ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ| ಟಿ.ಬಿ. ಬೋರ್ಡ್‌ ಈಸ್ಟ್ ಇಂಡಿಯಾ ಕಂಪನಿಯಂತೆ: ಆನಂದ್‌ ಸಿಂಗ್‌

ಬಡ ಜನರಿಗೆ ಪಟ್ಟಾ ಕೊಡಿಸಲು ಬರುವ ದಿನಗಳಲ್ಲಿ ಹೋರಾ: ಮಾಜಿಸಚಿವ ಆನಂದ್‌ ಸಿಂಗ್
Published 25 ಮೇ 2023, 16:23 IST
Last Updated 25 ಮೇ 2023, 16:23 IST
ಅಕ್ಷರ ಗಾತ್ರ

ಹೊಸಪೇಟೆ: ‘ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ (ಟಿ.ಬಿ. ಬೋರ್ಡ್‌) ಅಧಿಕಾರಿಗಳು ‘ಈಸ್ಟ್‌ ಇಂಡಿಯಾ ಕಂಪನಿಯಂತೆ ವರ್ತಿಸುತ್ತಿದ್ದಾರೆ. ಇದೇ ರೀತಿ ಧೋರಣೆ ತಾಳಿದರೆ ಅವರ ವಿರುದ್ಧ ಹೋರಾಟ ನಡೆಸಲಾಗುವುದು. ಟಿ.ಬಿ. ಡ್ಯಾಂ ಪ್ರದೇಶದಲ್ಲಿ ನೆಲೆಸಿರುವ ಬಡಜನರಿಗೆ ಪಟ್ಟಾ ಕೊಡಿಸಲು ಶ್ರಮಿಸುವೆ’ ಎಂದು ಮಾಜಿಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಎರಡನೇ ಬಾರಿಗೆ ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ತಾಲ್ಲೂಕಿನ ಕಮಲಾಪುರ ಹಾಗೂ ನಗರದ ಟಿ.ಬಿ. ಡ್ಯಾಂ ಪ್ರದೇಶದ ಸುಮಾರು 70 ಎಕರೆ ಜಮೀನಿನಲ್ಲಿ ವಾಸವಾಗಿರುವ ಕುಟುಂಬಗಳಿಗೆ ಪಟ್ಟಾ ನೀಡಲು ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಜನರಿಗೆ ನೀಡಿದ್ದ ಆಶ್ವಾಸನೆ ಈಡೇರುವ ಭರವಸೆ ಇದೆ. ಒಂದುವೇಳೆ ಸಮಸ್ಯೆ ಬಗೆಹರಿಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಬೋರ್ಡ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ ಅವರು ಈ ಭಾಗದ ಜನರಿಗೆ ಪಟ್ಟಾ ನೀಡುವ ಭರವಸೆ ನೀಡಿದ್ದಾರೆ. ಶೇ 99ರಷ್ಟು ಕೆಲಸ ಪೂರ್ಣಗೊಂಡಿರುವುದಾಗಿ ತಿಳಿಸಿದ್ದಾರೆ. ಆದರೆ, ಟಿ.ಬಿ ಬೋರ್ಡ್ ಅಧಿಕಾರಿಗಳು ಹಾದಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು. ಜೊತೆಗೆ ದೆಹಲಿಗೆ ತೆರಳಿ ಕೇಂದ್ರ ಸಚಿವರನ್ನು ಭೇಟಿಯಾಗಿ ಸಮಸ್ಯೆಗೆ ಅಂತ್ಯ ಹಾಡಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.

ಟಿ.ಬಿ ಬೋರ್ಡ್ ಅಧಿಕಾರಿಗಳು ವಾಣಿಜ್ಯ, ವ್ಯಾಪಾರ ನಡೆಸಲು ಹೊರಟಿದ್ದಾರೆ. ಡ್ಯಾಂ ಕಟ್ಟುವ ಸಂದರ್ಭದಲ್ಲಿ ಇಲ್ಲಿನ ಸ್ಥಳವನ್ನು ಉಪಯೋಗಿಸಬಹುದು ಎಂದು ತಿಳಿಸಲಾಗಿತ್ತು. ಆದರೆ, ಬೋರ್ಡ್ ಅಧಿಕಾರಿಗಳು ಬೋರ್ಡ್‍ನ ಮೂಲ ಉದ್ದೇಶವನ್ನು ಮರೆತು ಈಸ್ಟ್ ಇಂಡಿಯಾ ಕಂಪನಿಯಂತೆ ವರ್ತಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಬಡಜನರ ಬಗ್ಗೆ ಕಾಳಜಿ ಇಲ್ಲದ ಟಿ.ಬಿ. ಬೋರ್ಡ್, ಆಂಧ್ರದವರ ನಿಯಂತ್ರಣದಲ್ಲಿದೆ. ಇಲ್ಲಿನ ನೆಲ, ಜಲ, ಸಂಪನ್ಮೂಲ ಬಳಕೆ ಮಾಡಿಕೊಂಡು ದೌರ್ಜನ್ಯ ನಡೆಸಲು ಮುಂದಾಗಿದೆ. ಖುದ್ದು ಸಚಿವನಾಗಿದ್ದ ಸಂದರ್ಭದಲ್ಲಿ ನಾಲ್ಕೈದು ಬಾರಿ ಸಮಸ್ಯೆ ಬಗ್ಗೆ ಮಾತನಾಡಲು ಆಂಧ್ರಮೂಲದ ಬೋರ್ಡ್ ಸದಸ್ಯರೊಬ್ಬರಿಗೆ ಕರೆ ಮಾಡಿದರೂ ಸ್ಪಂದಿಸಲಿಲ್ಲ ಎಂದು ಆರೋಪಿಸಿದರು.

ಕಳೆದ 15 ವರ್ಷಗಳಿಂದ ಈ ಭಾಗದ ಜನಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿರುವೆ. ಚುನಾವಣೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಈ ಭಾಗದ ಜನರ ಸಮಸ್ಯೆಗೆ ಸದಾ ಧ್ವನಿ ಎತ್ತಲು ಸಿದ್ಧ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಧರ್ಮೇಂದ್ರ ಸಿಂಗ್, ಯುವ ಮುಖಂಡ ಸಿದ್ಧಾರ್ಥ ಸಿಂಗ್, ನಗರಸಭೆ ಸದಸ್ಯ ಮಂಜುನಾಥ ಇತರರಿದ್ದರು.

‘ಐಎಸ್‌ಆರ್‌ನಲ್ಲಿ ಏನಿದೆ ಏನಿಲ್ಲ ಎನ್ನುವುದು ಗವಿಯಪ್ಪಗೆ ಗೊತ್ತಿಲ್ಲ’ ‘ಐಎಸ್‍ಆರ್ ಸಕ್ಕರೆ ಕಾರ್ಖಾನೆ ಪುನಃ ಆರಂಭಿಸುವುದಾಗಿ ಶಾಸಕ ಎಚ್‌.ಆರ್‌. ಗವಿಯಪ್ಪ ಹೇಳಿದ್ದಾರೆ. ಆದರೆ ಅಲ್ಲಿ ಏನಿದೆ ಏನಿಲ್ಲ ಎಂಬುದು ಅವರು ನೋಡಿದ್ದಾರೆ ಇಲ್ಲವೋ ಗೊತ್ತಿಲ್ಲ. ಕಾರ್ಖಾನೆ ಮತ್ತೆ ಆರಂಭಿಸುವುದರ ಬಗ್ಗೆ ಈ ಹಿಂದೆ ಕೆಲವರು ವಿರೋಧಿಸಿದ್ದರು. ದೂಳು ಹೇಗೆ ತಡೆಹಿಡಿಯುತ್ತಾರೆ ಎಂಬುದು ನೋಡಬೇಕು’ ಎಂದು ಆನಂದ್‌ ಸಿಂಗ್‌ ಹೇಳಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ‘ಹಂಪಿ ಶುಗರ್ಸ್‌’ ಆರಂಭಿಸಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ. ನಾನು ಹಂಪಿ ಶುಗರ್ಸ್‌ ಎನ್ನುತ್ತಿರುವೆ ಅವರು ಸಕ್ಕರೆ ಕಾರ್ಖಾನೆ ಪುನರ್‌ ಆರಂಭ ಇಲ್ಲ. ಸರ್ಕಾರದಿಂದಲೇ ಕಾರ್ಖಾನೆ ಸ್ಥಾಪಿಸುವ ವಿಚಾರಗಳನ್ನು ಹೇಳಿದ್ದಾರೆ. ಈ ಸ್ಪರ್ಧೆಯಲ್ಲಿ ಯಾರು ಮೊದಲು ಬರುತ್ತಾರೆ ಎನ್ನುವುದು ಕ್ಷೇತ್ರದ ಜನರಿಗೆ ಕುತೂಹಲವಿದೆ ಎಂದರು. ನಾನು ವಿಜಯನಗರ ಕ್ಷೇತ್ರಕ್ಕೆ ಮೀಸಲಾಗಿರುವೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದರ ಬಗ್ಗೆ ಆಸಕ್ತಿ ಇಲ್ಲ. ಒಂದುವೇಳೆ ಪಕ್ಷದಿಂದ ಏನಾದರೂ ಸೂಚನೆ ಬಂದರೆ ಸ್ಪರ್ಧಿಸುವುದಿಲ್ಲ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT