರಿಗೂ ತೊಂದರೆ ಆಗುವುದಿಲ್ಲ. ಸ್ವತಃ ಜನರೇ ಸ್ವಯಂಪ್ರೇರಣೆಯಿಂದ ಪಾಲ್ಗೊಂಡು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

‘ಕೃಷಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಅನೇಕ ಜನ ರೈತರು ಜೀವ ಕಳೆದುಕೊಂಡಿದ್ದಾರೆ. ತಪ್ಪು ಕೃಷಿ ನೀತಿಗಳು, ಬೆಳೆಗೆ ಸೂಕ್ತ ಬೆಂಬಲ ಬೆಲೆ ಸಿಗದ ಕಾರಣ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಿದ್ದರೂ ಕೇಂದ್ರ ಹಠಮಾರಿ ಧೋರಣೆ ಅನುಸರಿಸುತ್ತಿದೆ’ ಎಂದು ಮುಖಂಡ ರಾಮಚಂದ್ರಗೌಡ ಟೀಕಿಸಿದರು.

ಮುಖಂಡ ಮರಡಿ ಜಂಬಯ್ಯ ನಾಯಕ, ‘ಭಾರತ ಬಂದ್‌ ಜನರ ಬಂದ್‌ ಆಗಬೇಕು. ದೇಶದ ಜನರ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟವಿದು. ಅನ್ನ ಬೆಳೆವ ರೈತರು ಕಷ್ಟದಲ್ಲಿದ್ದಾರೆ. ಅನ್ನ ತಿನ್ನುವವರು ಅವರ ಬೆಂಬಲಕ್ಕೆ ನಿಲ್ಲಬೇಕು’ ಎಂದು ಹೇಳಿದರು.

ಮುಖಂಡರಾದ ಮೊಹಮ್ಮದ್‌ ಇಮಾಮ್‌ ನಿಯಾಜಿ, ಕೆ. ನಾಗರತ್ನಮ್ಮ, ಎನ್‌. ಯಲ್ಲಾಲಿಂಗ, ತಳವಾರ ನಾಗರಾಜ, ಗೌಸಿಯಾ ಖಾನ್‌, ಘಂಟೆ ಸೋಮಶೇಖರ್‌, ಕೆರೆ ಹನುಮಪ್ಪ, ರೇವಣಸಿದ್ದಪ್ಪ, ಯಲ್ಲೇಶ್‌ ರುದ್ರಪ್ಪ, ಹೇಮರೆಡ್ಡಿ ಇದ್ದರು.

***

ಜನರ ತೆರಿಗೆ ಹಣದಿಂದ ಈ ದೇಶವನ್ನು ಕಟ್ಟಲಾಗಿದೆ. ಆದರೆ, ಅದನ್ನು ಬಿಜೆಪಿ ಮಾರಾಟ ಮಾಡುತ್ತಿದೆ. ಬಿಜೆಪಿ ಜತೆಜತೆಗೆ ಕಾರ್ಪೊರೇಟ್‌ ಕಂಪನಿಗಳ ವಿರುದ್ಧವೂ ಹೋರಾಟ ನಡೆಸಲಾಗುವುದು.

–ಮರಡಿ ಜಂಬಯ್ಯ ನಾಯಕ, ಮುಖಂಡ, ಸಂಯುಕ್ತ ಹೋರಾಟ ಕರ್ನಾಟಕ

***

‘ವಿಜಯನಗರದಲ್ಲೂ ದುರಾಡಳಿತ’

‘ವಿಜಯನಗರದಲ್ಲೂ ದುರಾಡಳಿತ ಮುಂದುವರೆದಿದೆ. ಜನಸಾಮಾನ್ಯರು, ರೈತ ವಿರೋಧಿ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಐದರಿಂದ ಆರು ಲಕ್ಷ ಕಬ್ಬು ಬೆಳೆಗಾರರಿದ್ದಾರೆ. ಆದರೆ, ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ಮುಚ್ಚಿಸಿರುವುದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಬಹಳ ಕಡಿಮೆ ಬೆಲೆಗೆ ಅನ್ಯ ಜಿಲ್ಲೆಗಳಿಗೆ ಕಬ್ಬು ಸಾಗಿಸುತ್ತಿದ್ದಾರೆ’ ಎಂದು ಮುಖಂಡ ರಾಮಚಂದ್ರಗೌಡ ಆರೋಪಿಸಿದರು.

‘ಹೊಸಪೇಟೆ ನಗರಸಭೆಯನ್ನು ಮಹಾನಗರ ಪಾಲಿಕೆಗೆ ಮೇಲ್ದರ್ಜೆಗೇರಿಸುವ ಪ್ರಸ್ತಾವಕ್ಕೆ ತಮ್ಮ ವಿರೋಧವಿದೆ. ರೈತರ ಫಲವತ್ತಾದ ಕೃಷಿ ಜಮೀನಿನಲ್ಲಿ ರಿಯಲ್‌ ಎಸ್ಟೇಟ್‌ ಆರಂಭಿಸುವ ಹುನ್ನಾರ ಇದರಲ್ಲಿದೆ. ಈಗಿರುವ ನಗರಸಭೆಯಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಜನರಿಗೆ ಫಾರಂ 3, ಮ್ಯುಟೇಶನ್‌ ಸೇರಿದಂತೆ ಯಾವುದೇ ಕೆಲಸಗಳು ಸಕಾಲಕ್ಕೆ ಆಗುತ್ತಿಲ್ಲ. ಮೊದಲು ಇದನ್ನು ಸರಿಪಡಿಸಲಿ’ ಎಂದು ಹಕ್ಕೊತ್ತಾಯ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು